ಉತ್ತರ ಪ್ರದೇಶದಲ್ಲಿ ವರ್ಚುವಲ್ ಸಭೆ, ಡಿಜಿಟಲ್ ಪ್ರಚಾರಕ್ಕೆ ಹೇಗಿದೆ ಬಿಜೆಪಿ ಸಿದ್ಧತೆ

ನವದೆಹಲಿ, ಜನವರಿ 24: ಉತ್ತರ ಪ್ರದೇಶದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಅಲೆಯ ಮಧ್ಯೆ ಸಾಮಾಜಿಕ ಮಾಧ್ಯಮಗಳ ಮೂಲಕ ಮತದಾರರನ್ನು ತಲುಪುವುದಕ್ಕೆ ಭಾರತೀಯ ಜನತಾ ಪಕ್ಷ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ರಾಜ್ಯ ಬಿಜೆಪಿಯ ಸಾಮಾಜಿಕ ಮಾಧ್ಯಮಗಳ ಮುಖ್ಯಸ್ಥ ಅಂಕಿತ್ ಚಂದೇಲ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಕೊವಿಡ್-19 ಸೋಂಕಿನ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆ ಕೇಂದ್ರ ಚುನಾವಣಾ ಆಯೋಗವು ಭೌತಿಕ ಪ್ರಚಾರ ಮತ್ತು ಮೆರವಣಿಗೆಗಳಿಗೆ ನಿರ್ಬಂಧವನ್ನು ವಿಧಿಸಿದೆ. ಮನೆ ಮನೆ ಪ್ರಚಾರಕ್ಕೂ ನಿಗದಿತ ನಿರ್ಬಂಧವನ್ನು ವಿಧಿಸಲಾಗಿದೆ. ಈ ಹಂತದಲ್ಲಿ ನಾವು ವರ್ಚುವಲ್ ರ್‍ಯಾಲಿಗಳ ಮೂಲಕ ಜನರನ್ನು ತಲುಪಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಈ ತಿಂಗಳಾಂತ್ಯದ ವೇಳೆಗೆ ಬಿಜೆಪಿಯು ತನ್ನ ವರ್ಚುವಲ್ ರ್‍ಯಾಲಿಗಳನ್ನು ಆರಂಭಿಸಲಿದೆ ಎಂದು ಮಾಹಿತಿ ನೀಡಿದ್ದಾರೆ.

ಕಳೆದ 2021ರಲ್ಲಿ ಎದುರಾದ ಕೊವಿಡ್-19 ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯ ಸಂದರ್ಭದಲ್ಲಿಯೂ ಈ ವರ್ಚುವಲ್ ಸಭೆಗಳು ಮತ್ತು ಪ್ರಚಾರದ ಬಗ್ಗೆ ಬಿಜೆಪಿಯು ತರಬೇತಿಯನ್ನು ಶುರು ಮಾಡಿಕೊಂಡಿತ್ತು. ಈ ತರಬೇತಿ ಹಂತದಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಸ್ಪೃತಿ ಇರಾನಿ ವರ್ಚುವಲ್ ಸಭೆಯ ನೇತೃತ್ವ ವಹಿಸಿಕೊಂಡಿದ್ದು, ಮೂರರಿಂದ ನಾಲ್ಕು ಬಾರಿ ನಡೆಸಿದ ಈ ಸಭೆಯಲ್ಲಿ ಲಕ್ಷಾಂತರ ಕಾರ್ಯಕರ್ತರು ಭಾಗಿಯಾಗಿದ್ದರು ಎಂದು ಉತ್ತರ ಪ್ರದೇಶದ ಬಿಜೆಪಿ ಸೋಷಿಯಲ್ ಮೀಡಿಯಾ ಮುಖ್ಯಸ್ಥ ಅಂಕಿತ್ ಚಂದೇಲ್ ಹೇಳಿದ್ದಾರೆ.

ಏನು ಹೇಳಿದ್ದೆವೋ, ಅದನ್ನೇ ಮಾಡಿದ್ದೇವೆ ಘೋಷವಾಕ್ಯ

ಏನು ಹೇಳಿದ್ದೆವೋ, ಅದನ್ನೇ ಮಾಡಿದ್ದೇವೆ ಘೋಷವಾಕ್ಯ

ಉತ್ತರ ಪ್ರದೇಶದಲ್ಲಿ 2017ರ ಚುನಾವಣಾ ಪ್ರಣಾಳಿಕೆ ಮತ್ತು ಭರವಸೆಯ ವಿಷಯಗಳನ್ನೇ ಮುಂದಿಟ್ಟುಕೊಂಡು ಪ್ರಚಾರದ ಅಖಾಡಕ್ಕೆ ಇಳಿಯಲು ಬಿಜೆಪಿ ಸಿದ್ಧತೆ ನಡೆಸಿಕೊಂಡಿದೆ. ಜೋ ಕಹಾ, ವೋ ಕಿಯಾ (ಏನು ಹೇಳಿದ್ದೆವೋ, ಅದನ್ನೇ ಮಾಡಿದ್ದೇವೆ) ಎಂಬ ಘೋಷವಾಕ್ಯದೊಂದಿಗೆ ವರ್ಚುವಲ್ ಪ್ರಚಾರಕ್ಕೆ ಬಿಜೆಪಿ ಮುಂದಾಗಿದೆ. "2017ರಲ್ಲಿ ಬಿಜೆಪಿ ಯಾವೆಲ್ಲ ಭರವಸೆಗಳನ್ನು ನೀಡಿತ್ತು, ಇಂದು ಯಾವೆಲ್ಲ ಭರವಸೆಗಳನ್ನು ಈಡೇರಿಸಿದೆ ಎಂಬ ಕುರಿತು ಸಾಮಾಜಿಕ ಮಾಧ್ಯಮಗಳ ಮೂಲಕ ಜನರಿಗೆ ಮಾಹಿತಿ ನೀಡಲಾಗುವುದು. ಸಂಜೆ ವೇಳೆಗೆ ಅದೇ ವಿಷಯಗಳ ಮೇಲೆ ಒಬ್ಬ ನಾಯಕ ಲೈವ್ ಸಂವಾದವನ್ನು ನಡೆಸಿ ಕೊಡಲಿದ್ದಾರೆ," ಎಂದರು.

ಪ್ರಣಾಳಿಕೆ ಬಿಡುಗಡೆವರೆಗೂ ಒಂದು, ಆ ಮೇಲೆ ಮತ್ತೊಂದು!

ಪ್ರಣಾಳಿಕೆ ಬಿಡುಗಡೆವರೆಗೂ ಒಂದು, ಆ ಮೇಲೆ ಮತ್ತೊಂದು!

2017ರಲ್ಲಿ ನೀಡಿರುವ ಚುನಾವಣಾ ಭರವಸೆ, ಹಿಂದಿನ ಪ್ರಣಾಳಿಕೆಯಲ್ಲಿ ಆಶ್ವಾಸನೆ ಮತ್ತು ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜನರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಸಂಜೆ ವೇಳೆಗೆ ಅದೇ ವಿಷಯದ ಬಗ್ಗೆ ನಾಯಕರೊಬ್ಬರು ಸಂವಾದ ನಡೆಸುವುದು ಮೊದಲ ಹಂತದ ವರ್ಚುವಲ್ ಸಭೆಯ ರೂಪುರೇಷೆ ಆಗಿರುತ್ತದೆ. 2022ರ ಚುನಾವಣೆಗೆ ಸಂಬಂಧಿಸಿದ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಆಗುವವರೆಗೂ ಇದೇ ರೀತಿಯ ಪ್ರಚಾರ ಮುಂದುವರಿಯಲಿದೆ. ಜನವರಿ ಅಂತ್ಯ ಅಥವಾ ಫೆಬ್ರವರಿ ಆರಂಭದ ಹೊತ್ತಿಗೆ ಬಿಜೆಪಿಯು ಈ ಸಾಲಿನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದೆ. ಬಿಜೆಪಿ ಪ್ರಣಾಳಿಕೆ ಬಿಡುಗಡೆ ನಂತರ ಮತ್ತೊಂದು ರೀತಿಯ ಪ್ರಚಾರ ವೈಖರಿ ಪ್ರಾರಂಭವಾಗಲಿದೆ. ಹಿಂದೆ ಮಾಡಿರುವ ಅಭಿವೃದ್ಧಿ ಕಾರ್ಯಗಳು ಮತ್ತು ಮುಂದೆ ಮಾಡಲು ಉದ್ದೇಶಿಸಿರುವ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ತಲುಪಿಸಲಾಗುವುದು ಎಂದಿದ್ದಾರೆ.

ವ್ಯತ್ಯಾಸ ಸ್ಪಷ್ಟವಾಗಿದೆ ಎಂಬ ಘೋಷವಾಕ್ಯ

ವ್ಯತ್ಯಾಸ ಸ್ಪಷ್ಟವಾಗಿದೆ ಎಂಬ ಘೋಷವಾಕ್ಯ

ಭಾರತೀಯ ಜನತಾ ಪಕ್ಷವು ಈ ಮೊದಲೇ ಫರ್ಕ್ ಸಾಫ್ ಹೈ ಎಂಬ ಘೋಷವಾಕ್ಯದೊಂದಿಗೆ ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರವನ್ನು ನಡೆಸಲಾಗಿತ್ತು. ಈ ಘೋಷವಾಕ್ಯದಲ್ಲಿ ಮೊದಲಿಗೂ ಮತ್ತು ಇಂದಿನ ಸ್ಥಿತಿಗೂ ಹೋಲಿಕೆ ಮಾಡಿ ನೋಡಿದರೆ ವ್ಯತ್ಯಾಸ ಸ್ಪಷ್ಟವಾಗುತ್ತದೆ ಎಂಬ ಬಗ್ಗೆ ಸಾರ್ವಜನಿಕವಾಗಿ ಅರಿವು ಮೂಡಿಸುವ ಕಾರ್ಯವನ್ನು ಬಿಜೆಪಿ ನಡೆಸಿತು. ತದನಂತರ ಇದೇ ಪ್ರಚಾರ ವೈಖರಿಯನ್ನು ಸಮಾಜವಾದಿ ಪಕ್ಷ ಕೂಡ ಅನುಸರಿಸಿತು.

ಸರ್ಕಾರದ ಸಾಧನೆ ಕೊಂಡಾಡುವ ಹಾಡು ರಚಿಸಿರುವ ಬಿಜೆಪಿ

ಸರ್ಕಾರದ ಸಾಧನೆ ಕೊಂಡಾಡುವ ಹಾಡು ರಚಿಸಿರುವ ಬಿಜೆಪಿ

ಬಿಜೆಪಿ ಸಾಧನೆಯನ್ನು ಕೊಂಡಾಡುವ ಮತ್ತು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಪಕ್ಷವು ಹೊಸ ಹಾಡೊಂದನ್ನು ಬಿಡುಗಡೆ ಮಾಡಲಿದೆ. ಈ ಹಾಡನ್ನು ಮನೋಜ್ ತಿವಾರಿ ಮತ್ತು ರವಿ ಕಿಶನ್ ಸಂಯೋಜನೆ ಮಾಡಿದ್ದಾರೆ ಎಂದು ಅಂಕಿತ್ ಚಂದೇಲ್ ಹೇಳಿದ್ದಾರೆ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗಾಗಿಯೇ ಈ ಹಾಡುಗಳನ್ನು ವಿಶೇಷವಾಗಿ ರಚಿಸಲಾಗಿದ್ದು, ಪ್ರತಿವಾರ ಒಂದೊಂದು ಹಾಡುಗಳನ್ನು ಬಿಡುಗಡೆ ಮಾಡಲಾಗುತ್ತದೆ. ಕನಿಷ್ಠ ಮೂರರಿಂದ ನಾಲ್ಕು ಹಾಡುಗಳನ್ನು ಈಗಾಗಲೇ ರಚನೆ ಮಾಡಿಟ್ಟುಕೊಳ್ಳಲಾಗಿದೆ. ಅದರ ಪೈಕಿ ಕೆಲವು ಹಾಡುಗಳು ಸ್ಥಳೀಯ ಭಾಷೆಯಲ್ಲಿಯೂ ಇವೆ ಎಂದು ತಿಳಿಸಿದ್ದಾರೆ.

ಐದು ರಾಜ್ಯಗಳಲ್ಲಿ ಪ್ರಚಾರಕ್ಕೆ ಅನುಮತಿ; ನಿರ್ಬಂಧಗಳು ಅನ್ವಯ

ಐದು ರಾಜ್ಯಗಳಲ್ಲಿ ಪ್ರಚಾರಕ್ಕೆ ಅನುಮತಿ; ನಿರ್ಬಂಧಗಳು ಅನ್ವಯ

ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಪಂಚರಾಜ್ಯಗಳಲ್ಲಿ ಸಾರ್ವಜನಿಕ ಸಭೆ, ಚುನಾವಣಾ ಮೆರವಣಿಗೆ ಮತ್ತು ರೋಡ್ ಶೋ ಮೇಲಿನ ನಿರ್ಬಂಧವನ್ನು ಜನವರಿ 31ರವರೆಗೂ ವಿಸ್ತರಿಸಲಾಗಿದೆ. ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಸುಶೀಲ್ ಚಂದ್ರ ನೇತೃತ್ವದಲ್ಲಿ ಸಭೆ ನಡೆಸಿದ್ದು, ಸಾರ್ವಜನಿಕ ಪ್ರಚಾರಕ್ಕೆ ನಿರ್ಬಂಧವನ್ನು ಮುಂದುವರಿಸಲಾಗುವುದು ಎಂದು ತಿಳಿಸಿದ್ದಾರೆ. ಇದರ ಮಧ್ಯೆ ಕೇಂದ್ರ ಚುನಾವಣಾ ಆಯೋಗ ರಾಜಕೀಯ ಪಕ್ಷಗಳಿಗೆ ಕೆಲವು ಸಡಿಲಿಕೆಗಳನ್ನು ಪ್ರಕಟಿಸಿದೆ.

- ರಾಜಕೀಯ ಪಕ್ಷಗಳ ಸಾರ್ವಜನಿಕ ಸಭೆಗಳು ಅಥವಾ ಚುನಾವಣೆಯ 1ನೇ ಹಂತದಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಸಾರ್ವಜನಿಕ ಸಭೆಗಳಿಗೆ ಜನವರಿ 28 ರಿಂದ ಅನುಮತಿ ನೀಡಲಾಗಿದೆ. ಇವುಗಳನ್ನು ಗರಿಷ್ಠ 500 ಜನರು ಅಥವಾ ಮೈದಾನದ ಸಾಮರ್ಥ್ಯದ ಶೇಕಡಾ 50ರಷ್ಟು ಜನರನ್ನು ಸೇರಿಸುವುದಕ್ಕೆ ಮಾತ್ರ ಅವಕಾಶ ನೀಡಲಾಗಿದೆ.

- ರಾಜಕೀಯ ಪಕ್ಷಗಳ ಸಾರ್ವಜನಿಕ ಸಭೆಗಳು ಅಥವಾ ಚುನಾವಣೆಯ 2ನೇ ಹಂತದಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಸಾರ್ವಜನಿಕ ಸಭೆಗಳಿಗೆ ಫೆಬ್ರವರಿ 1 ರಿಂದ ಅನುಮತಿ ನೀಡಲಾಗಿದೆ.

- ಮನೆ-ಮನೆ ಪ್ರಚಾರಕ್ಕಾಗಿ, ಗರಿಷ್ಠ ಸಂಖ್ಯೆಯ ಜನರನ್ನು ಐದರಿಂದ ಹತ್ತಕ್ಕೆ ಹೆಚ್ಚಿಸಲಾಗಿದೆ

- ಕೊವಿಡ್-19 ಶಿಷ್ಟಾಚಾರಗಳನ್ನು ಅನುಸರಿಸುವ ಷರತ್ತಿನ ಮೇಲೆ ಗೊತ್ತುಪಡಿಸಿದ ಬಹಿರಂಗ ಸ್ಥಳಗಳಲ್ಲಿ ಪ್ರಚಾರಕ್ಕಾಗಿ ವೀಡಿಯೊ ವ್ಯಾನ್‌ಗಳನ್ನು ಅನುಮತಿಸಲಾಗಿದೆ

ಉತ್ತರ ಪ್ರದೇಶದಲ್ಲಿ ಏಳು ಹಂತಗಳಲ್ಲಿ ಮತದಾನ

ಉತ್ತರ ಪ್ರದೇಶದಲ್ಲಿ ಏಳು ಹಂತಗಳಲ್ಲಿ ಮತದಾನ

ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, ಫೆಬ್ರವರಿ 14, ಫೆಬ್ರವರಿ 20, ಫೆಬ್ರವರಿ 23, ಫೆಬ್ರವರಿ 27, ಮಾರ್ಚ್ 3 ಮತ್ತು ಮಾರ್ಚ್ 7ರಂದು ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಅಂತಿಮವಾಗಿ ಮಾರ್ಚ್ 10ರಂದು ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ, ಕಾಂಗ್ರೆಸ್ ಮತ್ತು ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷದ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ.

ಈ ಹಿಂದೆ 2017ರಲ್ಲಿ ಉತ್ತರ ಪ್ರದೇಶದಲ್ಲಿ 403 ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಒಟ್ಟು 403 ಕ್ಷೇತ್ರಗಳ ಪೈಕಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಹುಜನ ಸಮಾಜವಾದಿ ಪಕ್ಷವು 19 ಕ್ಷೇತ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿತ್ತು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದ್ದು, ಕೇವಲ ಏಳು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.

Recommended Video

      ಸರಣಿ ಸೋತ ಬಳಿಕ Rahul ಹೇಳಿದ್ದೇನು | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+