Cauvery River: ಗುಹ್ಯದಲ್ಲಿ ನಡೆದಿತ್ತಂತೆ ಕಾವೇರಿ ಜೊತೆ ಅಗಸ್ತ್ಯರ ಸಂಧಾನ: ಏನಿದು ಕಥೆ..?
ಮಡಿಕೇರಿ, ಅಕ್ಟೋಬರ್ 18: ತುಲಾಮಾಸ ಎನ್ನುವುದು ಕೊಡಗಿನವರ ಪಾಲಿಗೆ ಪವಿತ್ರ ಕಾಲವಾಗಿದ್ದು ಒಂದು ತಿಂಗಳ ಅವಧಿಯಲ್ಲಿ ಭಾಗಮಂಡಲಕ್ಕೆ ತೆರಳಿ ಕಾವೇರಿ, ಕನ್ನಿಕೆ, ಸುಜ್ಯೋತಿ ನದಿಗಳ ಸಂಗಮ ಪ್ರದೇಶದಲ್ಲಿ ಸ್ನಾನ ಮಾಡಬೇಕು. ಬಳಿಕ ಭಗಂಡೇಶ್ವರನಿಗೆ ನಮಿಸಿ ಬಳಿಕ ತಲಕಾವೇರಿಗೆ ತೆರಳಿ ಸ್ನಾನಕೊಳದಲ್ಲಿ ಮುಳಗಿ ಶಿರಕ್ಕೆ ಕಾವೇರಿ ತೀರ್ಥವನ್ನು ಪ್ರೋಕ್ಷಣೆ ಮಾಡಿಸಿಕೊಂಡು ಕಾವೇರಿ ತಾಯಿಯ ದರ್ಶನ ಮಾಡಿಕೊಂಡರೆ ಜೀವನ ಪಾವನವಾಗುತ್ತದೆ ಎಂಬ ನಂಬಿಕೆಯಿದೆ. ಹೀಗಾಗಿ ಭಕ್ತರು ಈ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದು ಮಾಮೂಲಿಯಾಗಿದೆ.
ಇನ್ನು ಕಾವೇರಿ ನದಿ ಹರಿದ ಕಡೆಗಳಲ್ಲಿ ಪವಿತ್ರ ಕ್ಷೇತ್ರಗಳನ್ನು ಸೃಷ್ಟಿಸಿರುವುದು ನಮಗೆಲ್ಲರಿಗೂ ತಿಳಿದ ವಿಚಾರವೇ.. ಅದಕ್ಕೂ ಮುನ್ನ ಪುರಾಣದ ಕಥೆಯಲ್ಲಿ ಬರುವಂತೆ ಪತಿ ಅಗಸ್ತ್ಯ ಮುನಿಗಳು ನಿದ್ದೆಯಲ್ಲಿದ್ದ ಕಾವೇರಿಯನ್ನು ಏಕಾಂಗಿಯಾಗಿ ಬಿಟ್ಟು ಕನ್ನಿಕಾ ನದಿಯಲ್ಲಿ ಸ್ನಾನ ಮಾಡಲು ಹೋಗುತ್ತಾರೆ. ಆದರೆ ನಿದ್ದೆಯಿಂದ ಎಚ್ಚರಗೊಂಡ ಕಾವೇರಿ ತನ್ನ ಬಳಿ ಪತಿ ಅಗಸ್ತ್ಯ ಮುನಿಗಳು ಇಲ್ಲದೆ ಹೋಗಿದ್ದರಿಂದ ಆಕೆ ತನ್ನ ಇಚ್ಚೆಯಂತೆ ಲೋಕ ಕಲ್ಯಾಣಕ್ಕಾಗಿ ನದಿಯಾಗಿ ಹರಿದು ಹೋಗುತ್ತಾಳೆ.

ಸಂಧ್ಯಾವಂದನೆ ಮುಗಿಸಿ ಬಂದ ಅಗಸ್ತ್ಯ ಮುನಿಗಳು ಕಾವೇರಿ ನದಿಯಾಗಿ ಹರಿದು ಹೋಗುತ್ತಿರುವುದನ್ನು ಕಂಡು ಆಕೆಯ ಹಿಂದೆಯೇ ಓಡುತ್ತಾರೆ. ಕಾವೇರಿ ಮಾತ್ರ ಚೇರಂಬಾಣೆ, ಹರಿಶ್ಚಂದ್ರ, ಬಲಮುರಿ, ಬೇತ್ರ್ರಿಯ ಮೂಲಕ ರಭಸದಿಂದ ಹರಿಯುತ್ತಾ ಮುಂದೆ ಸಾಗುತ್ತಾಳೆ. ಆದರೆ ಆಕೆಯನ್ನು ನಿಲ್ಲುವಂತೆ ಕೋರುತ್ತಾ ಪತಿ ಅಗಸ್ತ್ಯಮುನಿಗಳು ಮನವೊಲಿಸುವ ಪ್ರಯತ್ನ ಮಾಡುತ್ತಾರೆ. ಅಲ್ಲದೆ ಮರಳಿನ ಲಿಂಗ ಮಾಡಿ ಪೂಜಿಸಿ ಆಕೆಯನ್ನು ನಿಲ್ಲಿಸುವ ಪ್ರಯತ್ನ ಮಾಡುತ್ತಾರೆ.
ಗುಹ್ಯದಲ್ಲಿ ಕಾವೇರಿ ಜೊತೆ ಸಂಧಾನ
ಇದ್ಯಾವುದಕ್ಕೂ ಮಣಿಯದ ಕಾವೇರಿ ಮುಂದಕ್ಕೆ ಹರಿಯ ತೊಡಗುತ್ತಾಳೆ. ಆದರೆ ಕೊಡಗಿನ ಸಿದ್ಧಾಪುರ ಬಳಿಯ ಗುಹ್ಯಕ್ಕೆ ಬರುತ್ತಿದ್ದಂತೆಯೇ ಅಗಸ್ತ್ಯ ಮಹರ್ಷಿಯು ಕಡೆಯ ಪ್ರಯತ್ನ ಎಂಬಂತೆ ಸಪ್ತ ಮಹರ್ಷಿಗಳ ಮೊರೆ ಹೋಗುತ್ತಾರೆ. ಈ ವೇಳೆ ಪ್ರತ್ಯಕ್ಷರಾದ ಮಹರ್ಷಿಗಳು ಕಾವೇರಿಯನ್ನು ನಿಲ್ಲುವಂತೆ ಕೇಳಿಕೊಳ್ಳುತ್ತಾರೆ. ಮಹರ್ಷಿಗಳ ಕೋರಿಕೆಗೆ ಮನ್ನಣೆ ನೀಡಿ ಕಾವೇರಿಯು ಗುಹ್ಯದಲ್ಲಿ ನಿಲ್ಲುತ್ತಾಳೆ. ಅಲ್ಲದೆ ಅಲ್ಲಿರುವ ಅಶ್ವತ್ಥ ಮರದ ಕೆಳಗೆ ಸಂಧಾನದ ಮಾತುಕತೆಯೂ ನಡೆಯುತ್ತದೆ.

ಈ ವೇಳೆ ಕಾವೇರಿಯು ತಾನು ಲೋಕ ಕಲ್ಯಾಣಕ್ಕೆ ಹೊರಟಿದ್ದು, ತನ್ನನ್ನು ತಡೆಯಬಾರದಾಗಿ ವಿನಂತಿಸಿಕೊಳ್ಳುತ್ತಾಳೆ. ಅಲ್ಲದೆ, ಮುಂದಕ್ಕೆ ಹರಿಯುತ್ತಾಳೆ. ಇತ್ತ ನೊಂದ ಅಗಸ್ತ್ಯ ಮಹರ್ಷಿಯು ಸಂಧಾನ ನಡೆದ ಊರಿನಲ್ಲಿ ಲಿಂಗವೊಂದನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಾರೆ. ಇದೇ ಗುಹ್ಯದ ಅಗಸ್ತ್ಯೇಶ್ವರವಾಗಿದೆ. ಸಂಧಾನ ನಡೆಸಿದ ಅಶ್ವತ್ಥ ಮರವು ಈಗಲೂ ದೇವಾಲಯದ ಬಳಿ ಇರುವ ಮರವೇ ಆಗಿದೆ ಎಂದು ಇಲ್ಲಿನವರು ನಂಬುತ್ತಾರೆ. ಇಷ್ಟಕ್ಕೂ ಗುಹ್ಯ ಯಾವುದು? ಇದರ ವಿಶೇಷತೆ ಏನು? ಎಂಬುದನ್ನು ನೋಡಿದ್ದೇ ಆದರೆ ಒಂದಷ್ಟು ಮಾಹಿತಿಗಳು ಲಭ್ಯವಾಗುತ್ತವೆ.
ಎಲ್ಲಿದೆ ಗುಹ್ಯದ ಅಗಸ್ತ್ಯೇಶ್ವರ ದೇಗುಲ?
ಇಲ್ಲಿರುವ ಅಗಸ್ತ್ಯೇಶ್ವರ ದೇವಾಲಯವು ವೀಕ್ಷಿಸಲು ಆಕರ್ಷಕವಾಗಿದ್ದು, ದೇವಾಲಯದ ಗರ್ಭ ಗುಡಿಯು ವೃತ್ತಾಕಾರದಲ್ಲಿದೆ. ಇಲ್ಲಿರುವ ಈಶ್ವರ ಲಿಂಗವು ಅಗಸ್ತ್ಯ ಮಹರ್ಷಿಯು ಪ್ರತಿಷ್ಠಾಪಿಸಿದ್ದು, ಇದು ಬಹಳ ಆಳದಲ್ಲಿದೆ. ಗರ್ಭ ಗುಡಿಯು ಎರಡು ಅಂಕಣದಲ್ಲಿ ರಚಿತವಾಗಿದೆ. ಈ ಸ್ಥಳಕ್ಕೆ ಗುಹ್ಯ ಎಂಬ ಹೆಸರು ಹೇಗೆ ಬಂತು ಎಂಬುದಕ್ಕೆ ಇಲ್ಲಿನವರು ಹಲವಾರು ಕಾರಣಗಳನ್ನು ನೀಡುತ್ತಾರೆ. ಗುಹ್ಯ ಎಂಬ ಪದಕ್ಕೆ ಗುಟ್ಟು ಎಂಬ ಅರ್ಥವಿರುವುದರಿಂದ ವಿಷ್ಣು ಗುಟ್ಟಾಗಿ ಅಡಗಿದ ಜಾಗ ಗುಹ್ಯವಾಯಿತೆಂದೂ ಕೆಲವರು ಅಭಿಪ್ರಾಯ ಪಟ್ಟರೆ, ಇನ್ನು ಕೆಲವರು ಹಿಂದಿನ ಕಾಲದಲ್ಲಿ ಇಲ್ಲಿನ ಗುಹೆಗಳಲ್ಲಿ ಋಷಿಗಳು ತಪಸ್ಸು ಮಾಡಿದ ಕಾರಣ ಈ ಹೆಸರು ಬಂದಿತೆನ್ನುತ್ತಾರೆ.
ಮತ್ತೆ ಕೆಲವರ ಅಭಿಪ್ರಾಯದ ಪ್ರಕಾರ ಕಾವೇರಿ ನದಿಯ ಆಳದಲ್ಲಿ ಹಿಂದಿನ ಕಾಲದ ದೇವಾಲಯವೊಂದು ಮುಳುಗಿ ಹೋಗಿದ್ದು, ಆ ಗುಟ್ಟು ಇನ್ನೂ ಯಾರಿಗೂ ತಿಳಿದಿಲ್ಲವೆಂದು, ಹಾಗಾಗಿ 'ಗುಹ್ಯ' ಹೆಸರು ಬಂದಿತೆನ್ನುತ್ತಾರೆ. ಅದೇನೆ ಇರಲಿ ಇಲ್ಲಿನ ಅಗಸ್ತ್ಯೇಶ್ವರ ದೇಗುಲ ಮಾತ್ರ ಸುಂದರವಾಗಿದ್ದು, ತನ್ನದೇ ಮಹತ್ವದೊಂದಿಗೆ ಭಕ್ತಾದಿಗಳನ್ನು ಸೆಳೆಯುತ್ತದೆ. ಈ ಕ್ಷೇತ್ರವು ಸಿದ್ದಾಪುರದಿಂದ ಐದು ಕಿ.ಮೀ ದೂರದಲ್ಲಿದ್ದು, ಸಿದ್ದಾಪುರದಿಂದ ವೀರಾಜಪೇಟೆ ಮಾರ್ಗವಾಗಿ ಎರಡು ಕಿ.ಮೀ ಕ್ರಮಿಸಿ ಅಲ್ಲಿಂದ ಬಲ ಭಾಗಕ್ಕಿರುವ ರಸ್ತೆಯಲ್ಲಿ ಮೂರು ಕಿ.ಮೀ ಸಾಗಿದರೆ ಗುಹ್ಯ ಗ್ರಾಮವನ್ನು ತಲುಪಬಹುದಾಗಿದೆ.












Click it and Unblock the Notifications