ವಿಭಿನ್ನ, ವಿಶಿಷ್ಟ ಚೇರಳ ಭಗವತಿ ದೇವಿ ಉತ್ಸವ
ಮಡಿಕೇರಿ, ಫೆಬ್ರವರಿ 25: ಸಾಮಾನ್ಯವಾಗಿ ಕೊಡಗಿನಲ್ಲಿ ನಡೆಯುವ ಹಬ್ಬ, ಉತ್ಸವಗಳೆಲ್ಲವೂ ಇತರೆಡೆಗೆ ಹೋಲಿಸಿದರೆ ವಿಭಿನ್ನ ಮತ್ತು ವಿಶಿಷ್ಟವಾಗಿರುತ್ತದೆ. ಇಲ್ಲಿ ಹೆಚ್ಚಿನ ಗ್ರಾಮಗಳಲ್ಲಿ ಭಗವತಿ ದೇವಾಲಯವಿದೆ. ಈಕೆ ಗ್ರಾಮದೇವತೆಯೂ ಹೌದು. ಆದರೆ ಈ ದೇವಿಯ ಆರಾಧನೆ ಮಾತ್ರ ಒಂದು ಊರಿನಿಂದ ಮತ್ತೊಂದು ಊರಿಗೆ ಭಿನ್ನವಾಗಿರುತ್ತದೆ.
ಹಾಗೆ ನೋಡಿದರೆ ಕೊಡಗಿನಲ್ಲಿರುವ ಚೆಟ್ಟಳ್ಳಿ ಚೇರಳ ಭಗವತಿ ವಾರ್ಷಿಕ ಉತ್ಸವವು ಇತರೆ ಭಗವತಿ ದೇವಾಲಯಗಳಲ್ಲಿ ನಡೆಯುವುದಕ್ಕಿಂತ ಭಿನ್ನವಾಗಿದ್ದು, ಪೂಜಾ ಕೈಂಕರ್ಯದಲ್ಲಿ ಒಂದಷ್ಟು ವಿಶೇಷ ಕಂಡು ಬರುತ್ತದೆ.[ಸಿಡ್ನಿಯ ಲಿವರ್ ಪೂಲ್ ಕೌನ್ಸಿಲರ್ ಆಗಿ ಕೊಡಗಿನ ಚರಿಷ್ಮ]
ಈ ಬಾರಿ ಮಾರ್ಚ್ 3 ರಿಂದ 5ರವರೆಗೆ ಉತ್ಸವ ನಡೆಯಲಿದ್ದು, ಈಗಾಗಲೇ ಇದಕ್ಕೆ ಬೇಕಾದ ತಯಾರಿಗಳು ನಡೆಯುತ್ತಿವೆ. ಫೆಬ್ರವರಿ 28ರ ಬೆಳಗ್ಗೆ 6.30ಕ್ಕೆ ಊರವರು ದೇವಾಲಯದ ಮುಂದೆ ಸೇರಿ ದೇವರ ಬೊಳಕ್ ಮರ (ಕೊಡಿಮರ)ವನ್ನು ದುಡಿಕೊಟ್ಟ್ ಹಾಡಿನೊಂದಿಗೆ ನೆಟ್ಟು, ಬಳಿಕ ದೇವರ ದೀಪವನ್ನು ಹಚ್ಚಲಿದ್ದಾರೆ. ಆ ನಂತರ ನೆಟ್ಟ ಬೊಳಕ್ ಮರದ ಸುತ್ತ ಜಿಂಕೆಯ ಕೊಂಬನ್ನಿಟ್ಟು ಪೂಜಿಸಿ, ದೇವರ ಹಬ್ಬದ ಕಟ್ಟು ಹಾಕಲಿದ್ದಾರೆ.
ಊರಿನಲ್ಲಿ ಹಬ್ಬದ ಕಟ್ಟು ಬಿದ್ದ ನಂತರ ಗ್ರಾಮದ ಪುರುಷರು ದೇವಾಲಯದಲ್ಲಿ ಬೆಳಗ್ಗೆ ಕೊಂಬನ್ನು ಹಿಡಿದು, ದೇವರ ದೀಪದ ಮುಂದೆ ಮೇದರಕೊಟ್ಟೆಗೆ ತಕ್ಕಂತೆ ವಿಶೇಷ ರೀತಿಯ ಕೊಂಬಾಟ್ ನೃತ್ಯ ಮಾಡಲಿದ್ದಾರೆ.[ಕೊಡಗಿಗೆ ರೈಲು, ನದಿತಿರುವು, ರೆಸಾರ್ಟ್ ಬೇಡವೇಬೇಡ!]

ಚೌಂಡಿ ಬನದಲ್ಲಿ ಪೂಜೆ
ಮಾರ್ಚ್ 3ರ ಶುಕ್ರವಾರ 'ಪಟ್ಟಣಿ ಹಬ್ಬ' ನಡೆಯಲಿದ್ದು, ಅಂದು ಕಲ್ಲಡ್ಚಕ್ಕೆ ಹೋಗುವ ಸಂಪ್ರದಾಯವಿದೆ. ಅದರಂತೆ ಊರಿನ 10 ವರ್ಷದ ಒಳಗಿನ ಹೆಣ್ಣುಮಕ್ಕಳು ದೇವಾಲಯದಿಂದ ಕಳಸದ ನೀರನ್ನು ಹೊತ್ತುಕೊಂಡು ಹೋಗಿ ಚೌಂಡಿ ಬನದಲ್ಲಿ ಪೂಜೆ, ಪಾಯಸದ ನೈವೇದ್ಯ ಮಾಡಿ ಅದನ್ನು ಅಲ್ಲಿಟ್ಟು ಬರುತ್ತಾರೆ. ಬಳಿಕ ಮಧ್ಯಾಹ್ನ 3ರ ವೇಳೆಯಲ್ಲಿ ಊರವರೆಲ್ಲ ಸೇರಿ ಸಂಪ್ರದಾಯ ಬದ್ಧವಾಗಿ ಒಡ್ಡೋಲಗ ದುಡಿಕೊಟ್ಟ್ ಹಾಡಿನೊಂದಿಗೆ ದೇವತಕ್ಕರಾದ ಚೇರಳತಮ್ಮಂಡ ಆನಂದ ಅವರ ಮನೆಯಿಂದ ದೇವರಭಂಡಾರವನ್ನು ದೇವಾಲಯಕ್ಕೆ ತಂದು, ದೇವರಿಗೆ ಮಹಾ ಪೂಜೆ ನೆರವೇರಿಸಲಾಗುತ್ತದೆ. ಕೊಂಬಾಟ್ ಆದ ನಂತರ ದೇವರ ಭಂಡಾರವನ್ನು ಒಡ್ಡೋಲಗ ದುಡಿಕೊಟ್ ನೊಂದಿಗೆ ಮರಳಿ ದೇವತಕ್ಕರ ಮನೆಯಲ್ಲಿಡಲಾಗುತ್ತದೆ.

ಅಯ್ಯಪ್ಪ ದೇವರಿಗೆ ಪೂಜೆ
ಮಾರ್ಚ್ 4ರ ಶನಿವಾರ ಬೆಳಗ್ಗೆ 10ರ ಸಮಯದಲ್ಲಿ ಅಯ್ಯಪ್ಪ ದೇವರ ಬನಕ್ಕೆ ತೆರಳಿ ಅಲ್ಲಿ ಅಯ್ಯಪ್ಪದೇವರಿಗೆ ಪೂಜೆ ಸಲ್ಲಿಸಿ, ದೇವರ ಪ್ರಸಾದವನ್ನು ಸ್ವೀಕರಿಸುತ್ತಾರೆ. ಬಳಿಕ ಭಗವತಿ ದೇವಾಲಯಕ್ಕೆ ಆಗಮಿಸಿ, ತೆಂಗಿನ ಕಾಯಿಗೆ ಗುಂಡು ಹೊಡೆಯಲಿದ್ದಾರೆ. ಅಲ್ಲಿಗೆ ಫೆ.28ರಂದು ಹಾಕಿದ ಹಬ್ಬದ ಕಟ್ಟು ಸಡಿಲಗೊಳ್ಳಲಿದೆ.

ಕಾಯಿ ಕೀಳುವ ಸ್ಪರ್ಧೆ
ಮಾರ್ಚ್ 5ರ ಭಾನುವಾರ ಚೇರಳ ಭಗವತಿ ದೊಡ್ಡ ಹಬ್ಬ ನಡೆಯಲಿದೆ. ಅಂದು ಭಗವತಿ ದೇವಿಯನ್ನು ಹೂಮಾಲೆ ವಸ್ತ್ರಾಭರಣದೊಂದಿಗೆ ಸಿಂಗರಿಸಿ, ಗ್ರಾಮಸ್ಥರು ಬಿಳಿಕುಪ್ಪಸದಟ್ಟಿಯನ್ನು ತೊಟ್ಟು, ಒಡ್ಡೋಲಗ ದುಡಿಕೊಟ್ಟ್ ಹಾಡಿನೊಂದಿಗೆ ದೇವತಕ್ಕರಾದ ಚೇರಳತಮ್ಮಂಡ ಆನಂದರವರ ಮನೆಗೆ ತೆರಳಿ ಭಂಡಾರವನ್ನು ದೇವಾಲಯಕ್ಕೆ ತಂದು, ದೇವತಕ್ಕರಾದ ಚೇರಳತಮ್ಮಂಡ ಆನಂದ ಹಾಗೂ ಊರುತಕ್ಕರಾದ ಕೊಂಗೇಟಿರ ಹರೀಶ್ ಅಪ್ಪಣ್ಣನವರ ಸಮ್ಮುಖದಲ್ಲಿ ಮಧ್ಯಾಹ್ನ 3ರ ನಂತರ ದೇವಾಲಯದ ವಾರ್ಷಿಕೋತ್ಸವದ ವಿಧಿವಿಧಾನಗಳು ಸಂಪ್ರದಾಯ ಬದ್ಧವಾಗಿ ನಡೆಸುತ್ತಾರೆ. ಇದಾದ ಬಳಿಕ ನೆಂಟರಿಷ್ಟರಿಗೆ, ಮಕ್ಕಳಿಗೆ ಅಂಬುಕಾಯಿ(ಕಾಯಿಕೀಳುವುದು) ಸ್ಪರ್ಧೆ ನಡೆಯಲಿದೆ.

ಕೆಂಪುವಸ್ತ್ರಧಾರಿಗಳು
ಬಿಳಿಕುಪ್ಪಸದಟ್ಟಿಯನ್ನು ಧರಿಸಿದ ಊರಿನವರು ದೇವರ ನಡೆಗೆ ಬಂದು ದೇವಾಲಯದಲ್ಲಿ ಇಟ್ಟಂತ ಕೊಂಬನ್ನು ಹಿಡಿದು, ಬೊಳಕ್ ಮರದ ಮುಂದೆ ಸಾಲಾಗಿ ಸೇರಿ ದೇವಾಲಯದ ಬಲಭಾಗದಲ್ಲಿ ಕೆಂಪು ವಸ್ತ್ರಧಾರಿಯಾಗಿ ನಿಂತ ಮೇದರಕೊಟ್ಟೆಗೆ 18 ವಿವಿಧ ಕೊಂಬಾಟ್ ನೃತ್ಯವನ್ನು ಮಾಡಲಿದ್ದಾರೆ. ಅಂದು ದೇವರ ಹಬ್ಬಕ್ಕೆ ಬಂದಂಥ ಊರಿನವರು, ನೆಂಟರಿಷ್ಟರು, ಮದುವೆಯಾಗಿ ಹೋದ ಊರಿನ ಹೆಣ್ಣುಮಕ್ಕಳು, ಭಕ್ತರು, ಹರಕೆ ಹೊತ್ತವರು ಭಂಡಾರವನ್ನು ಹಾಕಿ ದೇವರ ಆಶೀರ್ವಾದೊಂದಿಗೆ ಪ್ರಸಾದವನ್ನು ಸ್ವೀಕರಿಸುತ್ತಾರೆ. ಆ ನಂತರ ಊರಿನವರು ಮೆರವಣಿಗೆಯಲ್ಲಿ ದುಡಿಕೊಟ್ಟ್ ಹಾಡು ಒಡ್ಡೋಲಗದೊಂದಿಗೆ ದೇವರ ಭಂಡಾರದೊಂದಿಗೆ ದೇವತಕ್ಕರಾದ ಚೇರಳತಮ್ಮಂಡ ಆನಂದ ಅವರ ಮನೆಗೆ ತೆರಳಿ, ಭಂಡಾರವನ್ನು ಅಲ್ಲಿಟ್ಟು ಮರಳುತ್ತಾರೆ. ಅಲ್ಲಿಗೆ ಮೂರು ದಿನಗಳ ಕಾಲ ನಡೆಯುವ ಹಬ್ಬಕ್ಕೆ ತೆರೆ ಬೀಳುತ್ತದೆ.












Click it and Unblock the Notifications