ಅಪರಾಧ ಕೃತ್ಯಗಳಲ್ಲಿ ಉತ್ತರ ಪ್ರದೇಶವೇ ನಂ.1: ಅಖಿಲೇಶ್ ಯಾದವ್ ಆರೋಪ
ಲಕ್ನೋ, ಫೆಬ್ರವರಿ 12: ಉತ್ತರ ಪ್ರದೇಶದಲ್ಲಿ ಕಾನೂನುಬಾಹಿರ ಚಟುವಟಿಕೆ ಮತ್ತು ಅಪರಾಧ ಕೃತ್ಯಗಳಿಗೆ ಈ ಹಿಂದಿನ ಸರ್ಕಾರಗಳು ಕಾರಣ ಎನ್ನುವ ಮೂಲಕ ಬಿಜೆಪಿ ಸರ್ಕಾರವು ರಾಜ್ಯದ ಮತದಾರರನ್ನು ವಂಚಿಸಲು ಪ್ರಯತ್ನಿಸುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.
ಸುವಾರ್‌ನಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಅಖಿಲೇಶ್ ಯಾದವ್ ಮಾತನಾಡಿದ್ದಾರೆ. "ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ(ಎನ್‌ಸಿಆರ್‌ಬಿ) ನೀಡಿದ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಬೇಕಿದೆ. ಉತ್ತರ ಪ್ರದೇಶವು ಇಂದು, ಮಹಿಳೆಯರ ವಿರುದ್ಧದ ಅಪರಾಧಗಳಲ್ಲಿ ನಂ. 1, ಕಸ್ಟಡಿ ಸಾವಿನಲ್ಲಿ ನಂ. 1, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಿಂದ ಬಂದಿರುವ ನೋಟಿಸ್‌ಗಳ ಸಂಖ್ಯೆಯಲ್ಲಿ ನಂ. 1 ಆಗಿದೆ. ಇದರ ಜೊತೆಗೆ ನಕಲಿ ಎನ್‌ಕೌಂಟರ್‌ಗಳಲ್ಲೂ ನಂ.1 ಆಗಿದೆ," ಎಂದು ಆರೋಪಿಸಿದ್ದಾರೆ.
ನೀವು ಐಪಿಎಸ್ ಅಧಿಕಾರಿಗಳೇ ನಾಪತ್ತೆ ಆಗಿರುವುದನ್ನು ಕೇಳಿದ್ದೀರಾ. ಅವರು ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ನಮ್ಮ ಕಡೆಗೆ ಬೆರಳು ಮಾಡಿ ತೋರಿಸುತ್ತಿದ್ದಾರೆ. "ಹತ್ರಾಸ್‌ನಲ್ಲಿ ನಡೆದಿದ್ದನ್ನು ನೀವು ಹೇಗೆ ಮರೆಯಲು ಸಾಧ್ಯ? ಪೊಲೀಸ್ ಮತ್ತು ಸರ್ಕಾರ ಏನು ಮಾಡಿದೆ. ಲಖಿಂಪುರ ಖೇರಿಯಲ್ಲಿ ಏನಾಯಿತು? ಲಕ್ನೋದಲ್ಲಿ ಆಪಲ್ ಉದ್ಯೋಗಿಗೆ ಏನಾಯಿತು? ಆತನನ್ನು ಕೊಲೆ ಮಾಡಲಾಗಿದೆ. ಗೋರಖ್‌ಪುರದಲ್ಲಿ ಉದ್ಯಮಿಯನ್ನು ಹೊಡೆದು ಕೊಂದಿದ್ದಾರೆ. ಜನರಿಗೆ ಇದೆಲ್ಲವೂ ನೆನಪಿದೆ," ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.

ಸರ್ಕಾರದ ವಿರುದ್ಧ ನಿಂತ ಮತದಾರ:
ಉತ್ತರ ಪ್ರದೇಶದಲ್ಲಿ ಜನರು ಮತ ಚಲಾಯಿಸುವುದಕ್ಕೆ ಹೊರ ಬರುತ್ತಿರುವ ರೀತಿಯನ್ನು ಗಮನಿಸಿದಾಗ, ಮೊದಲ ಹಂತದಲ್ಲಿ ಅವರು ಸರ್ಕಾರದ ವಿರುದ್ಧವಾಗಿರುವುದಾಗಿ ಹೇಳಿದ್ದಾರೆ. ಎರಡು ಮತ್ತು ಮೂರನೇ ಹಂತದಲ್ಲೂ ಅಂಥದ್ದೇ ಚಿತ್ರಣ ಮರುಕಳಿಸುವ ಸಾಧ್ಯತೆಯಿದೆ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ. ಸಮಾಜವಾದಿ ಪಕ್ಷ ಸರ್ಕಾರದ ಅವಧಿಯಲ್ಲಿ ಗೂಂಡಾ ರಾಜ್ಯ ಮತ್ತು ಅಪರಾಧಗಳ ಸಂಖ್ಯೆ ಹೆಚ್ಚಾಗಿದ್ದವು ಎಂಬ ಬಿಜೆಪಿ ಆರೋಪಕ್ಕೆ ಅಖಿಲೇಶ್ ಯಾದವ್ ಪ್ರತಿಕ್ರಿಯೆ ನೀಡಿದ್ದಾರೆ.
ಅಖಿಲೇಶ್ ವಿರುದ್ಧ ಅಮಿತ್ ಶಾ ಪ್ರಶ್ನೆ:
"ಮೊದಲ ಹಂತದ ಮತದಾನದ ಬಳಿಕ ಅಖಿಲೇಶ್ ಯಾದವ್ ನಿದ್ರೆ ಕಳೆದುಕೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ಮಾರ್ಚ್ 7ರವರೆಗೂ ನಡೆಯುವ ಏಳು ಹಂತಗಳ ಮತದಾನದ ಬಳಿಕ ಮಾರ್ಚ್ 10ರಂದು ಹೊರಬೀಳುವ ಅಂತಿಮ ಫಲಿತಾಂಶದ ದಿನ ರಾಜ್ಯದ ಒಟ್ಟು 403 ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿಯು 300ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದುಕೊಳ್ಳುತ್ತದೆ," ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಅಪರಾಧಗಳಿಗೆ ನಿಯಂತ್ರಣ:
ರಾಜ್ಯದಲ್ಲಿ ಬಿಜೆಪಿ ಸರ್ಕಾರವು ಏನು ಮಾಡಿದೆ ಎಂಬ ಅಖಿಲೇಶ್ ಯಾದವ್ ಪ್ರಶ್ನೆಗೆ ಕೇಂದ್ರ ಸಚಿವ ಅಮಿತ್ ಶಾ ಉತ್ತರಿಸಿದ್ದರು. "ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಕಾನೂನು ಸುವ್ಯವಸ್ಥೆಯನ್ನು ಮರುಸ್ಥಾಪಿಸಲಾಗಿದೆ. ನಾವು ಎಲ್ಲಾ ರೀತಿ ಅಪರಾಧಗಳನ್ನು ಕಡಿಮೆ ಮಾಡಿದ್ದು, ಗೂಂಡಾಗಳು ಮತ್ತು ಮಾಫಿಯಾಗಳ ಆಡಳಿತಕ್ಕೆ ನಿಯಂತ್ರಣ ಹೇರಿದ್ದೇವೆ," ಎಂದಿದ್ದರು.
ಅಪರಾಧ ಪ್ರೋತ್ಸಾಹಕ್ಕೆ ಮತ ಹಾಕಬೇಡಿ ಎಂದ ಯೋಗಿ:
ಸಮಾಜವಾದಿ, ಬಹುಜನ ಸಮಾಜವಾದಿ, ಕಾಂಗ್ರೆಸ್ ಪಕ್ಷಗಳು ತಮಗಾಗಿ ಬದುಕುತ್ತಿದ್ದು, ತಮ್ಮ ವಂಶಸ್ಥರನ್ನು ಮಾತ್ರ ಪ್ರೋತ್ಸಾಹಿಸುತ್ತಿದ್ದಾರೆ. ಒಂದು ವೇಳೆ ನಾವು ರಾಷ್ಟ್ರೀಯತೆ ಬಗ್ಗೆ ಮಾತನಾಡಿದರೆ, ಅವರು ಜಾತೀಯತೆ ಬಗ್ಗೆ ಮಾತನಾಡುತ್ತಾರೆ. ನಾವು ಅಭಿವೃದ್ಧಿ ಬಗ್ಗೆ ಮಾತನಾಡಿದರೆ, ಅವರು ಧಾರ್ಮಿಕತೆ ಬಗ್ಗೆ ಮಾತನಾಡುತ್ತಾರೆ. ನಾವು ಗನ್ನಾ(ಬೆಲ್ಲ)ದ ಬಗ್ಗೆ ಮಾತನಾಡಿದರೆ, ಅವರು ಜಿನ್ನಾ ಬಗ್ಗೆ ಮಾತನಾಡುತ್ತಾರೆ," ಎಂದು ದೂಷಿಸಿದ್ದಾರೆ.
ರಾಜ್ಯದಲ್ಲಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೊವಿಡ್-19 ಲಸಿಕೆ ಬಗ್ಗೆ ಪ್ರಚಾರ ಮಾಡಿದವರಿಗೆ ಮತ ನೀಡಿಬೇಕೇ ಹೊರತೂ, ಅಪರಾಧಿಗಳ ಬಗ್ಗೆ ಪ್ರಚಾರ ಮಾಡುವ ಮಾಫಿಯಾ ರಾಜರಿಗೆ ಮತ ಹಾಕಬೇಡಿ ಎಂದು ಮನವಿ ಮಾಡಿಕೊಂಡರು. ಸಮಾಜವಾದಿ ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ನಾನು ಪ್ರಶ್ನಿಸುತ್ತೇನೆ. ಅವರು ಎಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಂಬುದನ್ನು ತೋರಿಸಲಿ ಎಂದು ಸವಾಲು ಹಾಕಿದ್ದರು.
ಫೆಬ್ರವರಿ 14ರಂದು ಎರಡನೇ ಹಂತದ ಮತದಾನ:
ಉತ್ತರ ಪ್ರದೇಶದಲ್ಲಿ ಫೆಬ್ರವರಿ 14ರಂದು ಎರಡನೇ ಹಂತದ ಮತದಾನ ಪ್ರಕ್ರಿಯೆ ಆರಂಭವಾಗಲಿದೆ. ಎರಡನೇ ಹಂತದಲ್ಲಿ ರಾಜ್ಯದ 9 ಜಿಲ್ಲೆಗಳ 55 ವಿಧಾನಸಭೆ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಶಹರಾಂಪುರ್, ಶಹಜಹಾನ್‌ಪುರ, ಬಿಜ್ನೂರ್, ಅಮ್ರೋಹಾ, ಸಂಭಾಲ್, ಮೊರದಾಬಾದ್, ರಾಂಪುರ್, ಬರೇಲಿ, ಬುದೌನ್ ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ.












Click it and Unblock the Notifications