ಹಸ್ತಿನಾಪುರದ ಹಿನ್ನೆಲೆ: ಉತ್ತರ ಪ್ರದೇಶದ ಈ ಕ್ಷೇತ್ರದಲ್ಲಿ ಗೆದ್ದವರದ್ದೇ ಸರ್ಕಾರ!
ಲಕ್ನೋ, ಫೆಬ್ರವರಿ 9: ಮಹಾಭಾರತದಲ್ಲಿ ಪಾಂಡವರ ರಾಜಧಾನಿ ಎನಿಸಿದ ಹಸ್ತಿನಾಪುರ ಕ್ಷೇತ್ರ ಇಂದಿಗೂ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಉತ್ತರ ಪ್ರದೇಶ ಮೀರತ್ ಜಿಲ್ಲೆಯ ಹಸ್ತಿನಾಪುರ ವಿಧಾನಸಭೆ ಕ್ಷೇತ್ರದ ಮೇಲೆ ರಾಜ್ಯದ ಜನರ ಲಕ್ಷ್ಯ ನೆಟ್ಟಿದೆ. ಈ ಕ್ಷೇತ್ರವು ವಿಶೇಷ ಮಹತ್ವ ಪಡೆದುಕೊಳ್ಳುವುದಕ್ಕೂ ಒಂದು ಕಾರಣವಿದೆ.
ಉತ್ತರ ಪ್ರದೇಶದ ಹಸ್ತಿನಾಪುರ ವಿಧಾನಸಭೆ ಕ್ಷೇತ್ರದಲ್ಲಿ ಯಾವ ಪಕ್ಷವು ಗೆಲುವು ಸಾಧಿಸುತ್ತದೆಯೋ ಅದೇ ಪಕ್ಷವು ರಾಜ್ಯದಲ್ಲಿ ಸರ್ಕಾರವನ್ನು ರಚಿಸಲಿದೆ ಎಂದು ನಂಬಿಕೆಯಿದೆ. ಈ ನಂಬಿಕೆಗೆ ಪೂರಕವಾದ ಹಿನ್ನೆಲೆಯೂ ಇದೆ. 1957ರಲ್ಲಿ ಮೊದಲ ಬಾರಿ ಹಸ್ತಿನಾಪುರ ವಿಧಾನಸಭೆ ಕ್ಷೇತ್ರವಾಗಿ ಘೋಷಣೆಯಾಗಿದ್ದು, ಮೊದಲು ಗೆಲುವು ಸಾಧಿಸಿದ ಕಾಂಗ್ರೆಸ್ ಸರ್ಕಾರ ರಚಿಸುವಲ್ಲಿಯೂ ಯಶಸ್ವಿಯಾಗಿತ್ತು. ಅಂದಿನಿಂದ ಇತ್ತೀಚಿನ 2017ರ ಚುನಾವಣೆಯವರೆಗಿನ ಇತಿಹಾಸವನ್ನು ನೋಡಿದಾಗ ಈ ಕ್ಷೇತ್ರದಲ್ಲಿ ಗೆದ್ದ ಪಕ್ಷವೇ ಸರ್ಕಾರವನ್ನು ರಚಿಸಿರುವುದು ಕಂಡು ಬಂದಿದೆ.
ಹಿಂದೂ ಪುರಾಣಗಳ ಪ್ರಕಾರ, ಉತ್ತರ ಪ್ರದೇಶದ ಹಸ್ತಿನಾಪುರವು ಪಾಂಡವರ ರಾಜಧಾನಿ ಆಗಿದೆ. ಮಹಾಭಾರತ ಯುದ್ಧದ ನಂತರದಲ್ಲಿ ಪಾಂಡವರು ಇದೇ ಹಸ್ತಿನಾಪುರವನ್ನು ತಮ್ಮ ರಾಜಧಾನಿ ಆಗಿ ಮಾಡಿಕೊಂಡಿದ್ದರು. ಇಂಥ ಕ್ಷೇತ್ರದ ಹಿನ್ನೆಲೆ ಮತ್ತು ಇತಿಹಾಸದ ಜೊತೆಗೆ ನಂಬಿಕೆ ಹಿಂದಿನ ಕಾರಣವನ್ನು ಈ ವರದಿಯಲ್ಲಿ ತಿಳಿಯೋಣ.

1957ರಲ್ಲಿ ಹಸ್ತಿನಾಪುರದ ಮೊದಲ ಫಲಿತಾಂಶ
ಉತ್ತರ ಪ್ರದೇಶದ ಹಸ್ತಿನಾಪುರದಲ್ಲಿ 1957ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿ ಬಿಷಂಭರ್ ಸಿಂಗ್ ಗೆಲುವು ಸಾಧಿಸಿದ್ದರು. ಇವರ ವಿರುದ್ಧ ಸ್ಪರ್ಧಿಸಿದ್ದ ಕಮ್ಯುನಿಷ್ಟ್ ಪಾರ್ಟಿ ಆಫ್ ಇಂಡಿಯಾ(CPI) ಅಭ್ಯರ್ಥಿ ಪ್ರೀತಂ ಸಿಂಗ್ ಸೋಲು ಕಂಡಿದ್ದರು. ಅಂದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿದ್ದು, ಸಂಪೂರ್ಣಾನಂದ್ ರಾಜ್ಯದ ಮುಖ್ಯಮಂತ್ರಿ ಆಗಿ ಆಯ್ಕೆ ಆಗಿದ್ದರು. 1962 ಮತ್ತು 1967ರಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳೇ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದು, ಕೈ ಪಕ್ಷಕ್ಕೆ ಅಧಿಕಾರದ ಗದ್ದುಗೆ ಸಿಕ್ಕಿತ್ತು. 1967ರವರೆಗೂ ಮೀರತ್ ಜಿಲ್ಲೆಯ ಎಲ್ಲಾ ವಿಧಾನಸಭೆ ಕ್ಷೇತ್ರಗಳನ್ನು ಪರಿಶಿಷ್ಟ ಜಾತಿ(SC)ಗೆ ಮೀಸಲು ಇರಿಸಲಾಗಿತ್ತು.

1969ರಲ್ಲಿ ಕಾಂಗ್ರೆಸ್ ಕೈ ತಪ್ಪಿದ ಅಧಿಕಾರ
ಉತ್ತರ ಪ್ರದೇಶದಲ್ಲಿ ಮೊದಲ ಬಾರಿ 1969ರಲ್ಲಿ ಕಾಂಗ್ರೆಸ್ ಅಧಿಕಾರವನ್ನು ಕಳೆದುಕೊಂಡಿತು. 1967ರಲ್ಲಿ ಕಾಂಗ್ರೆಸ್ ಪಕ್ಷದಿಂದ ಹೊರ ನಡೆದ ಚೌಧರಿ ಚರಣ್ ಸಿಂಗ್ ಭಾರತೀಯ ಕ್ರಾಂತಿ ದಳ ಪಕ್ಷವನ್ನು ಸ್ಥಾಪಿಸಿದರು, ಅಂದು ಇದೇ ಹಸ್ತಿನಾಪುರದಲ್ಲಿ ಭಾರತೀಯ ಕ್ರಾಂತಿ ದಳದ ಅಭ್ಯರ್ಥಿ ಆಶಾರಾಮ್ ಇಂದು ಗೆಲುವು ಸಾಧಿಸಿದ್ದರು. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋತ ವರ್ಷವೇ ಪಕ್ಷ ಅಧಿಕಾರ ಕಳೆದುಕೊಂಡಿತು. 1969ರಲ್ಲಿ ಚೌಧರಿ ಚರಣ್ ಸಿಂಗ್ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದರು.

1974ರಲ್ಲಿ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಯುಪಿ ಗದ್ದುಗೆ
ಕಾಂಗ್ರೆಸ್ ಅಭ್ಯರ್ಥಿ ರೇವತಿ ರಮಣ್ ಮೌರ್ಯ 1974ರಲ್ಲಿ ಹಸ್ತಿನಾಪುರದಿಂದ ಗೆಲುವಿನ ಪತಾಕೆ ಹಾರಿಸಿದರು. ಅಂದು ಮತ್ತೊಮ್ಮೆ ಸರ್ಕಾರ ರಚಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದ್ದು, ಹೇಮವತಿ ನಂದನ್ ಬಹುಗುಣ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. 1976ರಲ್ಲಿಯೂ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಎನ್ ಡಿ ತಿವಾರಿ ಮುಖ್ಯಮಂತ್ರಿಯಾಗಿದ್ದರು.
1977ರಲ್ಲಿ ಮತ್ತೆ ಚಿತ್ರಣ ಬದಲಾಗಿದ್ದು, ರೇವತಿ ರಮಣ್ ಮೌರ್ಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಹಸ್ತಿನಾಪುರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರು. ಅಂದು ಜನತಾ ಪಕ್ಷದ ಮುಖ್ಯಸ್ಥ ರಾಮ ನರೇಶ್ ಯಾದವ್ ರಾಜ್ಯದ ಮುಖ್ಯಮಂತ್ರಿ ಆದರು.
1980ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಗ್ಗರ್ ಸಿಂಗ್ ಗೆಲುವು ಸಾಧಿಸಿದ್ದು, ಪಕ್ಷದ ಮುಖಂಡ ವಿಶ್ವನಾಥ್ ಪ್ರತಾಪ್ ಸಿಂಗ್ ಮುಖ್ಯಮಂತ್ರಿ ಆಗಿ ಆಯ್ಕೆ ಆಗಿದ್ದರು. 1985ರಲ್ಲಿ ಹಸ್ತಿನಾಪುರದ ಕಾಂಗ್ರೆಸ್ ಅಭ್ಯರ್ಥಿ ಹರ್ಷರಣ್ ಸಿಂಗ್ ಜಯಭೇರಿ ಬಾರಿಸುತ್ತಿದ್ದಂತೆ ಎನ್ ಡಿ ತಿವಾರಿ ಎರಡನೇ ಬಾರಿ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದರು.
1989ರಲ್ಲಿ ಜನತಾ ಪಕ್ಷದ ಅಭ್ಯರ್ಥಿ ಜಗ್ಗಡ್ ಸಿಂಗ್ ಹಸ್ತಿನಾಪುರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದು, ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದರು. ಹಸ್ತಿನಾಪುರದಲ್ಲಿ 11 ಮತ್ತು 12ನೇ ಅವಧಿಗೆ ಚುನಾವಣೆ ನಡೆದಿರಲಿಲ್ಲ. ತದನಂತರ 1996ರಲ್ಲಿ ಬಹುಜನ ಸಮಾಜವಾದಿ ಪಕ್ಷದ ಅಭ್ಯರ್ಥಿ ಅತುಲ್ ಖಟಿಕ್ ಹಸ್ತಿನಾಪುರದಲ್ಲಿ ಗೆಲುವು ಸಾಧಿಸಿದ್ದು, ಆ ಪಕ್ಷವೇ ಅಧಿಕಾರಕ್ಕೆ ಬಂದಿತ್ತು.
2002ರಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಪ್ರಭು ದಯಾಳ್ ಬಾಲ್ಮಿಕಿ ಹಸ್ತಿನಾಪುರದಲ್ಲಿ ಗೆಲುವು ಸಾಧಿದ್ದರು. ಈ ಅವಧಿಯಲ್ಲಿ ಒಂದು ವರ್ಷದವರೆಗೆ ಮಾಯಾವತಿ ಮುಖ್ಯಮಂತ್ರಿ ಆದರೆ, ನಂತರದ ಅವಧಿಗೆ ಮುಲಾಯಂ ಸಿಂಗ್ ಯಾದವ್ ಸಿಎಂ ಆಗಿದ್ದರು. 2007ರಲ್ಲಿ ಬಹುಜನ ಸಮಾಜವಾದಿ ಪಕ್ಷದ ಯೋಗೇಶ್ ವರ್ಮಾ ಗೆಲುವು ಸಾಧಿಸಿದ್ದು, ಮಾಯಾವತಿ ಮತ್ತೊಮ್ಮೆ ಅಧಿಕಾರಕ್ಕೆ ಏರಿದರು.
2012ರಲ್ಲಿ ಹಸ್ತಿನಾಪುರ ವಿಧಾನಸಭೆ ಕ್ಷೇತ್ರದಲ್ಲಿ ಯೋಗೇಶ್ ವರ್ಮಾ ವಿರುದ್ಧ ಪ್ರಭು ದಯಾಳ್ ಬಾಲ್ಮಿಕಿ ಗೆಲುವು ಸಾಧಿಸುತ್ತಿದ್ದಂತೆ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದರು. 2017ರಲ್ಲಿ ಬಿಜೆಪಿ ಅಭ್ಯರ್ಥಿ ದಿನೇಶ್ ಖಟಿಕ್ ಹಸ್ತಿನಾಪುರದಲ್ಲಿ ಗೆಲುವು ಸಾಧಿಸಿದ್ದು, ಬಿಜೆಪಿಯ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿ ಆಗಿ ಆಯ್ಕೆಯಾದರು.

2022ರಲ್ಲಿ ಹೇಗಿದೆ ಹಸ್ತಿನಾಪುರದಲ್ಲಿ ಪೈಪೋಟಿ?
ಉತ್ತರ ಪ್ರದೇಶದ ಮೀರತ್ ಜಿಲ್ಲೆ ಹಸ್ತಿನಾಪುರ ವಿಧಾನಸಭೆ ಕ್ಷೇತ್ರದಲ್ಲಿ ಈ ಬಾರಿ ಗೆಲುವಿನ ಪೈಪೋಟಿ ಹೆಚ್ಚಾಗಿದೆ. ಬಿಜೆಪಿ ಅಭ್ಯರ್ಥಿಯಾಗಿ ದಿನೇಶ್ ಖಟಿಕ್ ಸ್ಪರ್ಧಿಸಿದ್ದಾರೆ. ಮಾಜಿ ಶಾಸಕ ಯೋಗೇಶ್ ವರ್ಮಾ ಈ ಬಾರಿ ಸಮಾಜವಾದಿ ಮತ್ತು ರಾಷ್ಟ್ರೀಯ ಲೋಕ ದಳ ಮೈತ್ರಿಕೂಟದ ಅಭ್ಯರ್ಥಿಯಾಗಿ ಆಖಾಡಕ್ಕೆ ಇಳಿದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಅರ್ಚನಾ ಗೌತಮ್ ಸ್ಪರ್ಧಿಸಿದ್ದರೆ, ಬಹುಜನ ಸಮಾಜವಾದಿ ಪಕ್ಷದಿಂದ ಸಂಜೀವ್ ಜಾತವ್ ಕಣದಲ್ಲಿದ್ದಾರೆ.
ಹಸ್ತಿನಾಪುರದಲ್ಲಿ ಗೆದ್ದವರೇ ರಾಜ್ಯದಲ್ಲಿ ಸರ್ಕಾರವನ್ನು ರಚಿಸುತ್ತಾರೆ. ಈ ಬಾರಿಯೂ ಕ್ಷೇತ್ರದ ಜನರು ನನಗೆ ಆಶೀರ್ವದಿಸುತ್ತಾರೆ, ಯೋಗಿ ಆದಿತ್ಯನಾಥ್ ಮತ್ತೊಂದು ಬಾರಿ ಮುಖ್ಯಮಂತ್ರಿ ಆಗಿ ಮುಂದುವರಿಯಲಿದ್ದಾರೆ ಎಂದು ಹಸ್ತಿನಾಪುರ ಶಾಸಕ ದಿನೇಶ್ ಖಟಿಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಚುನಾವಣೆ
ಉತ್ತರ ಪ್ರದೇಶದಲ್ಲಿ ಮೊದಲ ಹಂತದಲ್ಲಿ ಒಟ್ಟು 58 ವಿಧಾನಸಭೆ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ರಾಜ್ಯದಲ್ಲಿ ಒಟ್ಟು ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಫೆಬ್ರವರಿ 10, ಫೆಬ್ರವರಿ 14, ಫೆಬ್ರವರಿ 20, ಫೆಬ್ರವರಿ 23, ಫೆಬ್ರವರಿ 27, ಮಾರ್ಚ್ 3 ಮತ್ತು ಮಾರ್ಚ್ 7ರಂದು ಮತದಾನ ಪ್ರಕ್ರಿಯೆ ನಡೆಯಲಿದೆ. ಮಾರ್ಚ್ 10ರಂದು ಅಂತಿಮ ಫಲಿತಾಂಶ ಹೊರ ಬೀಳಲಿದೆ. ರಾಜ್ಯದ 403 ವಿಧಾನಸಭೆ ಕ್ಷೇತ್ರಗಳಲ್ಲಿ ಈ ಬಾರಿ ಒಟ್ಟು 15.06 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ, ಕಾಂಗ್ರೆಸ್ ಮತ್ತು ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷದ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆದಿದೆ.












Click it and Unblock the Notifications