ಯುಪಿ: ವಿವಾಹದ ವೇಳೆ ಬಾವಿಗೆ ಬಿದ್ದು 13 ಮಂದಿ ಸಾವು
ಕುಶಿನಗರ, ಉತ್ತರ ಪ್ರದೇಶ: ಉತ್ತರ ಪ್ರದೇಶದ ಕುಶಿನಗರದಲ್ಲಿ ನಿನ್ನೆ ರಾತ್ರಿ ವಿವಾಹ ಮಹೋತ್ಸವದ ವೇಳೆ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮಹಿಳೆಯರು ಮತ್ತು ಮಕ್ಕಳನ್ನೊಳಗೊಂಡ 13 ಮಂದಿ ಸಾವನ್ನಪ್ಪಿದ್ದಾರೆ.
ಅಧಿಕಾರಿಗಳ ಪ್ರಕಾರ, ಮದುವೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಹಳೆಯ ಬಾವಿಯನ್ನು ಮುಚ್ಚಿದ ಚಪ್ಪಡಿ ಮೇಲೆ ಕುಳಿತಿದ್ದರು. ಭಾರದ ರಭಸಕ್ಕೆ ಸ್ಲ್ಯಾಬ್ ಕುಸಿದು ಬಿದ್ದಿದ್ದು, ಅದರ ಮೇಲೆ ಕುಳಿತಿದ್ದವರು ಬಾವಿಗೆ ಬಿದ್ದಿದ್ದಾರೆ. ತಕ್ಷಣ ಅವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಲ್ಲಿ 13 ಜನರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ.
ಉತ್ತರ ಪ್ರದೇಶದ ಕುಶಿನಗರದಲ್ಲಿ ಬುಧವಾರ ರಾತ್ರಿ ಈ ಘಟನೆ ಸಂಭವಿಸಿದೆ. ಜಿಲ್ಲೆಯ ನೌರಂಗಿಯಾ ಗ್ರಾಮದ ಮನೆಯೊಂದರಲ್ಲಿ ನಡೆದ ಮದುವೆ ಸಮಾರಂಭ ನಡೆದಿತ್ತು. ಬಾಲಕಿಯರು ಮತ್ತು ಮಹಿಳೆಯರ ಒಟ್ಟು 13 ಮೃತದೇಹಗಳನ್ನು ಬಾವಿಯಿಂದ ಹೊರ ತೆಗೆಯಲಾಗಿದೆ. ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ನೌರಂಗಿಯ ಗ್ರಾಮದ ಶಾಲೆಯ ಪಕ್ಕದಲ್ಲಿರುವ ಬಾವಿಗೆ ಪೂಜೆ ಸಲ್ಲಿಸಲು ಮದುವೆಗೆಂದು ಬಂದು ಬಂದಿದ್ದ ಮಹಿಳೆಯರು ಸೇರಿದ್ದರು ಎಂದು ಕುಶಿನಗರ ಪೊಲೀಸರು ತಿಳಿಸಿದ್ದಾರೆ. ಬಾವಿಮೇಲಿಟ್ಟು ಕಲ್ಲಿನ ಮೇಲೆ ಪೂಜೆ ಸಲ್ಲಿಸಲಾಗುತ್ತಿತ್ತು. ಈ ವೇಳೆ ಬಾವಿಯ ಭಾರ ಹೆಚ್ಚಾದ ಕಾರಣ ಕಲ್ಲು ಕುಸಿದು ಬಾಲಕಿಯರು, ಮಹಿಳೆಯರು ಬಾವಿಗೆ ಬಿದ್ದಿದ್ದಾರೆ. ಬಾವಿಯಲ್ಲಿ ನೀರು ತುಂಬಿದ್ದರಿಂದ ಮಹಿಳೆಯರು ಬಾವಿಯಲ್ಲಿ ಮುಳುಗಿದ್ದಾರೆ. ಅಪಘಾತದ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಪೊಲೀಸರು, ಗ್ರಾಮದ ಜನರ ನೆರವಿನಿಂದ ಮೃತದೇಹಗಳನ್ನು ಬಾವಿಯಿಂದ ಹೊರತೆಗೆದಿದ್ದಾರೆ. ಜಿಲ್ಲೆಯ ಅಧಿಕಾರಿಗಳು 13 ಸಾವುಗಳನ್ನು ಖಚಿತಪಡಿಸಿದ್ದಾರೆ. ಇದೇ ವೇಳೆ 18ರಿಂದ 20 ಮಹಿಳೆಯರು ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಆಸ್ಪತ್ರೆಯ ದೃಶ್ಯಗಳಲ್ಲಿ ಸಂಬಂಧಿಕರು ತಮ್ಮ ಮದುವೆಯ ಉಡುಪಿನಲ್ಲೇ ದುರಂತದಲ್ಲಿ ಕಳೆದುಹೋದ ತಮ್ಮ ಪ್ರೀತಿಪಾತ್ರರನ್ನು ನೆನೆದು ಶೋಕಿಸುತ್ತಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಎಸ್.ರಾಜಲಿಂಗಂ, ''ಆಕಸ್ಮಿಕವಾಗಿ ಬಾವಿಗೆ ಬಿದ್ದು 13 ಮಂದಿ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಬಗ್ಗೆ ನಮಗೆ ಮಾಹಿತಿ ಬಂದಿದೆ. ಮದುವೆ ಕಾರ್ಯಕ್ರಮದ ವೇಳೆ ಕೆಲವರು ಬಾವಿಯ ಚಪ್ಪಡಿ ಕಲ್ಲಿನ ಮೇಲೆ ಕುಳಿತಿದ್ದರು. ಹೆಚ್ಚಿನ ಹೊರೆಯಿಂದಾಗಿ ಸ್ಲ್ಯಾಬ್ ಕುಸಿದಿದೆ. ಇದರಿಂದ ದುರಂತ ಸಂಭವಿಸಿದೆ" ಎಂದಿದ್ದಾರೆ.
ಘಟನೆಯಲ್ಲಿ ಮೃತಪಟ್ಟ ಪ್ರತಿಯೊಬ್ಬರ ಕುಟುಂಬಕ್ಕೆ 4 ಲಕ್ಷ ಪರಿಹಾರ ನೀಡಲಾಗುವುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ದುರಂತದ ಬಗ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ವ್ಯಕ್ತಪಡಿಸಿದ್ದಾರೆ. ಕೂಡಲೇ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ನಡೆಸಿ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಮುಖ್ಯಮಂತ್ರಿಗಳ ಕಚೇರಿಯ ಅಧಿಕೃತ ಹ್ಯಾಂಡಲ್ ಟ್ವೀಟ್ ಮಾಡಿದೆ. ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.
ಕುಶಿನಗರ ಘಟನೆಯಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ಪ್ರಧಾನಿ ಮೋದಿ ಸಾಂತ್ವನ ಹೇಳಿದ್ದಾರೆ. "ಸ್ಥಳೀಯ ಆಡಳಿತದಿಂದ ಸಾಧ್ಯವಿರುವ ಸಹಾಯವನ್ನು ನೀಡಲಾಗುತ್ತಿದೆ" ಎಂದಿದ್ದಾರೆ.












Click it and Unblock the Notifications