ಯೋಗಿ 'ಅನುಪಯೋಗಿ': ಮೋದಿಗೆ ಅಖಿಲೇಶ್ ಯಾದವ್ ಟಾಂಗ್
ಲಕ್ನೋ, ಡಿಸೆಂಬರ್ 19: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ "ಅನುಪಯೋಗಿ" ಎಂದು ಕರೆದಿದ್ದಾರೆ. ಹಾಗೆಯೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಡಳಿತದಲ್ಲಿ ದಲಿತರು ಮತ್ತು ಮಹಿಳೆಯರ ವಿರುದ್ಧವಾಗಿ ನಡೆದ ಅಪರಾಧ ಕೃತ್ಯಗಳನ್ನು ಉಲ್ಲೇಖ ಮಾಡಿದ್ದಾರೆ.
ಶಹಜಹಾನ್‌ಪುರದಲ್ಲಿ ಸಾರ್ವಜನಿಕ ಭಾಷಣ ಮಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್‌ರನ್ನು ಹಾಡಿ ಹೊಗಳಿದ್ದರು. ಲಕ್ನೋದಲ್ಲಿ 36,230 ಕೋಟಿ ಮೌಲ್ಯದ ಗಂಗಾ ಎಕ್ಸ್ ಪ್ರೆಸ್ ವೇ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ್ದ ಪ್ರಧಾನಿ ಮೋದಿ ಯುಪಿ + ಯೋಗಿ = ಉಪಯೋಗಿ ಎಂದು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಯೋಗಿ ಆದಿತ್ಯನಾಥ್‌ರನ್ನು ಹಾಡಿ ಹೊಗಳಿದ್ದರು.
ಈ ವಿಚಾರದಲ್ಲಿ ತಿರುಗೇಟು ನೀಡಿರುವ ಅಖಿಲೇಶ್ ಯಾದವ್, "ಹತ್ರಾಸ್‌ನ ಪುತ್ರಿ, ಲಖಿಂಪುರದ ರೈತರು, ಗೋರಖ್‌ಪುರದ ವ್ಯಾಪಾರಿ, ಅಸುರಕ್ಷಿತ ಭಾವನೆಯಲ್ಲಿರುವ ಮಹಿಳೆಯರು, ನಿರುದ್ಯೋಗಿ ಯುವಕರು, ದಲಿತರು ಮತ್ತು ಹಿಂದುಳಿದ ವರ್ಗದವರು (ಜನರು) ಉತ್ತರ ಪ್ರದೇಶದ ಪರವಾಗಿ ಹೇಳುತ್ತಿರುವುದು, ಪ್ರಸ್ತುತ ಸರ್ಕಾರ ನಿರುಪಯೋಗಿ ಅಥವಾ ಅನುಪಯೋಗಿ ಅಥವಾ ನಿಷ್ಪ್ರಯೋಜಕ ಸರ್ಕಾರ. ಉತ್ತರ ಪ್ರದೇಶ ಇಂದು ಬಿಜೆಪಿ ಬೇಡ ಎಂದು ಹೇಳುತ್ತಿದೆ," ಎಂದು ಟಾಂಗ್ ನೀಡಿದ್ದಾರೆ. ಈ ಬಗ್ಗೆ ಎಸ್‌ಪಿ ನಾಯಕ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಟ್ವೀಟ್ ಮಾಡಿದ್ದಾರೆ.

ಅಖಿಲೇಶ್ ಯಾದವ್ 012-17ರಲ್ಲಿ ಸಮಾಜವಾದಿ ಪಕ್ಷದ ಸರ್ಕಾರವನ್ನು ಮುನ್ನಡೆಸಿದರು. ಆ ಬಳಿಕ ಯೋಗಿ ಆದಿತ್ಯನಾಥ್ ಅಧಿಕಾರವನ್ನು ಪಡೆದುಕೊಂಡಿದ್ದಾರೆ. ರಾಜ್ಯದಲ್ಲಿ ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ನಿರ್ಣಾಯಕ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎಸ್‌ಪಿ ನಡುವೆ ವಾಕ್ಸಮರ ನಡೆಯುತ್ತಿದೆ. ಮುಂಬರುವ ಚುನಾವಣೆಯಲ್ಲಿ ಆದಿತ್ಯನಾಥ್ ಅವರೇ ತಮ್ಮ ಮುಖ ಎಂದು ಬಿಜೆಪಿ ಈಗಾಗಲೇ ಘೋಷಿಸಿದೆ. ಯುಪಿಯ ಶಹಜಹಾನ್‌ಪುರ ಜಿಲ್ಲೆಯಲ್ಲಿ 594 ಕಿಮೀ ಉದ್ದದ ಗಂಗಾ ಎಕ್ಸ್‌ಪ್ರೆಸ್‌ವೇಗೆ ಶಂಕುಸ್ಥಾಪನೆ ಮಾಡಿದ ನಂತರ ಮೋದಿ ಯೋಗಿ ಆದಿತ್ಯನಾಥ್‌ರನ್ನು ಹಾಡಿ ಹೊಗಳಿದ್ದಾರೆ.
"ಈ ಮೊದಲು ಉತ್ತರ ಪ್ರದೇಶದಲ್ಲಿ ಜನರ ಹಣವನ್ನು ಹೇಗೆ ಮತ್ತು ಯಾವುದಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ ಎಂಬುದು ನಿಮಗೆ ಗೊತ್ತಿದೆ. ನೀವು ಅದನ್ನು ನೋಡಿದ್ದೀರಿ. ಆದರೆ ಇಂದು ಜನರ ದುಡ್ಡು ಉತ್ತರ ಪ್ರದೇಶದ ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಆಗುತ್ತಿದೆ. ಇದಕ್ಕೂ ಮೊದಲು ಯೋಜನೆಗಳು ಪತ್ರಿಕೆಗಳಲ್ಲಿ ಪ್ರಾರಂಭವಾಗುತ್ತಿದ್ದು, ಅವರ ಬೊಕ್ಕಸವನ್ನು ತುಂಬಿಸುತ್ತಿದ್ದವು. ಆದರೆ ಇಂದು ನಿಮ್ಮ ಹಣವು ಉಳಿತಾಯವಾಗಿದೆ, ಅಭಿವೃದ್ಧಿ ಕಾರ್ಯಗಳಿಗಾಗಿ ಬಳಕೆ ಆಗುತ್ತಿದೆ," ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ನನ್ನ ಫೋನ್ ಟ್ಯಾಪ್ ಮಾಡಲಾಗಿದೆ ಎಂದ ಅಖಿಲೇಶ್ ಯಾದವ್!
ಇನ್ನು ಉತ್ತರಪ್ರದೇಶ ಸಮಾಜವಾದಿ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. "ನನ್ನ ಫೋನ್ ಅನ್ನು ಟ್ಯಾಪ್ ಮಾಡಲಾಗಿದೆ. ಯೋಗಿ ಆದಿತ್ಯನಾಥ್ ನನ್ನ ಫೋನ್ ಅನ್ನು ಕದ್ದು ಆಲಿಸುತ್ತಿದ್ದಾರೆ. ಪ್ರತಿದಿನ ಸಂಜೆ ನಾನು ಯಾರ ಬಳಿ ಮಾತನಾಡುತ್ತೇನೋ, ಅದೆಲ್ಲವನ್ನೂ ಕದ್ದಾಲಿಕೆ ಮಾಡುತ್ತಿದ್ದಾರೆ. ನನ್ನ ಕಚೇರಿಯ ಲ್ಯಾಂಡ್ ಲೈನ್ ಕೂಡಾ ಟ್ಯಾಪ್ ಆಗಿದೆ," ಎಂದು ಅಖಿಲೇಶ್ ಯಾದವ್ ಆರೋಪ ಮಾಡಿದ್ದಾರೆ. "ನಮ್ಮೆಲ್ಲ ಫೋನ್ಗಳೂ ಕದ್ದಾಲಿಕೆ ಆಗುತ್ತಿವೆ. ಸಮಾಜವಾದಿ ಪಕ್ಷದ ಕಚೇರಿಯಲ್ಲಿರುವ ಫೋನ್ಗಳೂ, ನನ್ನೊಂದಿಗೆ ಇರುವ ಜನರ ಫೋನ್ಗಳನ್ನೆಲ್ಲ ಟ್ಯಾಪ್ ಮಾಡಲಾಗಿದೆ. ಇದೊಂದು ಅನುಪಯುಕ್ತ ಸರ್ಕಾರ, ಯೂಸ್ಲೆಸ್ ಮುಖ್ಯಮಂತ್ರಿ," ಎಂದು ಟೀಕೆ ಮಾಡಿದ್ದಾರೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications