ಸೆಪ್ಟೆಂಬರ್ 12ಕ್ಕೆ ಜ್ಞಾನವಾಪಿ ಮಸೀದಿ ಪ್ರಕರಣದ ತೀರ್ಪು
ಲಕ್ನೋ, ಆಗಸ್ಟ್ 24: ಜ್ಞಾನವಾಪಿ ಮಸೀದಿ-ಶೃಂಗಾರ್ ಗೌರಿ ಕಾಂಪ್ಲೆಕ್ಸ್ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಾರಣಾಸಿ ಜಿಲ್ಲಾ ನ್ಯಾಯಾಲಯವು ಸೆಪ್ಟೆಂಬರ್ 12ಕ್ಕೆ ತೀರ್ಪನ್ನು ಕಾಯ್ದಿರಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಹಿಂದೂ ಮತ್ತು ಮುಸ್ಲಿಂ ಎರಡೂ ಕಡೆಯವರು ತಮ್ಮ ವಾದವನ್ನು ಮುಕ್ತಾಯಗೊಳಿಸಿದ್ದಾರೆ.
ಎರಡೂ ಕಡೆಯವರು ತಮ್ಮ ವಾದವನ್ನು ಪೂರ್ಣಗೊಳಿಸಿದರು. ನಂತರ ಜಿಲ್ಲಾ ನ್ಯಾಯಾಧೀಶ ಎ.ಕೆ.ವಿಶ್ವೇಶ್ ಆದೇಶವನ್ನು ಸೆಪ್ಟೆಂಬರ್ 12ಕ್ಕೆ ಕಾಯ್ದಿರಿಸಿದರು ಎಂದು ಹಿಂದೂಗಳ ಪರ ವಕೀಲ ಮದನ್ ಮೋಹನ್ ಯಾದವ್ ತಿಳಿಸಿದ್ದಾರೆ. ಇದರ ಮಧ್ಯೆ ಮಸೀದಿಯ ಹೊರಗೋಡೆಯ ಮೇಲೆ ವಿಗ್ರಹಗಳಿರುವ ಹಿಂದೂ ದೇವತೆಗಳ ದೈನಂದಿನ ಪೂಜೆಗೆ ಅನುಮತಿ ನೀಡುವಂತೆ ಕೋರಿ ಐವರು ಮಹಿಳೆಯರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಈ ಪ್ರಕರಣದಲ್ಲಿ ಅಂಜುಮನ್ ಇಂತಿಜಾಮಿಯಾ ಮಸೀದಿ ಸಮಿತಿಯನ್ನು ಪ್ರತಿನಿಧಿಸಿದ ವಕೀಲ ಶಮೀಮ್ ಅಹ್ಮದ್, ಜ್ಞಾನವಾಪಿ ಮಸೀದಿ ವಕ್ಫ್ ಆಸ್ತಿಯಾಗಿದ್ದು, ನ್ಯಾಯಾಲಯಕ್ಕೆ ಈ ವಿಷಯವನ್ನು ಕೇಳುವ ಹಕ್ಕು ಇಲ್ಲ. ಮಸೀದಿಗೆ ಸಂಬಂಧಿಸಿದ ಯಾವುದೇ ವಿಷಯವನ್ನು ಆಲಿಸುವ ಹಕ್ಕು ವಕ್ಫ್ ಮಂಡಳಿಗೆ ಮಾತ್ರ ಇದೆ ಎಂದು ವಾದಿಸಿದರು.

ವಾದದ ಬಗ್ಗೆ ಮದನ್ ಮೋಹನ್ ಯಾದವ್ ಪ್ರತಿಕ್ರಿಯೆ
ವಾರಣಾಸಿ ಜಿಲ್ಲಾ ನ್ಯಾಯಾಲಯದಲ್ಲಿ ಮುಸ್ಲಿಂ ಪರ ವಕೀಲರು ತಮ್ಮ ಹಳೆಯ ಹೇಳಿಕೆಗಳನ್ನು ಪುನರಾವರ್ತಿಸಿದ್ದಾರೆ ಎಂದು ಹಿಂದೂ ಪರ ವಕೀಲ ಮದನ್ ಮೋಹನ್ ಯಾದವ್ ಹೇಳಿದರು. ಇನ್ನೊಂದು ಕಡೆಯವರು ಹಾಜರುಪಡಿಸಿದ ದಾಖಲೆಗಳು ಒಂದು ಅಲಮ್ಗೀರ್ ಮಸೀದಿಯ ದಾಖಲೆಗಳಾಗಿವೆ. ಅದು ದೇವಾಲಯವನ್ನು ಕೆಡವಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ನಾವು ನ್ಯಾಯಾಲಯಕ್ಕೆ ತಿಳಿಸಿದ್ದೇವೆ ಎಂದು ಯಾದವ್ ಹೇಳಿದರು.

ಪೊಲೀಸ್ ನಿಯಂತ್ರಣಕ್ಕೆ ಮಸೀದಿಯ ಒಂದು ಕಾಂಪ್ಲೆಕ್ಸ್
ಕಳೆದ 1992 ರಲ್ಲಿ ಉತ್ತರ ಪ್ರದೇಶ ಸರ್ಕಾರ ಮತ್ತು ವಕ್ಫ್ ಮಂಡಳಿ ನಡುವಿನ ಒಪ್ಪಂದದ ನಂತರ ಜ್ಞಾನವಾಪಿ ಕಾಂಪ್ಲೆಕ್ಸ್ ಒಂದು ಭಾಗವನ್ನು ಪೊಲೀಸ್ ನಿಯಂತ್ರಣ ಕೊಠಡಿಯಾಗಿ ಪರಿವರ್ತಿಸಲಾಯಿತು ಎಂದು ಮುಸ್ಲಿಂ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ವಕ್ಫ್ ಮಂಡಳಿ ಪರ ವಕೀಲರು ಹೇಳುವುದೇನು?
ಕಾಶಿ ವಿಶ್ವನಾಥ ಕಾರಿಡಾರ್ ನಿರ್ಮಾಣದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಜ್ಞಾನವಾಪಿ ಮಸೀದಿಯ ಸ್ವಲ್ಪ ಜಾಗವನ್ನು ತೆಗೆದುಕೊಂಡು ಅದರ ಬದಲಾಗಿ ಬೇರೆ ಸ್ಥಳದಲ್ಲಿ ಭೂಮಿಯನ್ನು ಒದಗಿಸಿದೆ ಎಂದು ಅವರು ಹೇಳಿದರು. ಇದರಿಂದ ಜ್ಞಾನವಾಪಿ ಮಸೀದಿ ವಕ್ಫ್ ಆಸ್ತಿ ಎಂಬುದು ಸಾಬೀತಾಗಿದೆ ಎಂದು ಅಹ್ಮದ್ ನ್ಯಾಯಾಲಯಕ್ಕೆ ತಿಳಿಸಿದರು.

ಮಸೀದಿ ನಿರ್ಮಾಣಕ್ಕೂ ಮೊದಲು ದೇವಸ್ಥಾನ ತೆರವು
ಕಳೆದ 1669ರಲ್ಲಿ ಔರಂಗಜೇಬನು ದೇವಾಲಯವನ್ನು ಕೆಡವಿ ಆ ಸ್ಥಳದಲ್ಲಿ ಮಸೀದಿಯನ್ನು ನಿರ್ಮಿಸಿದನು ಎಂದು ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯು ನ್ಯಾಯಾಲಯಕ್ಕೆ ತಿಳಿಸಿತು ಎಂದು ಯಾದವ್ ಪ್ರತಿಪಾದಿಸಿದ್ದರು. ಭಾರತದಲ್ಲಿ 'ಸನಾತನಿ'ಗಳ ಆಡಳಿತವಿರುವಾಗ ದೇವಸ್ಥಾನಗಳನ್ನು ಕೆಡವಿ ಕಟ್ಟಿರುವ ಮಸೀದಿಗಳನ್ನು 'ಸನಾತನಿ'ಯವರಿಗೆ ಹಸ್ತಾಂತರಿಸಬೇಕು' ಎಂದರು.
ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಜಿಲ್ಲಾ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸುತ್ತಿದೆ. ಈ ಹಿಂದೆ ಕೆಳ ನ್ಯಾಯಾಲಯವು ಕಾಂಪ್ಲೆಕ್ಸ್ ವೀಡಿಯೊಗ್ರಾಫಿ ಸಮೀಕ್ಷೆಗೆ ಆದೇಶಿಸಿತ್ತು. ಮೇ 16ರಂದು ಸರ್ವೆ ಕಾರ್ಯ ಪೂರ್ಣಗೊಂಡಿದ್ದು, ಮೇ 19ರಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿತ್ತು. ಮುಸ್ಲಿಂ ಕಡೆಯಿಂದ ಸ್ಪರ್ಧಿಸಿದ್ದ ಜ್ಞಾನವಾಪಿ ಮಸೀದಿ-ಶೃಂಗಾರ್ ಗೌರಿ ಕಾಂಪ್ಲೆಕ್ಸ್‌ನ ವೀಡಿಯೋಗ್ರಫಿ ಸಮೀಕ್ಷೆಯ ವೇಳೆ ಶಿವಲಿಂಗ ಪತ್ತೆಯಾಗಿದೆ ಎಂದು ಹಿಂದೂ ಕಡೆಯವರು ಜಿಲ್ಲಾ ನ್ಯಾಯಾಲಯದಲ್ಲಿ ಪ್ರತಿಪಾದಿಸಿದ್ದರು.
ಉತ್ತರ ಪ್ರದೇಶದ ಜ್ಞಾನವಾಪಿ ಸಂಕೀರ್ಣದಲ್ಲಿರುವ ಮಸೀದಿಗೆ ಸಂಬಂಧಿಸಿದಂತೆ ಮೊದಲಿನಿಂದಲೂ ವಿವಾದವಿದೆ. 400 ವರ್ಷಗಳ ಹಿಂದೆ ದೇವಾಲಯವನ್ನು ಕೆಡವಿ ಅಲ್ಲಿ ಮಸೀದಿಯನ್ನು ನಿರ್ಮಿಸಲಾಯಿತು, ಅಲ್ಲಿ ಮುಸ್ಲಿಂ ಸಮುದಾಯದವರು ನಮಾಜ್ ಮಾಡುತ್ತಾರೆ ಎಂದು ಹಿಂದುಗಳು ದೂಷಿಸುತ್ತಿದ್ದಾರೆ. ಜ್ಞಾನವಾಪಿ ಮಸೀದಿಯನ್ನು ಅಂಜುಮನ್-ಎ-ಇಂತಜಾಮಿಯಾ ಸಮಿತಿಯು ನಡೆಸುತ್ತಿದೆ.
ಈ ಬಗ್ಗೆ 1991ರಲ್ಲಿ ವಾರಣಾಸಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು, ಜ್ಞಾನವಾಪಿ ಮಸೀದಿ ಇರುವ ಸ್ಥಳದಲ್ಲಿ ಹಿಂದೆ ವಿಶ್ವನಾಥ ದೇವರ ದೇಗುಲವಿದ್ದು, ಶೃಂಗಾರ್ ಗೌರಿಯನ್ನು ಪೂಜಿಸಲಾಗುತ್ತಿತ್ತು ಎನ್ನಲಾಗಿದೆ. ಜ್ಞಾನವಾಪಿ ಸಂಕೀರ್ಣವನ್ನು ಮುಸ್ಲಿಂ ಕಡೆಯಿಂದ ತೆರವು ಮಾಡಿ ಹಿಂದೂಗಳ ಸುಪರ್ದಿಗೆ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ವಾರಣಾಸಿಯ ಜ್ಞಾನವಾಪಿ ಕಾಂಪ್ಲೆಕ್ಸ್‌ನಲ್ಲಿರುವ ಬಾಬಾ ವಿಶ್ವನಾಥನ ದೇವಸ್ಥಾನ ಮತ್ತು ಮಸೀದಿಗೆ ಸಂಬಂಧಿಸಿದ ವಿವಾದ ಇದಾಗಿದೆ.












Click it and Unblock the Notifications