ಮಡಿಕೇರಿಯಲ್ಲೂ ಮಾಹಿತಿ ಸಂಗ್ರಹಕ್ಕೆ ತೆರಳಿದ್ದ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ
ಮಡಿಕೇರಿ, ಮೇ 02: ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಇಡೀ ದೇಶವೇ ಒಂದಾಗಿದೆ. ಇದರಲ್ಲಿ ಮುಂಚೂಣಿಯಲ್ಲಿರುವವರು ಆರೋಗ್ಯ ಮತ್ತು ವೈದ್ಯಕೀಯ ಸಿಬ್ಬಂದಿ. ತಮ್ಮ ಜೀವದ ಹಂಗನ್ನು ತೊರೆದು ಜನಸೇವೆಯಲ್ಲಿ ತೊಡಗಿಕೊಂಡವರು ಇವರು. ಆದರೆ ನಮ್ಮ ಜೀವ ಕಾಪಾಡಲು ಮುಂದಾಗಿರುವ ಇವರ ಮೇಲೇ ಹಲ್ಲೆ ನಡೆಸುವಂಥ ಪ್ರಕರಣಗಳು ಹೆಚ್ಚುತ್ತಲೇ ಇವೆ.
ಈ ಹಿಂದೆ ಬೆಂಗಳೂರಿನ ಬ್ಯಾಟರಾಯನಪುರ ಕ್ಷೇತ್ರದ ಸಾದಿಕ್ ನಗರದಲ್ಲಿ ಕೊರೊನಾ ವೈರಸ್ ಕುರಿತು ಮಾಹಿತಿ ಸಂಗ್ರಹಕ್ಕೆ ಹೋಗಿದ್ದ ಸಮಯದಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆದಿತ್ತು. ನಂತರ ಬೆಳಗಾವಿಯ ಕುಡಚಿಯಲ್ಲಿ, ಮೈಸೂರಿನಲ್ಲಿ ಮತ್ತೆ ಮತ್ತೆ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆಸಿದಂಥ ಸಂಗತಿಗಳು ವರದಿಯಾದವು. ನಂತರ, ವೈದ್ಯರು, ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದರೆ ಏಳು ವರ್ಷಗಳ ಶಿಕ್ಷೆ ಎಂದು ಎಚ್ಚರಿಕೆ ನೀಡಿದ್ದೂ ಆಯಿತು.
ವೈದ್ಯರು, ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದರೆ 7 ವರ್ಷ ಜೈಲು
ಇದಾಗ್ಯೂ ಮತ್ತೆ ಇದೇ ರೀತಿಯ ಘಟನೆ ಕೊಡಗಿನಲ್ಲಿ ವರದಿಯಾಗಿದೆ. ಇಲ್ಲಿನ ಆಶಾ ಕಾರ್ಯಕರ್ತೆ ಲತಾ ಮತ್ತು ಕಿರಿಯ ಆರೋಗ್ಯ ಸಹಾಯಕಿ ಜಲಜಾಕ್ಷಿ ಅವರು, ಮಾಹಿತಿ ಪಡೆಯಲೆಂದು ಮಡಿಕೇರಿ ಸಮೀಪದ ನಾಪೋಕ್ಲು ಬಳಿಯ ನಿವೃತ್ತ ಯೋಧ ಬೋಪಯ್ಯ ಮನೆಗೆ ತೆರಳಿದ ಸಂದರ್ಭ ಆಶಾ ಕಾರ್ಯಕರ್ತರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಹಲ್ಲೆಗೆ ಮುಂದಾಗಿರುವ ಸಂಗತಿ ನಡೆದಿದೆ. ಈ ಸಂಬಂಧ ಆಶಾ ಕಾರ್ಯಕರ್ತರು ಗ್ರಾಮದ ಬೋಪಯ್ಯ ಎಂಬುವವರ ವಿರುದ್ಧ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕೊರೊನಾ ಸಂಬಂಧಿತ ಮಾಹಿತಿ ಪಡೆಯುವ ನಿಟ್ಟಿನಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಅವಿರತ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆಗೆ ಮುಂದಾದ ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಘಟನೆ ಸಂಬಂಧ ನಾಪೋಕ್ಲು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಜಿಲ್ಲಾ ಆಶಾ ಕಾರ್ಯಕರ್ತೆಯರ ಸಂಘ ಘಟನೆಯನ್ನು ಖಂಡಿಸಿದ್ದು, ಕಠಿಣ ಕ್ರಮಕ್ಕೆ ಒತ್ತಾಯಿಸಿದೆ.