ಯುಪಿಯಲ್ಲಿ ಗೋಹತ್ಯೆ ಮಾಡಲು ಬಿಡಲ್ಲ: ಯೋಗಿ ಆದಿತ್ಯನಾಥ್
ಲಕ್ನೋ, ಫೆಬ್ರವರಿ 23: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಸುಗಳ ಭದ್ರತೆಯನ್ನು ಹೆಚ್ಚಿಸುವುದಾಗಿ ಬುಧವಾರ ಭರವಸೆ ನೀಡಿದ್ದಾರೆ. ರಾಜ್ಯ ಸರ್ಕಾರವು ರೈತರ ಹೊಲಗಳನ್ನು ಬಿಡಾಡಿ ದನಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ ಎಂದು ಭರವಸೆ ನೀಡಿದ್ದಾರೆ.
ಗೋವುಗಳನ್ನು ರಕ್ಷಿಸಲು 'ಗೋಶಾಲೆ'ಗಳನ್ನು ದೊಡ್ಡ ಪ್ರಮಾಣದಲ್ಲಿ ನಿರ್ಮಿಸಲಾಗುವುದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರತಿಪಾದಿಸಿದರು. "ನಾವು ಅಕ್ರಮ ಕಸಾಯಿಖಾನೆಗಳನ್ನು ಸಂಪೂರ್ಣವಾಗಿ ನಿಲ್ಲಿಸಿದ್ದೇವೆ. ನಾವು 'ಗೋಮಾತೆ'ಯನ್ನು ವಧೆ ಮಾಡಲು ಬಿಡುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ," ಎಂದು ಯೋಗಿ ಆದಿತ್ಯನಾಥ್ ಹೇಳಿದರು.
"ರೈತರ ಹೊಲಗಳನ್ನು ಬಿಡಾಡಿ ದನಗಳಿಂದ ರಕ್ಷಿಸುತ್ತೇವೆ," ಎಂದು ಅಮೇಥಿಯ ತಿಲೋಯ್ ವಿಧಾನಸಭಾ ಕ್ಷೇತ್ರದಲ್ಲಿ ರ್‍ಯಾಲಿಯನ್ನು ಉದ್ದೇಶಿಸಿ ಮುಖ್ಯಮಂತ್ರಿ ಹೇಳಿದರು. ಯೋಗಿ ರ್‍ಯಾಲಿ ಮೈದಾನದಲ್ಲಿ ರೈತರು ಬಿಡಾಡಿ ದನಗಳನ್ನು ಬಿಟ್ಟ ಸುಳ್ಳು ಸುದ್ದಿ ಪ್ರಚಾರವಾಗಿತ್ತು ಎಂಬುವುದನ್ನು ನಾವು ಈ ಸಂದರ್ಭದಲ್ಲಿ ಸ್ಮರಿಸಬಹುದು.

ಭಯೋತ್ಪಾದಕನ ಕುಟುಂಬವು ಸಮಾಜವಾದಿ ಪಕ್ಷದ ಪ್ರಚಾರಕ ಎಂದ ಯೋಗಿ
ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಅವರು ತಮ್ಮ ಪಕ್ಷ ಮತ್ತು ಅಹಮದಾಬಾದ್ ಸ್ಫೋಟದ ಅಪರಾಧಿಗಳಲ್ಲಿ ಒಬ್ಬನ ಸಂಬಂಧಿಯ ನಡುವಿನ ಸಂಬಂಧದ ಬಗ್ಗೆ "ಮೌನವನ್ನು ಕಾಯ್ದುಕೊಳ್ಳುತ್ತಿದ್ದಾರೆ" ಎಂದು ಆರೋಪಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, "ಭಯೋತ್ಪಾದಕನ ಕುಟುಂಬವು ಸಮಾಜವಾದಿ ಪಕ್ಷದ ಪ್ರಚಾರಕ," ಎಂದು ತಮ್ಮ ಆರೋಪವನ್ನು ಪುನರುಚ್ಚರಿಸಿದರು. ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿರುವ ಆರೋಪದ ಮೇಲೆ ಎಸ್‌ಪಿಯನ್ನು ಪ್ರಶ್ನಿಸಿದ ಯೋಗಿ ಆದಿತ್ಯನಾಥ್, "ಸಪಾ ಕಾ ಹಾಥ್ ಆಖಿರ್ ಕ್ಯೂಂ ಹೈ ಆಟಂಕಿಯೋಂ ಕೆ ಸಾಥ್ (ಸಮಾಜವಾದಿ ಪಕ್ಷವು ಭಯೋತ್ಪಾದಕರನ್ನು ಏಕೆ ಬೆಂಬಲಿಸುತ್ತಿದೆ)?," ಎಂದು ಕೇಳಿದರು.
2017ರಲ್ಲಿ ನಾವು ತೆಗೆದುಕೊಂಡ ಮೊದಲ ನಿರ್ಧಾರ ಬೆಳೆಗಾರರ ಸಾಲ ಮನ್ನಾ ಮಾಡುವುದು. ಇದಕ್ಕೆ ವ್ಯತಿರಿಕ್ತವಾಗಿ ರಾಮ ಜನ್ಮಭೂಮಿಯ ಮೇಲೆ ದಾಳಿ ನಡೆಸಿದ ಭಯೋತ್ಪಾದಕರ ವಿರುದ್ಧದ ಮೊಕದ್ದಮೆಗಳನ್ನು ಹಿಂಪಡೆಯಲು ಎಸ್‌ಪಿ ಸರ್ಕಾರ ಕ್ರಮ ಕೈಗೊಂಡಿತ್ತು. ಎಸ್‌ಪಿಗೆ ಬೆಂಬಲ ನೀಡುವುದು ಎಂದರೆ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವುದಾಗಿದೆ ಎಂದು ಬಿಜೆಪಿ ನಾಯಕ ಹೇಳಿದ್ದಾರೆ.
ಎಸ್‌ಪಿಗೆ ನೀಡುವ ಮತ ಭವಿಷ್ಯವನ್ನು ಹಾಳುಮಾಡುತ್ತದೆ ಎಂದ ಸಿಎಂ
ಎಸ್‌ಪಿಯ ಪ್ರತಿಯೊಂದು ಮತವೂ "ಭವಿಷ್ಯವನ್ನು ಹಾಳು ಮಾಡಿದಂತೆ" ಎಂದು ಹೇಳಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಹಿಂದಿನ ಎಸ್‌ಪಿ ಸರ್ಕಾರವು ನಿರ್ದಿಷ್ಟ ಸಮುದಾಯಕ್ಕೆ ಒಲವು ತೋರುತ್ತಿದೆ ಎಂದು ಆರೋಪಿಸಿದರು. "ರಾಜ್ಯದಲ್ಲಿ ಈದ್ ಮತ್ತು ಮೊಹರಂನಲ್ಲಿ ವಿದ್ಯುತ್ ಸರಬರಾಜು ಮಾಡಲಾಗುತ್ತಿತ್ತು, ಆದರೆ ಹೋಳಿ ಮತ್ತು ದೀಪಾವಳಿಯಂದು ಕಡಿತಗೊಳಿಸಲಾಯಿತು," ಎಂದು ಕೂಡಾ ದೂರಿದರು.
ಎಸ್ಪಿಯನ್ನು ತರಾಟೆಗೆ ತೆಗೆದುಕೊಂಡ ಯೋಗಿ ಆದಿತ್ಯನಾಥ್, ", 2017 ಕ್ಕಿಂತ ಮೊದಲು ಉತ್ತರ ಪ್ರದೇಶದಲ್ಲಿ ಉದ್ಯೋಗ ಖಾಲಿ ಇದ್ದಾಗಲೆಲ್ಲಾ 'ಸೈಫಾಯಿ ಕುಟುಂಬ' ಸುಲಿಗೆಗೆ ತೆರಳುತ್ತಿತ್ತು. ನಮ್ಮ ಸರ್ಕಾರ ಯುವಕರಿಗೆ 5 ಲಕ್ಷ ಸರ್ಕಾರಿ ಉದ್ಯೋಗಗಳನ್ನು ನೀಡಿದೆ," ಎಂದರು. ಇಟಾವಾ ಜಿಲ್ಲೆಯ ಸೈಫೈ ಗ್ರಾಮವು ಎಸ್‌ಪಿ ಸಂಸ್ಥಾಪಕ ಮತ್ತು ಅಖಿಲೇಶ್ ಯಾದವ್ ಅವರ ತಂದೆ ಮುಲಾಯಂ ಸಿಂಗ್ ಯಾದವ್ ಅವರ ಜನ್ಮಸ್ಥಳವಾಗಿದೆ.
ಎಸ್‌ಪಿಯ ಅಜೆಂಡಾದಲ್ಲಿ ಅಭಿವೃದ್ಧಿ ಎಂದಿಗೂ ಇರಲಿಲ್ಲ ಎಂದು ಹೇಳಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, "ಎಸ್‌ಪಿ, ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮತ್ತು ಕಾಂಗ್ರೆಸ್‌ನ ರಾಜಕೀಯದ ಮೂಲಗಳನ್ನು "ಜಾತಿ, ಮತ ಮತ್ತು ಧರ್ಮ" ಎಂದು ಗುರುತಿಸಿದ್ದಾರೆ ಎಂದು ಆರೋಪಿಸಿದರು. ತಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಪಟ್ಟಿ ಮಾಡಿದ ಮುಖ್ಯಮಂತ್ರಿಗಳು, ತಿಲೋಯಿ ವೈದ್ಯಕೀಯ ಕಾಲೇಜು ಕೂಡ ಆಗಿದೆ. ಆ ವೈದ್ಯಕೀಯ ಕಾಲೇಜಿಗೆ ನಾವು ಶಿಲಾನ್ಯಾಸ ಮಾಡಿದ್ದೇವೆ, ಸಮಾಜವಾದಿ ಪಕ್ಷಕ್ಕೆ ದೂರದೃಷ್ಟಿ ಇಲ್ಲದ ಕಾರಣ ಈ ವೈದ್ಯಕೀಯ ಕಾಲೇಜು ನೀಡಲು ಸಾಧ್ಯವಾಗಲಿಲ್ಲ ಎಂದು ಟೀಕೆ ಮಾಡಿದರು. (ಒನ್‌ಇಂಡಿಯಾ ಸುದ್ದಿ)












Click it and Unblock the Notifications