ಪ್ರವಾಹದ ನಡುವಲ್ಲೂ ಆ ತಾಯಿಮಗ ಬದುಕಿದ್ದು ಪವಾಡವೇ!

By: ಬಿ.ಎಂ.ಲವಕುಮಾರ
Subscribe to Oneindia Kannada

ಮಡಿಕೇರಿ, ಜುಲೈ 22: ಮಡಿಕೇರಿಯಲ್ಲೀಗ ಮಳೆಯ ರಭಸ ಕಡಿಮೆಯಾಗಿದೆ. ಪರಿಣಾಮ ಎಲ್ಲೆಂದರಲ್ಲಿ ಜಲಾವೃತವಾಗಿದ್ದ ಸ್ಥಳಗಳಿಂದ ನೀರು ಹರಿದು ಹೋಗಿದ್ದು ಜನಜೀವನ ಯಥಾಸ್ಥಿತಿಗೆ ಮರಳುತ್ತಿದೆ.

ಈ ನಡುವೆ ಸುರಿದ ಭಾರೀ ಮಳೆಗೆ ಜಿಲ್ಲೆಯಾದ್ಯಂತ ರಸ್ತೆ, ಮನೆ ಕುಸಿತ ಸಂಭವಿಸಿದ್ದು, ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಬಹಳಷ್ಟು ಕಡೆ ನದಿ ಉಕ್ಕಿ ಹರಿದ ಪರಿಣಾಮ ಆಸ್ತಿ ಪಾಸ್ತಿಗೆ ಹಾನಿಯಾಗಿದೆ. ಇದೀಗ ಮಳೆ ಕೊಡಗಿನಲ್ಲಿ ನಿಧಾನಗತಿಯಲ್ಲಿ ಸುರಿಯುತ್ತಿದ್ದು, ಭಾರೀ ಮಳೆಯಿಂದ ಕಂಗಾಲಾಗಿದ್ದ ಜನ ಚೇತರಿಸಿಕೊಳ್ಳುತ್ತಿದ್ದಾರೆ.

ಭಾಗಮಂಡಲದಲ್ಲಿ ಭಾರೀ ಮಳೆ: ಉಕ್ಕಿದ ಕಾವೇರಿ, ಜನ ಜೀವನ ಅಸ್ತವ್ಯಸ್ತ

ಮಳೆ ಸುರಿದ ಸಂದರ್ಭ ಸೋಮವಾರಪೇಟೆಯ ಮಾದಾಪುರ ಬಳಿ ತಾಯಿ ಮಗ ರಸ್ತೆಯಲ್ಲಿ ಸಾಗುತ್ತಿದ್ದಾಗ ಇದ್ದಕ್ಕಿದ್ದಂತೆ ನೀರು ಬಂದಿದ್ದು ಅವರು ಕೊಚ್ಚಿಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು ಈ ವೇಳೆ ಅದೇ ಮಾರ್ಗವಾಗಿ ತೆರಳುತ್ತಿದ್ದ ಯುವಕರ ತಂಡ ಸಮಯಪ್ರಜ್ಞೆಯಿಂದ ಅವರನ್ನು ಕಾಪಾಡಿದ್ದು, ಈಗ ಆ ಸುದ್ದಿ ಜಿಲ್ಲೆಯಾದ್ಯಂತ ಹರಿದಾಡುತ್ತಿದೆ.

ಕೊಡಗು:ಅಬ್ಬರಿಸುತ್ತಿರುವ ಪುಷ್ಯ ಮಳೆ, ಇಂದು ಶಾಲಾ ಕಾಲೇಜುಗಳಿಗೆ ರಜೆ

ಮಡಿಕೇರಿಯಿಂದ ಡಿ. ಹೆಚ್. ಲೋಕೇಶ್, ವಕೀಲ ಪಿ.ಎಂ. ಸಚಿನ್, ಡಿ.ಹೆಚ್. ಕಾರ್ತಿಕ್, ತಂಬುಕುತ್ತಿರ ವಿಠಲ, ತಂಬಕುತ್ತಿರ ಸತೀಶ್ ಎಂಬುವರು ಮಾದಾಪುರ ಮೂಲಕ ಸೂರ್ಲಬ್ಬಿಗೆ ಜೀಪಿನಲ್ಲಿ ಹೊರಟಿದ್ದರು. ಇದೇ ವೇಳೆ ಮಳೆಯೂ ಎಡೆಬಿಡದೆ ಸುರಿಯತೊಡಗಿತ್ತು. ಅಲ್ಲಿನ ನಂದಿಮೊಟ್ಟೆ ಮಾರ್ಗವಾಗಿ ಸಾವಿನ ಮನೆಗೆ ತೆರಳುತ್ತಿದ್ದಾಗಲೇ ನಂದಿಮೊಟ್ಟೆ ಬಳಿ ನೀರು ಹರಿದು ಬಂದು ಸೇತುವೆ ಮುಳುಗಡೆಯಾಯಿತು. ಅದೇ ವೇಳೆಗೆ ಅಲ್ಲಿದ್ದ ಮರವೂ ಕಿತ್ತು ಅಡ್ಡಲಾಗಿ ರಸ್ತೆಗೆ ಉರುಳಿ ಬಿದ್ದಿದೆ. ಪರಿಣಾಮ ಮುಂದೆ ಹೋಗಲಾರದೆ ಜೀಪನ್ನು ನಿಲ್ಲಿಸಿಕೊಂಡು ಏನು ಮಾಡುವುದೆಂದು ಯೋಚಿಸಲಾರಂಭಿಸಿದ್ದಾರೆ. ಅಷ್ಟರಲ್ಲೇ ನೀರಿನ ಹರಿವು ಜಾಸ್ತಿಯಾಗಿ ಪಾದಚಾರಿ ರಸ್ತೆಯ ಮೇಲೆಯೂ ನೀರು ಹರಿದಿದೆ.

ನೀರಿನಲ್ಲಿ ಸಿಲುಕಿಕೊಂಡ ತಾಯಿಮಗ

ನೀರಿನಲ್ಲಿ ಸಿಲುಕಿಕೊಂಡ ತಾಯಿಮಗ

ಅದೇ ರಸ್ತೆಯಲ್ಲಿ ಕಾರ್ಮಿಕ ಮಹಿಳೆ ಮತ್ತು ಮಗ ಬಂದಿದ್ದು, ಅವರಿಗೆ ಮುಂದೆ ಹೋಗದಂತೆ ಜೀಪಿನಲ್ಲಿದ್ದ ಮಂದಿ ಕೂಗಿ ಹೇಳಿದ್ದಾರೆ ಆದರೆ ಅದು ಮಳೆ ಗಾಳಿಗೆ ಕೇಳದ ಪರಿಣಾಮ ಅವರು ಮುಂದೆ ಸಾಗಿದರಾದರೂ ಆ ನಂತರ ರಸ್ತೆ ಕಾಣದಂತಾಗಿ ಪರದಾಡಿದ್ದಾರೆ. ಕೆಳಭಾಗ ಇಳಿಜಾರು ಪ್ರದೇಶವಾದ್ದರಿಂದ ಅನತಿ ದೂರ ಇಬ್ಬರು ಕೊಚ್ಚಿ ಹೋಗಿದ್ದಾರೆ. ಆ ಭೋರ್ಗರೆಯ ಪ್ರವಾಹದಲ್ಲಿ ಇಬ್ಬರ ಕತೆಯೂ ಮುಗಿದಂತೆ ಎಂದುಕೊಂಡು ಅಸಹಾಯಕವಾಗಿ ನೋಡುತ್ತ ನಿಂತವರಿಗೆ ಮರುಕ್ಷಣ ಅಚ್ಚರಿ ಕಾದಿದೆ. ಕೊಚ್ಚಿ ಹೋಗುತ್ತದ್ದ ಅವರಿಬ್ಬರನ್ನು ಪ್ರವಾಹದ ನಡುವೆ ಬಿದ್ದಿದ್ದ ಮರವೊಂದು ರಕ್ಷಿಸಿದೆ! ಅಡ್ಡಲಾಗಿ ಬಿದ್ದ ಮರವನ್ನು ಆಸರೆಯಾಗಿ ಹಿಡಿದಿದ್ದಾರೆ.

ಪವಾಡದಂತೆ ಬದುಕಿದರು!

ಪವಾಡದಂತೆ ಬದುಕಿದರು!

ಇದನ್ನೆಲ್ಲ ನೋಡುತ್ತಿದ್ದ ಯುವಕರು ಅವರ ರಕ್ಷಣೆಗೆ ಮುಂದಾಗಿದ್ದು, ಅದೇ ಸಂದರ್ಭ ರಫೀಕ್ ಎಂಬ ಅಸ್ಸಾಮಿ ಕಾರ್ಮಿಕ ಸೇರಿ ಮೂವರು ಬಂದಿದ್ದಾರೆ. ಅವರೊಂದಿಗೆ ಹಿಂದಿ ಭಾಷೆಯಲ್ಲಿ ಮಾತನಾಡಿ, ವಿಚಾರ ತಿಳಿಸಿ ಹಗ್ಗ ತರಲು ಹೇಳಿದ್ದಾರೆ. ಹಗ್ಗ ತಂದ ಬಳಿಕ ತಾಯಿ- ಮಗ ಇದ್ದಲ್ಲಿಗೆ ಹಗ್ಗ ಎಸೆದು ಇನ್ನೊಂದು ತುದಿಯನ್ನು ಮರಕ್ಕೆ ಕಟ್ಟಿ ಹಗ್ಗದ ಸಹಾಯದಿಂದ ಭೋರ್ಗರೆಯುತ್ತಿದ್ದ ನೀರಿನಲ್ಲೇ ತಾಯಿ - ಮಗನನ್ನು ದಡಕ್ಕೆ ಎಳೆ ತಂದು ರಕ್ಷಿಸುವಲ್ಲಿ ಪ್ರಯತ್ನಕ್ಕೆ ಕೈ ಹಾಕಿದ್ದು, ಕೊನೆಗೂ ಸುಮಾರು ಮೂರು ಗಂಟೆಗಳ ಶ್ರಮದಿಂದ ತಾಯಿ ಮಗನ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಭಾಗಮಂಡಲದಲ್ಲಿ ತಗ್ಗಿದ ನೀರು

ಭಾಗಮಂಡಲದಲ್ಲಿ ತಗ್ಗಿದ ನೀರು

ಭಾಗಮಂಡಲದಲ್ಲಿ ದಾಖಲೆಯ ಮಳೆ ಸುರಿದು ಜನಜೀವನ ಅಸ್ತವ್ಯಸ್ತವಾಗಿತ್ತಾದರೂ ಇದೀಗ ಸ್ವಲ್ಪಮಟ್ಟಿಗೆ ನೆಮ್ಮದಿಯ ವಾತಾವರಣ ಸೃಷ್ಟಿಯಾಗುತ್ತಿದೆ.
ಇನ್ನು ಹಾನಿಯಾಗಿರುವ ಬಗ್ಗೆ ನೋಡುವುದಾದರೆ ಭಾಗಮಂಡಲದ ತಾವೂರು ಗ್ರಾಮದ ಬಾರಿಕೆ ದೇವಯ್ಯ ಅವರ ಮನೆ ಸಮೀಪ ನಿರ್ಮಾಣ ಮಾಡಿದ್ದ ತಡೆಗೋಡೆ ಕುಸಿದು ಬಿದ್ದಿದೆ.
ನಾಪೊಕ್ಲು, ಗೋಣಿಕೊಪ್ಪಲು, ಶ್ರೀಮಂಗಲ, ಬಿರುನಾಣಿ ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾಗುತ್ತಿದ್ದು, ಕಳೆದೆರಡು ದಿನಗಳಲ್ಲಿ ಸುರಿದ ಮಳೆಯ ಪ್ರಮಾಣ ಕಡಿಮೆಯಾಗಿದೆ.

ತಾತ್ಕಾಲಿಕ ವ್ಯವಸ್ಥೆ

ತಾತ್ಕಾಲಿಕ ವ್ಯವಸ್ಥೆ

ಕೊಡಗು ಕೇರಳ ರಾಜ್ಯವನ್ನು ಸಂಪರ್ಕಿಸುವ ಪೆರುಂಬಾಡಿಯಲ್ಲಿ ಕೆರೆಯಿಂದ ರಸ್ತೆ ಪೂರ್ಣವಾಗಿ ಕುಸಿದಿದ್ದು ಸದ್ಯಕ್ಕೆ ಸಂಪರ್ಕ ಕಡಿತಗೊಂಡಿದೆ. ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ಭೇಟಿ ನೀಡಿ ಗಡಿ ಭಾಗದ ನಿವಾಸಿಗಳಿಗೆ ತಾತ್ಕಾಲಿಕವಾಗಿ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Heavy rain in Madikeri district create so many problems. In a miraculous incident a mothour and a child saved from a flood here.
Please Wait while comments are loading...