250 ಉಗ್ರರ ಹತ್ಯೆ : ಶಾ ಸ್ಟೇಮ್ಮೆಂಟ್ಗೆ ಮೋದಿ ಏಕೆ ಸೈಲೆಂಟ್? ಮಾಯಾವತಿ ಪ್ರಶ್ನೆ
ಲಕ್ನೋ, ಮಾರ್ಚ್ 06 : ಫೆಬ್ರವರಿ 26ರಂದು ಭಾರತೀಯ ವಾಯು ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಸಿದ ಏರ್ ಸ್ಟ್ರೈಕ್ ಗೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷದ ನಾಯಕರು ನೀಡುತ್ತಿರುವ 'ಲೆಕ್ಕ' ಚುಕ್ತಾ ಮಾಡುವವರೆಗೆ ವಿರೋಧ ಪಕ್ಷದ ನಾಯಕರು ವಿರಮಿಸುವಂತೆ ಕಾಣಿಸುತ್ತಿಲ್ಲ.
ಆರಂಭದಲ್ಲಿ 300 ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಬಿಜೆಪಿಯಿಂದ ಹೇಳಿಕೆ ಬಂದಿತು. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು 250 ಉಗ್ರರ ಹತ್ಯೆಯಾಗಿರುವ ಬಗ್ಗೆ ಮಾತಾಡಿದ್ದಾರೆ ಮತ್ತು ಪಾಕಿಸ್ತಾನದ ವಶದಲ್ಲಿದ್ದ ವಿಂಗ್ ಕಮಾಂಡರ್ ಅಭಿನಂದನ್ ಅವರು ಮೋದಿಯ ಪ್ರಯತ್ನದಿಂದ 48 ಗಂಟೆಯೊಳಗೆ ವಾಪಸ್ ಬಂದರು ಎಂದಿದ್ದಾರೆ.
ಈ 250 ಸಂಖ್ಯೆಯ ಹೇಳಿಕೆಯನ್ನೇ ಗಟ್ಟಿಯಾಗಿ ಹಿಡಿದುಕೊಂಡಿರುವ ಬಹುಜನ ಸಮಾಜ ಪಕ್ಷದ ನಾಯಕಿ ಕುಮಾರಿ ಮಾಯಾವತಿ ಅವರು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಏಕೆ ಬಾಯಿ ಮುಚ್ಚಿಕೊಂಡಿದ್ದಾರೆ, ಏಕೆ ಯಾವುದೇ ಸ್ಪಷ್ಟೀಕರಣ ನೀಡುತ್ತಿಲ್ಲ ಎಂದು ಮೋದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

"ಪಾಕಿಸ್ತಾನದಲ್ಲಿ ನಡೆಸಿದ ಏರ್ ಸ್ಟ್ರೈಕ್ ನಲ್ಲಿ 250 ಉಗ್ರರನ್ನು ಹತ್ಯೆಗೈಯಲಾಗಿದೆ ಎಂದು ಬಿಂದಾಸ್ ಆಗಿ ಬಿಜೆಪಿ ಚೀಫ್ ಅಮಿತ್ ಶಾ ಹೇಳಿಕೆ ನೀಡಿದ್ದಾರೆ. ಆದರೆ, ಎಲ್ಲ ಕ್ರಮಗಳಿಗೂ ತಾವೇ ಶ್ರೇಯಸ್ಸು ತೆಗೆದುಕೊಳ್ಳುವ, ಶಾ ಅವರ ಗುರುಗಳಾದ ಮೋದಿಯವರು ಏಕೆ ಇನ್ನೂ ಸೈಲೆಂಟ್ ಆಗಿದ್ದಾರೆ? ಉಗ್ರರನ್ನು ಹತ್ಯೆಗೈದಿರುವುದು ಉತ್ತಮ ಸಂಗತಿಯೇ, ಆದರೆ, ಮೋದಿಯವರದು ಮೌನವೇಕೆ" ಎಂದು ಮಾಯಾವತಿ ಪ್ರಶ್ನಿಸಿದ್ದಾರೆ.
ನರೇಂದ್ರ ಮೋದಿ ಸರಕಾರದ ಆರ್ಥಿಕ ನೀತಿಯ ಬಗ್ಗೆ ಟೀಕಾಪ್ರಹಾರ ಮಾಡಿದ ಮಾಯಾವತಿ ಅವರು, ಆರ್ಥಿಕ ಪ್ರಗತಿಯ ಲಾಭಗಳು 130 ಕೋಟಿ ಜನಸಂಖ್ಯೆಯಿರುವ ಭಾರತದ ಬಡಜನರಿಗೆ, ಕಾರ್ಮಿಕರಿಗೆ, ರೈತರಿಗೆ ಸಿಗುತ್ತಿಲ್ಲ ಎನ್ನುವುದು ನಿಜಕ್ಕೂ ಕಳವಳಕಾರಿ ಸಂಗತಿ. ಕೃಷಿ ವಲಯ ಮತ್ತು ನಿರ್ಮಾಣ ವಲಯದಲ್ಲಿ ಪ್ರಗತಿ ಕುಂಠಿತಗೊಂಡಿದ್ದು, ಜಿಡಿಪಿ ಅಭಿವೃದ್ಧಿಯನ್ನು ಶೇ.6.6ಕ್ಕೆ ಇಳಿದಿರುವುದಕ್ಕೆ ಮೋದಿಯವರು ಏನು ಉತ್ತರ ನೀಡುತ್ತಾರೆ ಎಂದು ಅವರು ಕೇಳಿದ್ದಾರೆ.












Click it and Unblock the Notifications