ಮಹಾತ್ಮ ಗಾಂಧಿಯನ್ನು ಉಲ್ಲೇಖಿಸಿ ವಿಪಕ್ಷ ಕಾಳೆಲೆದ ಯೋಗಿ ಆದಿತ್ಯನಾಥ್
ವಾರಾಣಾಸಿ, ಡಿಸೆಂಬರ್ 13: ವಿಧಾನಸಭೆ ಚುನಾವಣೆಯೂ ಹತ್ತಿರವಾಗುತ್ತಿದ್ದಂತೆ ವಿರೋಧ ಪಕ್ಷಗಳು ಹಾಗೂ ಆಡಳಿತ ಪಕ್ಷಗಳು ತಮ್ಮ ವಾಕ್ ಸಮರವನ್ನು ಮುಂದುವರಿಸಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಂದು ವಾರಣಾಸಿಯ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ವೇದಿಕೆಯಲ್ಲಿ ವಿರೋಧ ಪಕ್ಷಗಳು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದಶಕಗಳಿಂದ ದೇಶದ ಆಧ್ಯಾತ್ಮಿಕ ರಾಜಧಾನಿಯನ್ನು ಗುರುತಿಸಿರುವ ವಾರಾಣಾಸಿ ವಿಚಾರವನ್ನು ಉಲ್ಲೇಖ ಮಾಡುತ್ತಾ, ವಿರೋಧ ಪಕ್ಷಗಳನ್ನು ಟೀಕೆ ಮಾಡಿದ್ದಾರೆ. "ಮಹಾತ್ಮ ಗಾಂಧಿ ವಾರಾಣಸಿಗೆ ಬಂದಿದ್ದರು, ಇಲ್ಲಿರುವ ಹೊಲಸು ಹಾಗೂ ದಟ್ಟಣೆಯ ವಿಚಾರದಲ್ಲಿ ಅಳಲು ತೋಡಿಕೊಂಡಿದ್ದರು," ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
"ವಾರಾಣಾಸಿಗೆ ಬಂದ ಮಹಾತ್ಮ ಗಾಂಧಿ ಅವರು ಇಲ್ಲಿನ ಹೊಲಸನ್ನು ಕಂಡು ವಿಷಾದ ಪಟ್ಟಿದ್ದರು. ಅಂದಿನಿಂದ ಅನೇಕ ಜನರು ಮಹಾತ್ಮ ಗಾಂಧಿಯವರ ಹೆಸರನ್ನು ಬಳಸಿಕೊಂಡು ಅಧಿಕಾರಕ್ಕೆ ಬಂದಿದ್ದಾರೆ. ಆದರೆ ಕಾಶಿಧಾಮವು ಮಾತ್ರ ಹಾಗೆಯೇ ಉಳಿದಿತ್ತು. ಆದರೆ ಈಗ ನಾವು ಗಾಂಧಿಜಿಯವರ ಕನಸನ್ನು ನನಸು ಮಾಡುತ್ತಿದ್ದೇವೆ. ನಾವೇ ಮೊದಲ ಬಾರಿಗೆ ಗಾಂಧಿಜಿ ಕನಸು ನನಸು ಮಾಡಿದವರು," ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾಶಿ ವಿಶ್ವನಾಥ ಕಾರಿಡಾರ್: ಚುನಾವಣಾ ಕಣ್ಣೋಟ
ಸೋಮವಾರ ವಾರಣಾಸಿಯಲ್ಲಿ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯ ಮೊದಲ ಹಂತವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದಾರೆ. ವಾರಣಾಸಿಯು ಪ್ರಧಾನ ಮಂತ್ರಿಯ ಲೋಕ ಸಭಾ ಕ್ಷೇತ್ರವಾಗಿದೆ. ಮುಂದಿನ ವರ್ಷ ವಿಧಾನಸಭೆ ಚುನಾವಣೆಯು ನಡೆಯಲಿರುವ ಹಿನ್ನೆಲೆಯಿಂದಾಗಿ ಈ ಯೋಜನೆಯು ಬಿಜೆಪಿಗೆ ಬಹುಮುಖ್ಯವಾದ ಯೋಜನೆ ಆಗಿದೆ. ಕಾಶಿಗೆ ಯಾತ್ರಾರ್ಥಿಗಳ, ತೀರ್ಥ ಯಾತ್ರೆಗೆ ಬರುವವರಿಗೆ ಸುಲಭವಾಗುವಂಹ ಸೌಲಭ್ಯವನ್ನು ಮಾಡುವ ಮೂಕ ಹಿಂದೂ ಧರ್ಮದ ಜನರ ಮತಕ್ಕೆ ಬಿಜೆಪಿಯು ಬಲೆ ಬೀಸಿದೆ. ಇನ್ನು ಸುಮಾರು ನಲ್ವತ್ತು ಹಳೆಯ ದೇವಾಲಯನ್ನು ಅಭಿವೃಧ್ದಿ ಮಾಡುವ ಕಾರ್ಯವೂ ಕೂಡಾ ಈ ಯೋಜನೆಯಲ್ಲಿ ಒಳಗೊಂಡಿದೆ.
ಇನ್ನು ಅಖಿಲೇಶ್ ಯಾದವ್ ವಿರುದ್ಧವೂ ಯೋಗಿ ಆದಿತ್ಯನಾಥ್ ವಾಗ್ದಾಳಿ ನಡೆಸಿದ್ದಾರೆ. ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆ ಪೂರ್ಣಗೊಂಡಿದ್ದು ಈ ಯೋಜನೆಗೆ ತಮ್ಮ ಅವಧಿಯಲ್ಲಿ ಅನುಮೋದನೆ ನೀಡಲಾಗಿತ್ತು ಎಂದು ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಈ ಹಿಂದೆ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯ ಹಿನ್ನೆಲೆ ಅಖಿಲೇಶ್ ಯಾದವ್ ವಿರುದ್ಧ ಆದಿತ್ಯನಾಥ್ ವಾಗ್ದಾಳಿ ನಡೆಸಿದ್ದಾರೆ. ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿಯನ್ನು ಬುವಾ ಎಂದು, ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಬಬುವಾ ಎಂದು ಸಂಬೋಧಿಸಿದ ಆದಿತ್ಯನಾಥ್, "ಬುವಾ ಕಾಶಿ ವಿಶ್ವನಾಥ ಧಾಮವನ್ನು ನಿರ್ಮಿಸಿದ್ದಾರೆಯೇ? ಅಥವಾ ಬಾಬುವಾ ಭಗವಾನ್ ಶಿವನ ಹಾಡುಗಳನ್ನು ಹಾಡಿದ್ದಾರೆಯೇ?," ಎಂದು ಪ್ರಶ್ನೆ ಮಾಡಿದ್ದಾರೆ.
"ಇನ್ನು ಕೊರೊನಾ ವೈರಸ್ ಸೋಂಕು ಸಂದರ್ಭದಲ್ಲಿ ಪ್ರತಿ ಪಕ್ಷಗಳು ಆಡಳಿತ ಪಕ್ಷವು ಜನರಿಗೆ ಏನು ಮಾಡಿಲ್ಲ ಎಂದು ಆರೋಪ ಮಾಡುತ್ತಾರೆ. ಆದರೆ ನಿಜವಾಗಿ ಕೊರೊನಾ ವೈರಸ್ ಸೋಂಕು ಸಂದರ್ಭದಲ್ಲಿ ಬಿಜೆಪಿ ಸರ್ಕಾರವು ಕೆಲಸ ಮಾಡುತ್ತಿದ್ದವು. ಆ ವೇಳೆ ಕಾಂಗ್ರೆಸ್, ಬಿಎಸ್‌ಪಿ, ಬಾಬುವಾ ಎಲ್ಲಿದ್ದರು? ನೀವು ಹೇಳಬಹುದಾ?, ಎಲ್ಲರೂ ಹೋಮ್ ಕ್ವಾರಂಟೈನ್‌ನಲ್ಲಿ ಇದ್ದರು ಹಾಗೂ ಮನೆಯಲ್ಲಿ ಆರಾಮವಾಗಿ ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ಈಗ ಸುಳ್ಳು ಪ್ರಚಾರವನ್ನು ಮಾಡುತ್ತಿದ್ದಾರೆ. ಸುಳ್ಳು ಪ್ರಚಾರ ಮಾಡುತ್ತಾ ಅವರು ಜನರ ಜೀವನದ ಜೊತೆಯೇ ಚೆಲ್ಲಾಟವಾಡುತ್ತಿದ್ದಾರೆ," ಎಂದು ಆರೋಪ ಮಾಡಿದರು.
ಈ ನಡುವೆ "ರೈತರ ಆದಾಯವನ್ನು ನಾವು ದ್ವಿಗುಣ ಮಾಡುತ್ತೇವೆ ಎಂದು ಹೇಳಿ ಬಳಿಕ ಮಾಡಲು ಸಾಧ್ಯವಾಗದ ಪ್ರಧಾನಿ ಮೋದಿ ವೈಫಲ್ಯವನ್ನು ಮುಚ್ಚಿ ಹಾಕಿ, ಜನರ ಗಮನವನ್ನು ಬೇರೆ ಕಡೆಗೆ ಸೆಳೆಯುವ ನಿಟ್ಟಿನಲ್ಲಿ ಬಿಜೆಪಿ ಸರ್ಕಾರವು ಕಾರಿಡಾರ್ ಪ್ರಾರಂಭಕ್ಕೆ ಮುಂದಾಗಿ ಬೇರೆ ಬೇರೆ ಕಾರ್ಯಕ್ರಮಗಳನ್ನು ನಡೆಸುತ್ತಿದೆ," ಎಂದು ಸಮಾಜವಾದಿ ಪಕ್ಷದ ನಾಯಕರು ದೂರಿದ್ದಾರೆ.












Click it and Unblock the Notifications