• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉತ್ತರ ಪ್ರದೇಶದಲ್ಲಿ ಸಾಮಾನ್ಯ ಕಾರ್ಮಿಕನಿಗೆ 19 ಕೋಟಿ ರೂ. ಕರೆಂಟ್ ಬಿಲ್!

|
Google Oneindia Kannada News

ಲಕ್ನೋ, ಅಕ್ಟೋಬರ್ 30: ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರವು ವಿದ್ಯುತ್ ಬಿಲ್‌ಗಳ ಮೂಲಕ ಲೂಟಿ ಹೊಡೆಯುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ.

ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಈ ಸಮಸ್ಯೆಗೆ ಅಂತ್ಯ ಹಾಡಲಾಗುವುದು ಎಂದು ಅವರು ಆಶ್ವಾಸನೆ ನೀಡಿದ್ದಾರೆ. ರಾಜ್ಯದ ವಿದ್ಯುತ್ ಇಲಾಖೆಯು ಒಬ್ಬ ಕಾರ್ಮಿಕನಿಗೆ 19,19,09,993 ರೂಪಾಯಿ ಬಿಲ್ ನೋಟಿಸ್ ನೀಡಿದೆ ಎಂದು ಹೇಳಲಾದ ವರದಿಯೊಂದನ್ನು ಟ್ವೀಟ್ ಮಾಡಿದ್ದಾರೆ.

"ಬಿಜೆಪಿ ಆಡಳಿತದಲ್ಲಿ ವಿದ್ಯುತ್ ಬಿಲ್ ಮತ್ತು ಸ್ಮಾರ್ಟ್ ಮೀಟರ್ ಲೂಟಿಯಿಂದಾಗಿ ರಾಜ್ಯದ ಸಾಮಾನ್ಯ ಜನರು ತತ್ತರಿಸುತ್ತಿದ್ದಾರೆ. ಜೀವನೋಪಾಯಕ್ಕಾಗಿ ಕಷ್ಟಪಟ್ಟು ದುಡಿಯುವ ಕುಟುಂಬಕ್ಕೆ ₹19 ಕೋಟಿ 19 ಲಕ್ಷ ವಿದ್ಯುತ್ ಬಿಲ್ ಪಾವತಿಸುವಂತೆ ವಿದ್ಯುಚ್ಛಕ್ತಿ ಇಲಾಖೆ ನೋಟಿಸ್ ನೀಡಿದೆ," ಎಂದು ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಿದಾಗ ಈ ವಿದ್ಯುತ್ ಬಿಲ್ ಲೂಟಿ ಕೊನೆಯಾಗುತ್ತದೆ ಎಂದು ಗಾಂಧಿ ಪ್ರತಿಪಾದಿಸಿದ್ದಾರೆ.

ಉತ್ತರ ಪ್ರದೇಶ ಚುನಾವಣೆಯಲ್ಲಿ ಮಹಿಳೆಯರಿಗೆ ಮಣೆ:

ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಮಹಿಳೆಯರಿಗೆ ಮೊದಲ ಆದ್ಯತೆ ನೀಡುತ್ತದೆ. ರಾಜ್ಯದಲ್ಲಿ ಶೇ.40ರಷ್ಟು ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್ ನೀಡುವುದಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಘೋಷಿಸಿದ್ದಾರೆ. "ದೇಶದ ರಾಜಕೀಯದಲ್ಲಿ ಮಹಿಳೆಯರು ಪೂರ್ಣ ಪ್ರಮಾಣದ ಪಾಲುದಾರರಾಗಬೇಕೆಂದು ನಾವು ಬಯಸುತ್ತೇವೆ ಎಂದು ಪ್ರಿಯಾಂಕಾ ಗಾಂಧಿ ಈ ಹಿಂದೆ ತಿಳಿಸಿದ್ದರು.

ಕಾಂಗ್ರೆಸ್ ಪ್ರತಿಜ್ಞಾ ಯಾತ್ರೆ:

ಕಾಂಗ್ರೆಸ್ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಹಾಗೂ ಹೊಸ ಕಾರ್ಯಕರ್ತರ ಸೇರ್ಪಡೆ ಮಾಡಿಕೊಳ್ಳುವುದಕ್ಕಾಗಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪ್ರತಿಜ್ಞಾ ಯಾತ್ರೆ ನಡೆಸುತ್ತಿದೆ. ಅಕ್ಟೋಬರ್ 23ರಂದು ಆರಂಭವಾಗಿರುವ ಪ್ರತಿಜ್ಞಾ ಯಾತ್ರೆಯು ನವೆಂಬರ್ 1ರವರೆಗೂ ರಾಜ್ಯದ ಮೂರು ಮಾರ್ಗಗಳಲ್ಲಿ ಸಂಚರಿಸಲಿದೆ. ಬಾರಾಬಂಕಿಯಿಂದ ಬುಂದೇಲ್‌ಖಂಡ್, ಸಹರಾನ್‌ಪುರದಿಂದ ಮಥುರಾ ಮತ್ತು ವಾರಣಾಸಿಯಿಂದ ರಾಯ್ ಬರೇಲಿವರೆಗೆ 12,000 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಯಾತ್ರೆ ಸಂಚರಿಸಲಿದೆ.

ಉತ್ತರ ಪ್ರದೇಶದಲ್ಲಿ ರಸಗೊಬ್ಬರ ಸಮಸ್ಯೆ:

ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಪ್ರಿಯಾಂಕಾ ಗಾಂಧಿ ವಾದ್ರಾ ವಾಗ್ದಾಳಿ ಮುಂದುವರಿಸಿದರು. ಉತ್ತರ ಪ್ರದೇಶದಲ್ಲಿ ರೈತರು ಎದುರಿಸುತ್ತಿರುವ ರಸಗೊಬ್ಬರ ಸಮಸ್ಯೆ ಬಗ್ಗೆ ಉಲ್ಲೇಖಿಸಿದರು. ಒಂದೆಡೆ ಬುಂದೇಲ್‌ಖಂಡ್‌ನಲ್ಲಿ ರೈತರು ರಸಗೊಬ್ಬರಕ್ಕಾಗಿ ಸರತಿ ಸಾಲಿನಲ್ಲಿ ನಿಂತು ಸಾಯುತ್ತಿದ್ದಾರೆ. ಇನ್ನೊಂದು ಕಡೆಯಲ್ಲಿ ಲಖೀಂಪುರ್ ಖೇರಿ ಘಟನೆಗೆ ಕಾರಣರಾದ ಆಶಿಶ್ ಮಿಶ್ರಾ ತಂದೆ ಆಗಿರುವ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರು ಲಕ್ನೋದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಳ್ಳುತ್ತಾರಲ್ಲ ಎಂದು ಕಿಡಿ ಕಾರಿದ್ದಾರೆ.

ಪ್ರಿಯಾಂಕಾ ಗಾಂಧಿ ನೀಡಿರುವ ಈವರೆಗಿನ ಭರವಸೆಗಳು:

ಉತ್ತರ ಪ್ರದೇಶದಲ್ಲಿ ಮಹಿಳೆಯರಿಗೆ ಆದ್ಯತೆ ನೀಡುವುದರ ಜೊತೆಗೆ ರೈತರು, ನಿರುದ್ಯೋಗಿಗಳು ಹಾಗೂ ವಿದ್ಯಾರ್ಥಿನಿಯರಿಗೂ ಪ್ರಿಯಾಂಕಾ ಗಾಂಧಿ ವಾದ್ರಾ ಬಂಪರ್ ಆಫರ್ ನೀಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದರೆ ರೈತರ ಕೃಷಿ ಸಾಲ ಮನ್ನಾ ಮಾಡಲಾಗುವುದು, 20 ಲಕ್ಷ ನಿರುದ್ಯೋಗಿಗಳಿಗೆ ಸರ್ಕಾರಿ ಉದ್ಯೋಗ ನೀಡುವುದು, ಸಾಂಕ್ರಾಮಿಕ ಸಮಯದಲ್ಲಿನ ವಿದ್ಯುತ್ ಬಿಲ್ ಮನ್ನಾ ಮಾಡುವುದು ಮತ್ತು ಕೋವಿಡ್ -19 ಸಂತ್ರಸ್ತರಿಗೆ ರೂ 25,000 ಸಾವಿರ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಪ್ರಿಯಾಂಕಾ ಗಾಂಧಿ ವಾದ್ರಾ ಘೋಷಿಸಿದ ಪ್ರಮುಖ ಘೋಷಣೆಗಳನ್ನು ಮುಂದೆ ಓದಿ.

* 12ನೇ ತರಗತಿಯ ವಿದ್ಯಾರ್ಥಿನಿಯರಿಗೆ ಸ್ಮಾರ್ಟ್‌ಫೋನ್‌ಗಳನ್ನು ಮತ್ತು ಪದವಿ ಉತ್ತೀರ್ಣರಾದ ವಿದ್ಯಾರ್ಥಿನಿಯರಿಗೆ ಎಲೆಕ್ಟ್ರಿಕ್ ಸ್ಕೂಟಿ ನೀಡುವುದು

* ರೈತರ ಎಲ್ಲಾ ಸಾಲ ಮನ್ನಾ ಮಾಡುತ್ತೇವೆ. ಈ ಹಿಂದೆ 72 ಸಾವಿರ ಕೋಟಿ ಸಾಲ ಮನ್ನಾ ಮಾಡಿ ತೋರಿಸಿದ್ದೇವೆ

* ಛತ್ತೀಸಗಡದಂತೆ ಉತ್ತರ ಪ್ರದೇಶದಲ್ಲೂ ಗೋಧಿ ಮತ್ತು ಭತ್ತದ ಬೆಲೆಯನ್ನು 2500 ರೂಪಾಯಿಗೆ ನಿಗದಿಪಡಿಸಲಾಗುವುದು

* ಕಬ್ಬಿಗೆ ಪ್ರತಿ ಕ್ವಿಂಟಾಲ್ ಗೆ 400 ರೂಪಾಯಿ ಬೆಂಬಲ ಬೆಲೆ ನೀಡುವುದು

* ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿನ ವಿದ್ಯುತ್ ಬಿಲ್ ಅನ್ನು ಸಂಪೂರ್ಣವಾಗಿ ಮನ್ನಾ ಮಾಡುತ್ತೇವೆ. ಪ್ರತಿಯೊಬ್ಬರ ವಿದ್ಯುತ್ ಬಿಲ್ ಅನ್ನು ಅರ್ಧದಷ್ಟು ಕಡಿಮೆ ಮಾಡುತ್ತೇವೆ.

* ಕೊರೊನಾವೈರಸ್ ಕಾಲದಲ್ಲಿ ಸಂಕಷ್ಟಕ್ಕೆ ಸಿಲುಕಿದ ಬಡ ಕುಟುಂಬಗಳಿಗೆ 25,000 ರೂಪಾಯಿ ಪರಿಹಾರವನ್ನು ನೀಡುತ್ತೇವೆ

* ರಾಜ್ಯದಲ್ಲಿ 20 ಲಕ್ಷ ಸರ್ಕಾರಿ ಉದ್ಯೋಗಗಳನ್ನು ಒದಗಿಸುವುದರ ಜೊತೆಗೆ ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸುವುದು

English summary
UP People Suffering From 'loot' Of Eelectricity Bills, Priyanka Gandhi Give Promise Its End From Congress Govt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X