ಕಾಂಗ್ರೆಸ್ ತೊರೆದ ಆರ್. ಗುಂಡೂರಾವ್ ಸೋಲಿಸಿದ್ದ ಜೀವಿಜಯ!
ಮಡಿಕೇರಿ, ಮೇ 02; ಮಾಜಿ ಸಚಿವ, ಕೊಡಗು ಜಿಲ್ಲೆಯ ಕಾಂಗ್ರೆಸ್ ನಾಯಕ ಬಿ. ಎ. ಜೀವಿಜಯ ಕಾಂಗ್ರೆಸ್ ಪಕ್ಷ ತೊರೆದಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಅವರು ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಪಕ್ಷ ಡಾ. ಮಂತರ್ ಗೌಡ ಅಭ್ಯರ್ಥಿಯಾಗಿ ಘೋಷಣೆ ಮಾಡಿತ್ತು.
ಮಂಗಳವಾರ ಮಡಿಕೇರಿಯಲ್ಲಿ ಮಾತನಾಡಿದ ಬಿ. ಎ. ಜೀವಿಜಯ, "ರಾಜಕೀಯದಲ್ಲಿ ಅನೇಕ ಬಾರಿ ಎಡವಿ ತಪ್ಪು ದಾರಿಯಲ್ಲಿ ನಡೆದಿದ್ದೇನೆ. ಜನರು ಕೊಟ್ಟ ಅವಕಾಶವನ್ನು ಎಂದೂ ದುರುಪಯೋಗ ಮಾಡಿಕೊಂಡಿಲ್ಲ. ಸಕ್ರಿಯ ರಾಜಕಾರಣದಿಂದಲೇ ದೂರವಾಗಿ ರಾಜೀನಾಮೆ ಪತ್ರ ನೀಡಿದ್ದೇನೆ" ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಅವರು, "ತತ್ವ, ಸಿದ್ಧಾಂತಗಳು ಮಾಯವಾಗಿವೆ. ಈಗ ಯಾವ ಪಕ್ಷದ ಹಂಗೂ ಇಲ್ಲ. ಚುನಾವಣೆಗೆ ಬೇರೆ ಜಿಲ್ಲೆಯ ಅಭ್ಯರ್ಥಿ ಬೇಡ ಎಂದು ಹೇಳಿದ್ದೆ. ನನ್ನ ಪತ್ರಕ್ಕೆ ಕವಡೆ ಕಾಸಿನ ಕಿಮ್ಮತ್ತು ಸಿಗಲಿಲ್ಲ" ಎಂದು ಬೇಸರ ವ್ಯಕ್ತಪಡಿಸಿದರು.
ಅಭ್ಯರ್ಥಿ ವಿರುದ್ಧ ವಾಗ್ದಾಳಿ; ಮಡಿಕೇರಿ ಕಾಂಗ್ರೆಸ್ ಅಭ್ಯರ್ಥಿ ಡಾ. ಮಂತರ್ ಗೌಡ ವಿರುದ್ಧ ಬಿ. ಎ. ಜೀವಿಜಯ ವಾಗ್ದಾಳಿ ನಡೆಸಿದರು. ಮಾಜಿ ಸಚಿವ ಅರಕಲಗೊಡು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎ. ಮಂಜು ಪುತ್ರ ಮಂತರ್ ಗೌಡ ಮಡಿಕೇರಿಯಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿಸಿದ್ದಾರೆ.

"ಕಾಂಗ್ರೆಸ್ ಅಭ್ಯರ್ಥಿ ತಂದೆ ಒಂದು ಪಕ್ಷ. ಮಗ ಮತ್ತೊಂದು ಪಕ್ಷ. ಕೊಡಗಿನವರು ಇಲ್ಲಿ ಗೆಲ್ಲಬೇಕು. ಟಿಕೆಟ್ ನನಗೆ ಅಥವ ಚಂದ್ರಮೌಳಿಗೆ ಕೊಡಬೇಕು ಎಂದು ಶಿಫಾರಸು ಆಗಿತ್ತು. ಆದರೆ ನಮ್ಮ ಅಭಿಪ್ರಾಯ ಆಲಿಸದೇ ಹೊರಗಿನವರಿಗೆ ಟಿಕೆಟ್ ನೀಡಿದರು. ನಮ್ಮಂಥವರು ರಾಜಕಾರಣ ಮಾಡಲು ಸಾಧ್ಯವಿಲ್ಲ" ಎಂದು ಜೀವಿಜಯ ಹೇಳಿದರು.
ಬಿ. ಎ. ಜೀವಿಜಯ ಈ ಚುನಾವಣೆಯಲ್ಲಿ ಬಿಜೆಪಿಯ ಅಪ್ಪಚ್ಚು ರಂಜನ್‌ಗೆ ಪರೋಕ್ಷವಾಗಿ ಬೆಂಬಲ ಸೂಚಿಸಿದರು. "ಆಕಸ್ಮಿಕವಾಗಿ ಮೊನ್ನೆ ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ ಸಿಕ್ಕಿದ್ದರು. ಇದು ಕೊನೆಯ ಚುನಾವಣೆ ಎಂದು ಹೇಳಿದರು. ಬಿಜೆಪಿ ಮಾತ್ರವಲ್ಲ ಎಲ್ಲರಿಗೂ ನೀವೇ ಶಾಸಕರು ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎಂದು ಹೇಳಿದೆ. ಅವರು ಒಪ್ಪಿದರು. ಅವರಿಗೆ ಬೆಂಬಲ ಕೊಟ್ಟರೆ ತಪ್ಪೇನು?" ಎಂದು ಜೀವಿಜಯ ಪ್ರಶ್ನೆ ಮಾಡಿದರು.
1983ರ ಚುನಾವಣೆಯಲ್ಲಿ ಬಿ. ಎ. ಜೀವಿಜಯ ಜನತಾ ಪಕ್ಷದ ಅಭ್ಯರ್ಥಿಯಾಗಿದ್ದರು. ಆಗ ಅವರು ಕಾಂಗ್ರೆಸ್‌ನ ಅಂದಿನ ಮುಖ್ಯಮಂತ್ರಿ ಆರ್. ಗುಂಡೂರಾವ್ ಸೋಲಿಸಿದ್ದರು. ಜೆಡಿಎಸ್‌ನಲ್ಲಿದ್ದ ಜೀವಿಜಯ 2020ರಲ್ಲಿ ಡಿ. ಕೆ. ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.
ಕಾಂಗ್ರೆಸ್ ಟಿಕೆಟ್ ಕಗ್ಗಂಟು; ಈ ಬಾರಿಯ ಚುನಾವಣೆಗೆ ಮಡಿಕೇರಿ ಕಾಂಗ್ರೆಸ್ ಟಿಕೆಟ್ ಹಂಚಿಕೆ ಕಗ್ಗಂಟಾಗಿತ್ತು. ಕಳೆದ ಮೂರು ಚುನಾವಣೆಯಲ್ಲಿ 2ನೇ ಸ್ಥಾನಗಳಿಸಿದ್ದ ಬಿ. ಎ. ಜೀವಿಜಯ ಈ ಬಾರಿಯು ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಪಕ್ಷ ಡಾ. ಮಂತರ್ ಗೌಡಗೆ ಟಿಕೆಟ್ ನೀಡಿತ್ತು.
ಜೀವಿಜಯ 2008ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ 6,585 ಮತಗಳು, 2013ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ 4,629 ಮತಗಳ ಅಂತರದಿಂದ ಮತ್ತು 2018ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ 16,015 ಮತಗಳ ಅಂತರದಿಂದ ಸೋತಿದ್ದರು. ಮೂರು ಬಾರಿಯೂ ಬಿಜೆಪಿಯ ಅಪ್ಪಚ್ಚು ರಂಜನ್ ಎದುರಾಳಿಯಾಗಿದ್ದರು.
ಡಾ. ಮಂತರ್ ಗೌಡ ಅಭ್ಯರ್ಥಿ ಎಂದು ಘೋಷಣೆಯಾದ ಬಳಿಕ ಜೆಡಿಎಸ್ ಜೀವಿಜಯರನ್ನು ಸಂಪರ್ಕಿಸಿತ್ತು. ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಬಳಿಕ ಮಾತನಾಡಿದ್ದ ಜೀವಿಜಯ ಬಂಡಾಯವಾಗಿ ಕಣಕ್ಕಿಳಿಯುವುದಿಲ್ಲ ಎಂದು ಹೇಳಿದ್ದರು. ಆದರೆ ಈಗ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದಾರೆ.












Click it and Unblock the Notifications