ಸಚಿವ ಚೇತನ್ ಚೌವ್ಹಾಣ್ ಸಾವಿನ ಬಗ್ಗೆ ಸಿಬಿಐ ತನಿಖೆಗೆ ಶಿವಸೇನೆ ಮನವಿ
ಲಕ್ನೋ, ಆಗಸ್ಟ್.25: ಮಾಜಿ ಕ್ರಿಕೆಟರ್ ಹಾಗೂ ಸಚಿವ ಚೇತನ್ ಚೌಹಾಣ್ ಸಾವಿನ ಕುರಿತು ಸಿಬಿಐ ತನಿಖೆ ನಡೆಸುವಂತೆ ಉತ್ತರ ಪ್ರದೇಶದ ಶಿವಸೇನಾ ಘಟಕವು ಆಗ್ರಹಿಸಿದೆ. ಈ ಸಂಬಂಧ ರಾಜ್ಯಪಾಲೆ ಆನಂದಿ ಬೆನ್ ರನ್ನು ಭೇಟಿ ಮಾಡಿದ ಶಿವಸೇನೆ ನಿಯೋಗವು ಮನವಿ ಸಲ್ಲಿಸಿದೆ.
Recommended Video
ಕೊರೊನಾವೈರಸ್ ಸೋಂಕಿನಿಂದ ಬಳಲುತ್ತಿದ್ದ ಸಚಿವ ಚೇತನ್ ಚೌಹಾಣ್ ಸಾವಿಗೆ ಮಹಾಮಾರಿಯಷ್ಟೇ ಕಾರಣವಲ್ಲ. ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ತೋರಿದ ನಿರ್ಲಕ್ಷ್ಯವೂ ಮುಖ್ಯ ಕಾರಣವಾಗಿದೆ ಎಂದು ಶಿವಸೇನೆ ಆರೋಪಿಸಿದೆ.
ಮೊದಲು ಸಚಿವ ಚೇತನ್ ಚೌಹಾಣ್ ರನ್ನು ಲಕ್ನೋದ ಸಂಜಯ್ ಗಾಂಧಿ ಪೋಸ್ಟ್ ಗ್ರ್ಯಾಜುಯೆಟ್ ಇನ್ಸ್ ಟ್ಯೂಟ್ ಆಫ್ ಮೆಡಿಕಲ್ ಸೈನ್ಸ್(ಎಸ್ ಜಿಪಿಜಿಐ) ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಿಡ್ನಿ ವೈಫಲ್ಯದಂತಹ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ಗುರುಗ್ರಾಮ್ ನ ಮೇದಾಂತ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಈ ವೇಳೆ 36 ಗಂಟೆಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ ಅವರು, ಆಗಸ್ಟ್.16ರಂದು ಚಿಕಿತ್ಸೆ ಫಲಕಾರಿಯಾಗದೇ ಚೇತನ್ ಚೌಹಾಣ್ ಪ್ರಾಣ ಬಿಟ್ಟಿದ್ದರು.

ಸರ್ಕಾರಿ ಆಸ್ಪತ್ರೆಗಳ ಮೇಲೆ ವಿಶ್ವಾಸವಿಲ್ಲವೇ?:
ಮಾಜಿ ಕ್ರಿಕೆಟರ್ ಮತ್ತು ಸಚಿವರಾದ ಚೇತನ್ ಚೌಹಾಣ್ ರನ್ನು ಎಂಥ ಸಂದರ್ಭದಲ್ಲಿ ಲಕ್ನೋದ ಎಸ್ ಜಿಪಿಜಿಐ ಆಸ್ಪತ್ರೆಯಿಂದ ಗುರುಗ್ರಾಮ್ ನ ಮೇದಾಂತ ಆಸ್ಪತ್ರೆಗೆ ಶಿಫ್ಟ್ ಮಾಡಿದರು. ಹೀಗೆ ಸ್ಥಳಾಂತರಿಸುವುದಕ್ಕೆ ಕಾರಣವಾದರೂ ಏನು. ಯಾಕೆ ಎಸ್ ಜಿಪಿಜಿಐ ಅಂತಹ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಗಳ ಮೇಲೆಯೇ ಸರ್ಕಾರಕ್ಕೆ ವಿಶ್ವಾಸವಿಲ್ಲವೇ ಎಂದು ಶಿವಸೇನೆ ಪ್ರಶ್ನಿಸಿದೆ.
ಎಸ್ ಜಿಪಿಜಿಐ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯ ನಡುವಳಿಕೆ ಬಗ್ಗೆ ಸ್ವತಃ ಸಚಿವರೇ ಹತಾಷೆ ವ್ಯಕ್ತಪಡಿಸಿದ್ದರು. ತಪ್ಪಿತಸ್ಥ ಸಿಬ್ಬಂದಿ ಮತ್ತು ವೈದ್ಯರ ಮೇಲೆಯ ಇದುವರೆಗೂ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಏಕೆ. ಕೊರೊನಾವೈರಸ್ ಸೋಂಕಿನಿಂದ ಇಬ್ಬರು ಸಚಿವರು ಅಸುನೀಗಿದ್ದರೂ ಸರ್ಕಾರವು ಇಂದಿಗೂ ನಿದ್ದೆಯಿಂದ ಎದ್ದಿಲ್ಲವೇ ಎಂದು ಶಿವಸೇನೆ ಪ್ರಶ್ನೆ ಮಾಡಿದೆ.
ಕಳೆದ ಆಗಸ್ಟ್.02ರಂದು ತಾಂತ್ರಿಕ ಶಿಕ್ಷಣ ಸಚಿವೆ ಕಮಲಾ ರಾಣಿ ಅವರಿಗೆ ಕೊರೊನಾವೈರಸ್ ಸೋಂಕು ಕಾಣಿಸಿಕೊಂಡಿತ್ತು. ಅದಾಗಿ ಎರಡು ದಿನಗಳಲ್ಲೇ ಅವರು ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದರು.












Click it and Unblock the Notifications