ಉತ್ತರ ಪ್ರದೇಶದಲ್ಲಿ ಎಸ್‌ಪಿಯ ಎಂಎಲ್‌ಸಿ ಅಭ್ಯರ್ಥಿ ಡಾ. ಕಫೀಲ್ ಖಾನ್?
ಲಕ್ನೋ, ಮಾರ್ಚ್ 15: ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ 2022ರ ಫಲಿತಾಂಶ ಹೊರಬಿದ್ದಿರುವುದರ ಬೆನ್ನಲ್ಲೇ ರಾಜ್ಯದ ವಿಧಾನ ಪರಿಷತ್ ಚುನಾವಣೆಗೆ ಸಮಾಜವಾದಿ ಪಕ್ಷ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಡಿಯೋರಿಯಾ-ಕುಶಿನಗರ ಕ್ಷೇತ್ರದಿಂದ ಡಾ.ಕಫೀಲ್ ಖಾನ್ ಅವರನ್ನು ಎಂಎಲ್‌ಸಿ ಅಭ್ಯರ್ಥಿಯಾಗಿ ಸಮಾಜವಾದಿ ಪಕ್ಷ ಕಣಕ್ಕಿಳಿಸಲು ಯೋಜನೆ ಹಾಕಿಕೊಳ್ಳುತ್ತಿದೆ. ಕಳೆದ 2017ರಲ್ಲಿ ಗೋರಖ್‌ಪುರದ ಬಿಆರ್‌ಡಿ ಆಸ್ಪತ್ರೆಯಲ್ಲಿ ನಡೆದ ಶಿಶು ಸಾವಿನ ಪ್ರಕರಣಗಳಲ್ಲಿ 9 ಮಂದಿ ಆರೋಪಿಗಳಲ್ಲಿ ಡಾ.ಖಾನ್ ಕೂಡ ಒಬ್ಬರಾಗಿದ್ದಾರೆ.
ಡಾ ಕಫೀಲ್ ಖಾನ್ ನಾಮನಿರ್ದೇಶನದ ಕುರಿತು ಸಮಾಜವಾದಿ ಪಕ್ಷದಿಂದ ಯಾವುದೇ ಅಧಿಕೃತ ಪ್ರಕಟಣೆ ಅಥವಾ ದೃಢೀಕರಣವಾಗಿಲ್ಲ. ಆದರೆ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರಿಗೆ ಭರವಸೆ ನೀಡಿದ್ದಾರೆ ಎಂದು ಶಿಶುವೈದ್ಯ ಕಫೀಲ್ ಖಾನ್ ಪ್ರಮುಖ ದಿನಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಅಖಿಲೇಶ್ ಜೊತೆಗಿನ ಫೋಟೋ ಪೋಸ್ಟ್:
ಇಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಜೊತೆಗಿರುವ ಫೋಟೋವೊಂದನ್ನು ಡಾ ಕಫೀಲ್ ಖಾನ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಹೇಳಿಕೆಗೆ ಮತ್ತಷ್ಟು ಪುಷ್ಠಿ ನೀಡುವಂತೆ ಮಾಡಿದೆ. "ಗೌರವಾನ್ವಿತ ಮಾಜಿ ಮುಖ್ಯಮಂತ್ರಿ ಶ್ರೀ ಯಾದವಖಿಲೇಶ್ ಸರ್ ಅವರನ್ನು ಭೇಟಿ ಮಾಡಿ #TheGorakhpurHospitalTragedy ನ ಪ್ರತಿಯನ್ನು ನೀಡಿದರು"
ಲಕ್ನೋದಲ್ಲಿ ಅಖಿಲೇಶ್ ಯಾದವ್ ಅವರನ್ನು ಭೇಟಿಯಾಗಿದ್ದು, ಎಸ್‌ಪಿ ಮುಖ್ಯಸ್ಥರು ಅವರನ್ನು ಡಿಯೋರಿಯಾ-ಕುಶಿನಗರ ಕ್ಷೇತ್ರದಿಂದ ಎಂಎಲ್‌ಸಿ ಅಭ್ಯರ್ಥಿಯನ್ನಾಗಿ ಮಾಡುವ ಬಗ್ಗೆ ಚಿಂತಿಸುತ್ತಿದ್ದಾರೆ ಎಂದು ಡಾ ಖಾನ್ ಖಾಸಗಿ ಸುದ್ದಿ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.
2017ರ ಶಿಶು ಸಾವಿನ ಪ್ರಕರಣದಲ್ಲಿ ಖಾನ್ ಅರೆಸ್ಟ್:
ಕಳೆದ 2017ರಲ್ಲಿ ಗೋರಖ್‌ಪುರದ ಬಿಆರ್‌ಡಿ ಆಸ್ಪತ್ರೆಯಲ್ಲಿ ನಡೆದ ಶಿಶು ಸಾವಿನ ಪ್ರಕರಣಗಳಲ್ಲಿ 9 ಮಂದಿ ಆರೋಪಿಗಳಲ್ಲಿ ಡಾ. ಕಫೀಲ್ ಖಾನ್ ಕೂಡಾ ಒಬ್ಬರಾಗಿದ್ದರು. ಆಸ್ಪತ್ರೆಯಲ್ಲಿ ಎನ್ಸೆಫಾಲಿಟಿಸ್ ಕಾರಣದಿಂದಾಗಿ ಹಲವಾರು ಸಾವುಗಳು ವರದಿಯಾದ ನಂತರ ವೈದ್ಯಕೀಯ ನಿರ್ಲಕ್ಷ್ಯಕ್ಕಾಗಿ ಅವರನ್ನು ಬಂಧಿಸಲಾಗಿತ್ತು. ಡಾ ಕಫೀಲ್ ಖಾನ್ ಅವರನ್ನು BRD ವೈದ್ಯಕೀಯ ಕಾಲೇಜಿನಿಂದ ಅಮಾನತುಗೊಳಿಸಲಾಗಿತ್ತು. ಏಪ್ರಿಲ್ 2018 ರಲ್ಲಿ ಬಿಡುಗಡೆಯಾದ ನಂತರ, ಡಾ ಖಾನ್ ಪಕ್ಷದ ಕಾರ್ಯಕರ್ತರಾದರು. ಯುಪಿ ಸರ್ಕಾರದ ವರದಿಯು ನಂತರ ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಲಾಯಿತು.
ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಬಹುಮತ:
2022ರಲ್ಲಿ ನಡೆದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸಂಪೂರ್ಣ ಬಹುಮತ ಸಿಕ್ಕಿದೆ. ಯೋಗಿ ಸರ್ಕಾರವು ಎರಡನೇ ಬಾರಿ ಗೆಲುವಿನ ಬಾವುಟ ಹಾರಿಸಿದೆ. ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷ 255 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ. ಬಿಜೆಪಿಗೆ ಸೆಡ್ಡು ಹೊಡೆದ ಸಮಾಜವಾದಿ ಪಕ್ಷವು 111 ಕ್ಷೇತ್ರಗಳಲ್ಲಿ ಗೆಲುವಿನ ಸೈಕಲ್ ಏರಿದೆ. ಅಪ್ನಾ ದಳ 12, ಬಹುಜನ ಸಮಾಜವಾದಿ ಪಕ್ಷ 1, ಜೆಡಿಎಲ್ 2, ನಿರ್ಬಲ್ ಇಂಡಿಯನ್ ಶೋಷಿತ ಹಮಾರಾ ಆಮ್ ದಳ 6, ರಾಷ್ಟ್ರೀಯ ಲೋಕ ದಳ 8, ಸುಹೇಲ್ದೇವ್ ಭಾರತೀಯ ಸಮಾಜ ಪಾರ್ಟಿ 6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ ಮಾತ್ರ ಕೇವಲ 2 ಕ್ಷೇತ್ರಗಳಲ್ಲಿ ಗೆದ್ದಿದೆ.












Click it and Unblock the Notifications