ಕೊಡಗಿನಲ್ಲಿ ವಿಶಿಷ್ಟ ಕೋವಿ ಹಬ್ಬ; ಆಯುಧ ಹಕ್ಕು ರಕ್ಷಣೆಗೆ ಒತ್ತಾಯ
ಮಡಿಕೇರಿ, ಡಿಸೆಂಬರ್ 19: ಕೊಡವ ಬುಡಕಟ್ಟು ಕುಲದಲ್ಲಿ ಪ್ರಮುಖ ಸ್ಥಾನ ಪಡೆದಿರುವ ಬಂದೂಕು ಕೊಡವರ ಧಾರ್ಮಿಕ ಮತ್ತು ಸಾಂಸ್ಕೃತಿಕ ಲಾಂಛನವಾಗಿದ್ದು, ಸರ್ಕಾರ ಇದನ್ನು ಮಾನ್ಯ ಮಾಡಿ ಗೌರವದ ಸ್ಥಾನಮಾನ ನೀಡಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದ್ದಾರೆ.
ಕೊಡವ ಬುಡಕಟ್ಟು ಕುಲದ ನಾಗರೀಕತೆ ಉಗಮವಾದಂದಿನಿಂದಲೂ ಆಯುಧಗಳು ಕೊಡವರ ಬದುಕಿನ ಅವಿಭಾಜ್ಯ ಅಂಗವಾಗಿವೆ. ಇದರ ಹಕ್ಕು ಮತ್ತು ರಕ್ಷಣೆ ಅಬಾಧಿತವಾಗಿ ಮುಂದುವರೆಯಲು ರಾಜ್ಯಾಂಗ ಖಾತ್ರಿ ನೀಡಬೇಕೆಂದು ಒತ್ತಾಯಿಸಿದ್ದಾರೆ.
ವಿಶ್ವ ಅಲ್ಪಸಂಖ್ಯಾತ ಜನಾಂಗದ ಹಕ್ಕುಗಳ ದಿನಾಚರಣೆ ಅಂಗವಾಗಿ ನಾಪೋಕ್ಲುವಿನ ಕೊಳಕೇರಿಯಲ್ಲಿ ಶನಿವಾರ ನಡೆದ 'ತೋಕ್ ನಮ್ಮೆ' (ಗನ್ ಕಾರ್ನಿವಲ್) ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಕೊಡವ ಬುಡಕಟ್ಟು ಕುಲದ ನಾಗರಿಕತೆ ಉಗಮವಾದಂದಿನಿಂದಲೂ ಆಯುಧಗಳು ಅವರ ಬದುಕಿನ ಅವಿಭಾಜ್ಯ ಅಂಗವಾಗಿವೆ. ಅದೊಂದು ಪರಂಪರೆಯಾಗಿಯೂ, ಜೀವನ ವಿಧಾನವಾಗಿಯೂ ಮುಂದುವರೆದಿದೆ. ಇದರ ಹಕ್ಕು ಮತ್ತು ರಕ್ಷಣೆ ಅಬಾಧಿತವಾಗಿ ಮುಂದುವರೆಯಲು ರಾಜ್ಯಾಂಗ ಖಾತ್ರಿಗಾಗಿ ಹಲವು ಮಹತ್ವದ ನಿರ್ಣಯಗಳನ್ನು ತೋಕ್ ನಮ್ಮೆ ಸಂದರ್ಭ ಅಂಗೀಕರಿಸಲಾಗಿದೆ" ಎಂದು ತಿಳಿಸಿದ್ದಾರೆ.

ನಾಚಪ್ಪ ಅವರ ನೇತೃತ್ವದಲ್ಲಿ ಬಂದೂಕು ಕುರಿತಾದ ತೋಕ್ ಪಾಟ್ (ಕೋವಿ ಹಾಡು)ನೊಂದಿಗೆ ಬಂದೂಕಿಗೆ ಸಾಮೂಹಿಕ ಪೂಜೆ ನೆರವೇರಿಸಲಾಯಿತು. ಮಹಿಳೆಯರು, ಮಕ್ಕಳು ಮತ್ತು ಪುರುಷರಿಗೆ ಪ್ರತ್ಯೇಕ ವಿಭಾಗಗಳಲ್ಲಿ ತೆಂಗಿನಕಾಯಿಗೆ ಗುರಿಯಿಟ್ಟು ಗುಂಡು ಹೊಡೆಯುವ ಸ್ಪರ್ಧೆ ನಡೆಸಲಾಯಿತು. ಕೊಡವರ ಪ್ರತಿಯೊಂದು ಆಚರಣೆಗಳು ಭಿನ್ನ, ವಿಶಿಷ್ಟ. ಇಂತಹ ಅಚರಣೆಗಳ ಸಾಲಿಗೆ ಹೊಸ ಸೇರ್ಪಡೆ ಎಂಬಂತೆ ಕೋವಿ ಉತ್ಸವ ಭರ್ಜರಿಯಾಗಿ ನಡೆಯಿತು.

ಕಳೆದ 10 ವರ್ಷದಿಂದ ಕೊಡವ ನ್ಯಾಷನಲ್ ಕೌನ್ಸಿಲ್ ಕೋವಿ ಉತ್ಸವ ನಡೆಸಿಕೊಂಡು ಬರುತ್ತಿದೆ. ಕೊಳಗೇರಿಯಲ್ಲಿ ಶನಿವಾರ ನಡೆದ ಈ ವಿಶಿಷ್ಟ ಉತ್ಸವದಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು. ಪುರುಷ, ಮಹಿಳೆ ಎಂಬ ಭೇದವಿಲ್ಲದೆ ಎಲ್ಲರೂ ಗುಂಡು ಸಿಡಿಸಿ ಸಂಭ್ರಮಿಸಿದರು.












Click it and Unblock the Notifications