ಬಿಜೆಪಿ ಎಸ್‌ಬಿಎಸ್‌ಪಿ ಸ್ನೇಹ; ಯುಪಿಯಲ್ಲಿ ಗೆಲುವಿನ ಮೈತ್ರಿ ಮಂತ್ರ ಹಾಡುತ್ತಿರುವ ಕೇಸರಿ ಪಡೆ
ಲಕ್ನೋ, ಜನವರಿ 29: ಉತ್ತರ ಪ್ರದೇಶದಲ್ಲಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿರುವ ಅಪ್ನಾ ದಳ ಮುಖ್ಯಸ್ಥೆ ಅನುಪ್ರಿಯಾ ಪಟೇಲ್ ಮತ್ತಷ್ಟು ಪಕ್ಷಗಳನ್ನು ತಮ್ಮ ಮೈತ್ರಿಕೂಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ಮಾತನಾಡಿದ್ದಾರೆ. ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ ಮುಖ್ಯಸ್ಥ ಓಂ ಪ್ರಕಾಶ್ ರಾಜ್‌ಭರ್ ಅವರನ್ನು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಅಥವಾ ಎನ್‌ಡಿಎಗೆ ಮರಳಿ ಕರೆತರಲು ಆಸಕ್ತಿ ತೋರಿದ್ದಾರೆ.
ಪೂರ್ವ ಉತ್ತರ ಪ್ರದೇಶದ ಕುರ್ಮಿಗಳ ಬೆಂಬಲವನ್ನು ಹೊಂದಿರುವ ಅನುಪ್ರಿಯಾ ಪಟೇಲ್ ನೇತೃತ್ವದ ಅಪ್ನಾ ದಳ ಪಕ್ಷವು ಬಿಜೆಪಿಯ ಅತಿದೊಡ್ಡ ಮಿತ್ರಪಕ್ಷವಾಗಿದೆ. 2014ರ ಲೋಕಸಭೆ ಚುನಾವಣೆಯ ಮೊದಲಿನಿಂದಲೂ ಎರಡು ಪಕ್ಷಗಳ ನಡುವೆ ಮೈತ್ರಿಯಿದೆ. ಈ ಹಿಂದೆ ನಡೆದ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 80 ಸ್ಥಾನಗಳ ಪೈಕಿ ಬಿಜೆಪಿ 71 ಸ್ಥಾನಗಳನ್ನು ಗೆದ್ದುಕೊಂಡಿದ್ದು, ಅಪ್ನಾ ದಳ ಇನ್ನೂ ಎರಡು ಸ್ಥಾನಗಳನ್ನು ಮೈತ್ರಿಕೂಟಕ್ಕೆ ಸೇರಿಸಿತ್ತು.
ಕಳೆದ ಬಾರಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ ಮುಖ್ಯಸ್ಥ ಓಂ ಪ್ರಕಾಶ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರು. ರಾಜ್ಯ ಸರ್ಕಾರದಲ್ಲಿ ಅವರಿಗೆ ಸಚಿವ ಸ್ಥಾನವನ್ನೂ ನೀಡಲಾಗಿದ್ದು, 2019ರ ಲೋಕಸಭೆ ಚುನಾವಣೆಯ ಹೊಸ್ತಿಲಿನಲ್ಲಿ ಮೊದಲು ಎನ್‌ಡಿಎಗೆ ತೊರೆದಿದ್ದರು.

ಮೈತ್ರಿಕೂಟದಿಂದ ಬಿಜೆಪಿಗೆ ಲಾಭ:
ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವ ರಾಷ್ಟ್ರೀಯ ಲೋಕದಳ ಮುಖ್ಯಸ್ಥ ಜಯಂತ್ ಚೌಧರಿ ಅನ್ನು ಬಿಜೆಪಿಗೆ ಸೇರಿಸಿಕೊಳ್ಳುವ ಪ್ರಯತ್ನ ವಿಫಲ ಆದಂತೆ ತೋರುತ್ತಿದೆ. ಇದರ ಬೆನ್ನಲ್ಲೇ ಬಿಜೆಪಿ ಬಿಟ್ಟು ಹೋಗಿರುವ ಎಸ್‌ಬಿಎಸ್‌ಪಿ ಮುಖ್ಯಸ್ಥರನ್ನು ಮೈತ್ರಿಕೂಟಕ್ಕೆ ಸೇರಿಸಿಕೊಳ್ಳುವುದರಿಂದ ಬಿಜೆಪಿಗೆ ಲಾಭವಾಗಲಿದೆ ಎನ್ನುವುದು ಎಂಎಸ್ ಪಟೇಲ್ ಲೆಕ್ಕಾಚಾರವಾಗಿದೆ. ಏಕೆಂದರೆ ಓಂ ಪ್ರಕಾಶ್ ರಾಜ್‌ಭರ್ ಪಕ್ಷವು ಇತರ ಹಿಂದುಳಿದ ವರ್ಗಗಳ ಬೆಂಬಲವನ್ನು ಹೊಂದಿದೆ. ಅದೇ ರೀತಿ ಜಯಂತ್ ಚೌಧರಿ ಅವರ ಪಕ್ಷವು ಪಶ್ಚಿಮ ಯುಪಿಯಲ್ಲಿ ಪ್ರಬಲವಾಗಿದ್ದು, ಜಾಟ್‌ಗಳು ಬಹುತೇಕ ಎಲ್ಲಾ ಸ್ಥಾನಗಳಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.
ಬಿಜೆಪಿ ಮತ್ತು ಅಪ್ನಾ ದಳ ನಡುವಿನ ಮೈತ್ರಿ:
ಕಳೆದ 2017ರಲ್ಲಿ ನಡೆದ ಉತ್ತರ ಪ್ರದೇಶ ಚುನಾವಣೆಯಲ್ಲಿ ಅಪ್ನಾ ದಳ 11 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು, 2022ರ ವಿಧಾನಸಭೆ ಚುನಾವಣೆಯಲ್ಲಿ ಹಿಂದಿಗಿಂತ ಹೆಚ್ಚು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಅಪ್ನಾ ದಳ ಮುಖ್ಯಸ್ಥೆ ಅನುಪ್ರಿಯಾ ಪಟೇಲ್ ಈಗಾಗಲೇ ಹೇಳಿದ್ದಾರೆ. ಪೂರ್ವ ಉತ್ತರ ಪ್ರದೇಶದಲ್ಲಿ ಅಪ್ನಾ ದಳವು ಕುರ್ಮಿಗಳ ಅಪಾರ ಬೆಂಬಲವನ್ನು ಹೊಂದಿದೆ. ಪ್ರಸ್ತುತ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷದ ಅತಿದೊಡ್ಡ ಮಿತ್ರ ಪಕ್ಷವಾಗಿದೆ.
11ರಲ್ಲಿ 9 ಸ್ಥಾನಗಳನ್ನು ಗೆದ್ದಿದ್ದ ಅಪ್ನಾ ದಳ:
ಕಳೆದ 2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಸಂಪೂರ್ಣ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಿತು. ಅಂದು ರಾಜ್ಯದ 11 ವಿಧಾನಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ ಅಪ್ನಾ ದಳ ಈ ಪೈಕಿ 9 ಕ್ಷೇತ್ರಗಳನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. 2019ರ ಲೋಕಸಭೆ ಚುನಾವಣೆ ಸಂದರ್ಭಕ್ಕೂ ಮೊದಲು "ಬಿಜೆಪಿ ತನ್ನ ಮಿತ್ರಪಕ್ಷಗಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ," ಎಂದು ಆರೋಪಿಸಿ ಮೈತ್ರಿ ಕಡಿದುಕೊಳ್ಳುವ ಬೆದರಿಕೆ ಹಾಕಿತ್ತು.
ರಾಜ್ಯದಲ್ಲಿಯೂ ಅದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದಿತ್ತು ಮತ್ತು ಮಿತ್ರರನ್ನು ನಡೆಸಿಕೊಳ್ಳುವ ಬಗ್ಗೆ ದೂಷಿಸಲಾಗಿತ್ತು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರವು ಕೆಳಜಾತಿಗಳು ಎಂದು ಕರೆಯಲ್ಪಡುವವರ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಲಾಗಿತ್ತು. ರಾಜ್ಯ ಬಿಜೆಪಿ ನಾಯಕತ್ವವು ನಮಗೆ ಅರ್ಹವಾದ ಗೌರವವನ್ನು ನೀಡುತ್ತಿಲ್ಲ" ಎಂದು ಅನುಪ್ರಿಯಾ ಪಟೇಲ್ ಅವರ ಪತಿ, ಅಪ್ನಾ ದಳದ ನಾಯಕ ಆಶಿಶ್ ಪಟೇಲ್ ಕೇಂದ್ರ ನಾಯಕತ್ವದ ಮಧ್ಯಸ್ಥಿಕೆಗೆ ಕೋರಿದ್ದರು. ಕಳೆದ ಜುಲೈನಲ್ಲಿ ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಆರೋಗ್ಯ ಖಾತೆಯನ್ನು ಹೊಂದಿದ್ದ ಅನುಪ್ರಿಯಾ ಪಟೇಲ್ ಅವರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ನೀಡಲಾಯಿತು.
ಉತ್ತರ ಪ್ರದೇಶದಲ್ಲಿ ಏಳು ಹಂತಗಳಲ್ಲಿ ಮತದಾನ:
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, ಫೆಬ್ರವರಿ 14, ಫೆಬ್ರವರಿ 20, ಫೆಬ್ರವರಿ 23, ಫೆಬ್ರವರಿ 27, ಮಾರ್ಚ್ 3 ಮತ್ತು ಮಾರ್ಚ್ 7ರಂದು ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಅಂತಿಮವಾಗಿ ಮಾರ್ಚ್ 10ರಂದು ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ, ಕಾಂಗ್ರೆಸ್ ಮತ್ತು ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷದ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ.












Click it and Unblock the Notifications