• search
  • Live TV
ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊಡಗಿನಲ್ಲಿ ನಡೆಯುವ ಅಪರೂಪದ 'ಬೇಡು' ಹಬ್ಬದ ಆಚರಣೆ, ಪೂಜೆಯ ಮಹತ್ವ

|

ಬೇಸಿಗೆಯ ದಿನಗಳಲ್ಲಿ ಸಾಮಾನ್ಯವಾಗಿ ವಿವಿಧ ಮಾರಿಯಮ್ಮ ದೇವಿಯರ ಜಾತ್ರೆಗಳು, ರಥೋತ್ಸವಗಳು ರಾಜ್ಯದಾದ್ಯಂತ ನಡೆಯುವುದನ್ನು ನಾವು ನೋಡುತ್ತೇವೆ. ಆದರೆ ಕೊಡಗಿನಲ್ಲಿ ರಥೋತ್ಸವಗಳು ನಡೆಯುವುದು ಕಡಿಮೆ.

ಆದರೆ ಇಲ್ಲಿನ ಗ್ರಾಮದೇವತೆಗಳಾದ ಭಗವತಿ, ಭದ್ರಕಾಳಿ ದೇವರ ಹಬ್ಬಗಳು ಜಿಲ್ಲೆಯಾದ್ಯಂತ ನಡೆಯುತ್ತವೆ. ಇದು ಒಂದೆಡೆಯಿಂದ ಮತ್ತೊಂದೆಡೆಗೆ ವಿಭಿನ್ನ ಮತ್ತು ವಿಶಿಷ್ವವಾಗಿರುತ್ತದೆ. ಇನ್ನು ಜಿಲ್ಲೆಯಲ್ಲಿ ಭದ್ರಕಾಳಿ ದೇವರ ಹಬ್ಬದ ಸಂದರ್ಭ ಬೇಡು ಹಬ್ಬ ನಡೆಯುತ್ತದೆ. ಇದು ಕೂಡ ವಿಭಿನ್ನವಾಗಿದೆ.

ವಿಶೇಷ ವರದಿ: ಕೊಡಗಿನಲ್ಲೊಂದು ವಿಶಿಷ್ಟ ಬೇಡು ಹಬ್ಬ!

ವಿಭಿನ್ನ ರೀತಿಯ ವೇಷ ಭೂಷಣ ಧರಿಸಿ ಭಿಕ್ಷೆ ಬೇಡುವುದು ಇಲ್ಲಿನ ಪ್ರಮುಖ ಆಚರಣೆಯಾಗಿದೆ. ಹಿಂದಿನ ಕಾಲದಲ್ಲಿ ಹಬ್ಬ ಹರಿದಿನಗಳಲ್ಲಿ ಕೆಳವರ್ಗದ ಮಂದಿ ವೇಷಭೂಷಣ ಧರಿಸಿಯೋ ಅಥವಾ ಮೈಮೇಲೆಲ್ಲ ಮಸಿಯನ್ನು ಬಳಿದುಕೊಂಡು ಹಾಡು ಹೇಳುತ್ತಾ ನೃತ್ಯ ಮಾಡುತ್ತಾ ಮನೆಮನೆಗೆ ತೆರಳಿ ಭಿಕ್ಷೆ ಬೇಡುತ್ತಿದ್ದರು. ಆದರೆ ಕಾಲ ಬದಲಾದಂತೆ ಇದೆಲ್ಲ ನಿಂತು ಹೋಗಿದೆ.

ಇದೀಗ ಹಬ್ಬದ ಆಚರಣೆಯ ವೇಳೆ ಸಂಪ್ರದಾಯವಾಗಿ ಬಳಸಿಕೊಳ್ಳುತ್ತಿರುವುದು ಕಂಡು ಬರುತ್ತ್ತಿದೆ. ಬೇಡು ಹಬ್ಬದ ಬಗ್ಗೆ ಹೇಳುವುದಾದರೆ ಇದು ಮೊದಲಿಗೆ ವೀರಾಜಪೇಟೆಯ ಚೆಂಬೆಬೆಳ್ಳೂರಿನಲ್ಲಿರುವ ಭದ್ರಕಾಳಿ ದೇಗುಲದ ಹಬ್ಬದ ಸಂದರ್ಭ ಆರಂಭಗೊಂಡರೆ ಬಳಿಕ ವಿವಿಧ ಕಡೆಗಳಲ್ಲಿ ನಡೆದು ಆ ನಂತರ ಗೋಣಿಕೊಪ್ಪಲು ಬಳಿಯ ದೇವರಪುರದ ಭದ್ರಕಾಳಿ ದೇಗುಲದಲ್ಲಿ ಅಂತ್ಯ ಕಾಣುತ್ತದೆ.

ದಕ್ಷಿಣ ಕೊಡಗಿನಲ್ಲಿ ಕೆಸರು ಎರಚಿ ಹರಕೆ ತೀರಿಸುವ ಅಪರೂಪದ ಹಬ್ಬ

ಈ ನಡುವೆ ಹಲವು ಕಡೆಗಳಲ್ಲಿ ಈ ಹಬ್ಬ ನಡೆಯುತ್ತದೆಯಾದರೂ ಅದರಲ್ಲಿ ದಕ್ಷಿಣ ಕೊಡಗಿನ ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟಿನಲ್ಲಿ ನಡೆಯುವ ಭದ್ರಕಾಳಿ ಹಾಗೂ ಗುಂಡಿಯತ್ ಅಯ್ಯಪ್ಪ ದೇವರ ವಾರ್ಷಿಕ ಬೇಡು ಹಬ್ಬ ಒಂದಷ್ಟು ವಿಭಿನ್ನ ಮತ್ತು ವಿಶಿಷ್ಟವಾಗಿರುತ್ತದೆ.

ಹಬ್ಬದಲ್ಲಿ ಭಿನ್ನತೆ ಕಾಣಬಹುದು

ಹಬ್ಬದಲ್ಲಿ ಭಿನ್ನತೆ ಕಾಣಬಹುದು

ಈ ಹಬ್ಬದಲ್ಲಿ ದೇವರಿಗೆ ಪೂಜೆ ಪ್ರಾರ್ಥನೆಗಳು ಒಂದೆಡೆಯಾದರೆ, ದೇವರ ಪೂಜಿಸುವ ರೀತಿ ಮತ್ತು ನೈವೇದ್ಯ ತಯಾರಿಸುವುದು, ಪೂಜಾ ಕ್ರಮ, ಹರಕೆ ತೀರಿಸುವುದು ಹೀಗೆ ಎಲ್ಲದರಲ್ಲಿಯೂ ನಾವು ಭಿನ್ನತೆಯನ್ನು ಕಾಣಬಹುದಾಗಿದೆ. ಈ ಬಾರಿ ಹಬ್ಬವು ಮೇ .18 ಮತ್ತು 19 ರಂದು ನಡೆಯುತ್ತಿದ್ದು, ಹಬ್ಬದ ದಿನ(ಮೇ.18 ರಂದು) ಮೊದಲ ದಿನ ಚಮ್ಮಟೀರ ಕುಟುಂಬದ ಮನೆಯಿಂದ ಮೂಲ ನಿವಾಸಿಗಳಲ್ಲಿ ಒಬ್ಬರಾದ ಪಣಿಕ ಜನಾಂಗದಿಂದ 'ಪೊಲವಂದೆರೆ' ಹೊರಡುವ ಮೂಲಕ ಎರಡು ದಿನಗಳ ಹಬ್ಬಕ್ಕೆ ಚಾಲನೆ ನೀಡಲಾಗುತ್ತದೆ. ನಂತರ ಊರಿನ ಮೂರು ನಿಗದಿತ ದೇವರ ನೆಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಪೊಲವಪ್ಪಂಡ ಕೋಟದಲ್ಲಿ (ದೇವಸ್ಥಾನ) ಊರಿನ ಜನರು, ಹೆಂಗಸರು, ಮಕ್ಕಳು ಸೇರುತ್ತಾರೆ.

ಪೂಜೆಗೂ ಮುನ್ನ ನಡೆಯುವ ಸಂಪ್ರದಾಯ

ಪೂಜೆಗೂ ಮುನ್ನ ನಡೆಯುವ ಸಂಪ್ರದಾಯ

ಪೂಜೆಗೂ ಮುಂಚೆ ಇಬ್ಬರು ಕೊಡವ ಪೂಜಾರಿಗಳು (ಒಬ್ಬರು ಚಮ್ಮಟೀರ ಹಾಗೂ ಮತ್ತೊಬ್ಬರು ಮೂಕಳೇರ) ಮೂಕಳೇರ ಬಲ್ಯಮನೆಯ ಹತ್ತಿರದ ದೇವರ ಕೆರೆಯಲ್ಲಿ ಸ್ನಾನ ಮಾಡಿ ವಿವಿಧ ವಿಧಿ ವಿಧಾನದೊಂದಿಗೆ ಭಂಡಾರ ಪೆಟ್ಟಿಗೆ ಶುದ್ಧಿಗೊಳಿಸಿ ನಂತರ ಕೆರೆಯ ಹತ್ತಿರದಲ್ಲಿ ಹೊಸ ಮಣ್ಣಿನ ಮಡಿಕೆಯಲ್ಲಿ ಭತ್ತವನ್ನು ಬೇಯಿಸಿ ಹದಗೊಳಿಸಿ ಇದನ್ನು ಕುಟ್ಟಿ ಅವಲಕ್ಕಿಯನ್ನು ಮಾಡಿ ದೇವರಿಗೆ ನೈವೇದ ತಯಾರು ಮಾಡುತ್ತಾರೆ. ಈ ಇಬ್ಬರು ಪೂಜಾರಿಗಳು ಹಬ್ಬದ ದಿನದಂದು ಬೆಳಿಗ್ಗೆಯಿಂದಲೇ ನೀರು ಕೂಡ ಸೇವಿಸದೆ ಉಪವಾಸ ಮತ್ತು ಕಟ್ಟುನಿಟ್ಟಿನ ವೃತ ಮಾಡುತ್ತಾರೆ. ಬಳಿಕ ಪೊಲವಪ್ಪಂಡ ಕೋಟ ಪ್ರವೇಶಿಸಿ ವಿಶೇಷ ಪೂಜೆ ಸಲ್ಲಿಸಿ ಅಲ್ಲಿ ನೆರೆದ ಭಕ್ತರಿಗೆ ಅವಲಕ್ಕಿಗೆ ಬಾಳೆ ಹಣ್ಣು ಸೇರಿಸಿ ಅವುಲ್ ಎಂಬ ಪ್ರಸಾದವನ್ನು ನೀಡುತ್ತಾರೆ.

ಸಂಪ್ರದಾಯ ಮುರಿದರೆ ಹೆಜ್ಜೇನು ಕಡಿಯುತ್ತದೆ!

ಸಂಪ್ರದಾಯ ಮುರಿದರೆ ಹೆಜ್ಜೇನು ಕಡಿಯುತ್ತದೆ!

ವಿಶೇಷ ಪೂಜೆಯ ನಂತರ ಸಂಜೆಯಾಗುತ್ತಿದ್ದಂತೆ ಜೋಡುಬೀಟಿಯಲ್ಲಿರುವ ಪ್ರಮುಖ ದೇವಾಲಯದಲ್ಲಿ ಒಂದಾದ ಗುಂಡಿಯತ್ ಅಯ್ಯಪ್ಪ ದೇವಸ್ಥಾನ ಪ್ರವೇಶಿಸುತ್ತಾರೆ (ಇಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ) ಈ ಎಲ್ಲಾ ದೇವಸ್ಥಾನಕ್ಕೂ ಬ್ರಾಹ್ಮಣರ ಪೂಜೆ ನಿಷೇಧವಾಗಿದೆ. ಈ ದೇವಸ್ಥಾನದ ಸುತ್ತ ಶುಚಿಗೊಳಿಸಿ ಇಲ್ಲಿ ವಿಶೇಷ ಪೂಜೆ ಸಲ್ಲಿಸಿ ನೈವೇದ್ಯ ಸಲ್ಲಿಸಲಾಗುತ್ತದೆ. ಸಂಪ್ರದಾಯವನ್ನು ಮುರಿದರೆ ಹೆಜ್ಜೇನು ಕಡಿಯುತ್ತದೆ ಎಂಬ ಭಯವೂ ಇದೆ. ವಿಶೇಷ ಪೂಜೆ ಬಳಿಕ ಇಲ್ಲಿ ಸಾವಿರಾರು ತೆಂಗಿನ ಕಾಯಿಯನ್ನು ಈಡು ಕಾಯಿ ರೂಪದಲ್ಲಿ ಭಕ್ತರು ಒಡೆದು ಹರಕೆ ತಿರಿಸಿಕೊಳ್ಳುತ್ತಾರೆ. ನಂತರ ಇಲ್ಲಿಂದ ಹೊರಟು ಸಮೀಪದ ನಿಗದಿತ ಜಾಗದಲ್ಲಿ ತೆಂಗಿನ ಕಾಯಿ, ಬಾಳೆಹಣ್ಣು ತಿನ್ನುವ ಮೂಲಕ ಪೂಜಾರಿಗಳು ಉಪವಾಸವನ್ನು ಅಂತ್ಯಗೊಳಿಸುತ್ತಾರೆ. ಬಳಿಕ ಹೊರಟು ಮೂಕಳೇರ ಬಲ್ಯಮನೆಯಲ್ಲಿ ಸಾಮೂಹಿಕ ಬೋಜನ ಮಾಡಿ ನಂತರ ಚಮ್ಮಟೀರ ಬಲ್ಯ(ಹಿರಿ)ಮನೆಗೆ ತೆರಳಿ ಅಲ್ಲಿ ವಿವಿಧ ವೇಷದಲ್ಲಿ ದೇವರ ಕಳಿ ಹಾಕಿ ಮನೆ ಮನೆಗೆ ತೆರಳಲಾಗುತ್ತದೆ.

ಸಾಂಪ್ರದಾಯಿಕ ವಾಲಗಕ್ಕೆ ಹೆಜ್ಜೆ

ಸಾಂಪ್ರದಾಯಿಕ ವಾಲಗಕ್ಕೆ ಹೆಜ್ಜೆ

ಚಮ್ಮಟೀರ, ಮಚ್ಚಿಯಂಡ ಹಾಗೂ ಮೂಕಳೇರ ಬಲ್ಯ(ಹಿರಿ)ಮನೆಯಲ್ಲಿ ಈ ಕಳಿ(ಆಟ) ರಾತ್ರಿಯಿಡಿ ನಡೆಯುತ್ತದೆ. ನಂತರ ಅಲ್ಲಿನ ಅಂಬಲ(ಮೈದಾನ)ದಲ್ಲಿ ಮುಂಜಾನೆ ಮನೆಕಳಿ ಮುಕ್ತಾಯವಾಗುತ್ತದೆ. ಮೇ.19 ರಂದು ಮಧ್ಯಾಹ್ನದ ಮೇಲೆ ಚಮ್ಮಟೀರ ಹಾಗೂ ಮೂಕಳೇರ ಮನೆಯಿಂದ ಒಂದೊಂದು ಕುದುರೆ ಹಾಗೂ ಮೊಗವನ್ನು ಶೃಂಗರಿಸಿ ಅದನ್ನು ಹೊತ್ತು ಊರಿನ ಪ್ರಮುಖ ದೇವಾಲಯವಾದ ಭದ್ರಕಾಳಿ ದೇವಸ್ಥಾನದ ಹತ್ತಿರದ ದೇವರ ಕೆರೆಯ ಸಮೀಪದ ಅಂಬಲದಲ್ಲಿ ಸೇರಿ ಎರಡು ಕಡೆಯಿಂದ ತಲಾ ಒಂದೊಂದು ಕುದುರೆ (ಕೃತಕವಾಗಿ ತಯಾರಿಸಿದ್ದು) ಹಾಗೂ ಮೊಗ ಮುಖಾಮುಖಿ ಆಗುತ್ತಿದ್ದಂತೆ ಪರಸ್ಪರ ಊರಿನವರು ಆಲಂಗಿಸಿಕೊಂಡು ಸಾಂಪ್ರದಾಯಿಕ ವಾಲಗಕ್ಕೆ ಹೆಜ್ಜೆಹಾಕುತ್ತಾರೆ.

ನೆಂಟರಿಗೆ ಕೆಸರು ಎರಚುವಂತಿಲ್ಲ

ನೆಂಟರಿಗೆ ಕೆಸರು ಎರಚುವಂತಿಲ್ಲ

ವಾಲಗಕ್ಕೆ ಹೆಜ್ಜೆಹಾಕಿದ ನಂತರ ಅಂಬಲದ ಸಮೀಪದ ದೇವರ ಕೆರೆಯಿಂದ ಕೆಸರನ್ನು ತಂದು ಹಿರಿಯರು ಕಿರಿಯರು ಮಕ್ಕಳು ಎಂಬ ಭೇದವಿಲ್ಲದೆ ಪರಸ್ಪರ ಕೆಸರು ಎರಚಾಡಿ ಅಲಂಗಿಸಿಕೊಳ್ಳುತ್ತಾರೆ. ಇಲ್ಲಿ ಹೆಂಗಸರಿಗೆ ಹಾಗೂ ಪರ ಊರಿನವರಿಗೆ ಹಾಗೂ ನೆಂಟರಿಗೆ ಕೆಸರು ಎರಚುವಂತಿಲ್ಲ. ಆದರೆ ಪರ ಊರಿನವರಿಗೆ ಹಾಗೂ ನೆಂಟರಿಗೆ ಮುಕ್ತವಾಗಿ ಇಲ್ಲಿ ಕುಣಿಯಲು ಅವಕಾಶವಿದೆ. ಅಂತಹವರಿಗೆ ಒಂದೊಂದು ಬೆತ್ತದ ಕೋಲು ನೀಡಲಾಗುತ್ತದೆ. ಆ ಕೋಲು ಹಿಡಿದವರಿಗೆ ಕೆಸರು ಎರಚುವಂತಿಲ್ಲ, ಈ ಅಂಬಲದಲ್ಲಿ ಸುಮಾರು ಒಂದು ಘಂಟೆ ಕಾಲ ಪರಸ್ಪರ ಕೆಸರು ಎರಚಿ ಬಳಿಕ ಅಪ್ಪಿಕೊಂಡು ಸಂಭ್ರಮಿಸುತ್ತಾರೆ. ಬಳಿಕ ಭದ್ರಕಾಳಿ ದೇವಸ್ಥಾನದಲ್ಲಿ ಸೇರಿ ಮೂರು ಸುತ್ತು ಬಂದು ಹರಕೆ, ಕಾಣಿಕೆ ಹಾಕುವ ಮೂಲಕ ಹಬ್ಬ ಅಂತ್ಯಗೊಳ್ಳುತ್ತದೆ.

ಬೇಡು ಹಬ್ಬಕ್ಕೆ ತೆರೆ ಬೀಳುವುದು ಹೀಗೆ

ಬೇಡು ಹಬ್ಬಕ್ಕೆ ತೆರೆ ಬೀಳುವುದು ಹೀಗೆ

ಇದಾದ ಬಳಿಕ ದೇವರಪುರದಲ್ಲಿ ನಡೆಯುವ ಬೇಡು ಹಬ್ಬ ಮಾತ್ರ ಸ್ವಲ್ಪ ಮಟ್ಟಿಗೆ ವಿಚಿತ್ರ ಎಂದರೂ ತಪ್ಪಾಗುವುದಿಲ್ಲ. ಈ ಹಬ್ಬದಲ್ಲಿ ವೇಷಧಾರಿಗಳಾಗಿ ಬುಡಕಟ್ಟು ಮಂದಿ ಪಾಲ್ಗೊಳ್ಳುತ್ತಾರೆ. ಅಷ್ಟೇ ಅಲ್ಲ, ವಿಚಿತ್ರ ವೇಷ ಭೂಷಣದಲ್ಲಿ ಕಂಗೊಳಿಸುವ ಇವರು ಎಲ್ಲರನ್ನು ಅಡ್ಡಗಟ್ಟಿ ಭಿಕ್ಷೆ ಬೇಡುತ್ತಾರೆ. ಅಶ್ಲೀಲ ಭಾಷೆಯಲ್ಲಿ ಬೈಯ್ಯುತ್ತಾ ದುಡ್ಡು ಕೇಳುವುದು ಇವರ ಅಭ್ಯಾಸ ಅವತ್ತು ಯಾರನ್ನೂ ಬಿಡದೆ ಬೈಯ್ಯುವ ಬುಡಕಟ್ಟು ಮಂದಿ ಕೊನೆಗೆ ಭದ್ರಕಾಳಿ ಸನ್ನಿಧಿಯಲ್ಲಿ ತಾವು ಮಾಡಿದ ತಪ್ಪಿಗೆ ದೇವರಲ್ಲಿ ಕ್ಷಮೆ ಕೋರುತ್ತಾರೆ. ಅಲ್ಲಿಗೆ ಕೊಡಗಿನಲ್ಲಿ ಬೇಡು ಹಬ್ಬಕ್ಕೆ ತೆರೆ ಬೀಳುತ್ತದೆ.

English summary
The Bedu festival is celebrated every year at Kodagu. This festival is very different. Here are some information about this unique festival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X