ಯುಪಿ ಚುನಾವಣೆ: 24 ಗಂಟೆಗಳಲ್ಲಿ 2 ಸಚಿವರು, 6 ಶಾಸಕರು ರಾಜೀನಾಮೆ
ಲಕ್ನೋ ಜನವರಿ 12: ಉತ್ತರ ಪ್ರದೇಶದ ಸಚಿವ ದಾರಾ ಸಿಂಗ್ ಚೌಹಾಣ್ ಬುಧವಾರ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ. ಇವರು ವಿಧಾನಸಭೆ ಚುನಾವಣೆಗೂ ಮುನ್ನ ರಾಜೀನಾಮೆ ನೀಡಿದ ಉತ್ತರ ಪ್ರದೇಶದ ಎರಡನೇ ಸಚಿವರಾಗಿದ್ದಾರೆ. ರಾಜ್ಯದಲ್ಲಿ ಈಗ ಒಟ್ಟು ಆರು ಶಾಸಕರು ರಾಜೀನಾಮೆ ನೀಡಿದ್ದಾರೆ.
ಮಂಗಳವಾರ ಉತ್ತರ ಪ್ರದೇಶದ ಕಾರ್ಮಿಕ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಅವರು ಸಂಪುಟ ಮತ್ತು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ರಾಜೀನಾಮೆ ನೀಡಿದ್ದರು. ರಾಜ್ಯದ ಇತರ ನಾಲ್ವರು ಶಾಸಕರು ಇದನ್ನೇ ಅನುಸರಿಸಿ ಬಿಜೆಪಿ ತೊರೆದಿದ್ದಾರೆ ಎನ್ನಲಾಗಿದೆ. ದಾರಾ ಸಿಂಗ್ ಚೌಹಾಣ್ ಅವರು ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಅರಣ್ಯ ಮತ್ತು ಪರಿಸರ ಸಚಿವರಾಗಿ ಸೇವೆ ಸಲ್ಲಿಸಿದರು. ಹಿಂದುಳಿದ ವರ್ಗಗಳು ಮತ್ತು ದಲಿತರನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿ ಅವರು ಬುಧವಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ವರ್ಷದ ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿಗೆ ದಾರಾ ಸಿಂಗ್ ಚೌಹಾಣ್ ಸೇರಿದಂತೆ ಸಚಿವರು ಹಾಗೂ ಶಾಸಕರ ರಾಜೀನಾಮೆ ಭಾರೀ ಹಿನ್ನಡೆಯಾಗಿದೆ. ಚುನಾವಣೆಗೂ ಮುನ್ನ ಮಂಗಳವಾರ (ಜನವರಿ 11) ಸಂಪುಟ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ರಾಜೀನಾಮೆಯೊಂದಿಗೆ ಆಡಳಿತಾರೂಢ ಬಿಜೆಪಿ ಭಾರಿ ಮುಖಭಂಗವಾಗಿತ್ತು. ಕೆಲ ಗಂಟೆಗಳಲ್ಲಿ ಅವರ ನಿಕಟವರ್ತಿಗಳಾದ ರೋಷನ್ ಲಾಲ್ ವರ್ಮಾ, ಬ್ರಿಜೇಶ್ ಪ್ರಜಾಪತಿ, ಭಗವತಿ ಸಾಗರ್ ಮತ್ತು ವಿನಯ್ ಶಾಕ್ಯ ಅವರು ತಮ್ಮ ರಾಜೀನಾಮೆಯನ್ನು ಘೋಷಿಸಿದರು.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಾಯಕತ್ವದಲ್ಲಿ ಮೌರ್ಯ ಅವರಿಗೆ ನಂಬಿಕೆ ಇಲ್ಲ ಮತ್ತು ಕಾರ್ಯಶೈಲಿಯ ಬಗ್ಗೆ ಕೋಪಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದರೊಂದಿಗೆ ಉತ್ತರ ಪ್ರದೇಶದ ಕಾಂಗ್ರೆಸ್ ಶಾಸಕ ನರೇಶ್ ಸೈನಿ ಮತ್ತು ಸಮಾಜವಾದಿ ಪಕ್ಷದ (ಎಸ್‌ಪಿ) ಶಾಸಕ ಹರಿ ಓಂ ಯಾದವ್ ಬುಧವಾರ ಬಿಜೆಪಿಗೆ ಸೇರ್ಪಡೆಗೊಂಡರು. ಇದತ ಮಧ್ಯೆ ಯೋಗಿ ಆದಿತ್ಯನಾಥ್ ಅವರು ಅಯೋಧ್ಯೆ ಅಥವಾ ಗೋರಖ್‌ಪುರ ವಿಧಾನಸಭಾ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಮೂಲಗಳು ಇಂಡಿಯಾ ಟುಡೇ ಟಿವಿಗೆ ತಿಳಿಸಿವೆ.
ಇನ್ನು ಕೆಲವೇ ದಿನಗಳಲ್ಲಿ ಬಿಜೆಪಿ, ಎಸ್‌ಪಿ, ಬಿಎಸ್‌ಪಿ ಮತ್ತು ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳು ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೆ ತಮ್ಮ ಅಭ್ಯರ್ಥಿಗಳ ಹೆಸರನ್ನು ಘೋಷಿಸಲಿವೆ. ಈ ನಡುವೆ ಭಾರತೀಯ ಜನತಾ ಪಕ್ಷದ ಅಲ್ಪಸಂಖ್ಯಾತ ಮೋರ್ಚಾವು ಯುಪಿ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ 20 ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು ಎಂದು ಉನ್ನತ ನಾಯಕತ್ವವನ್ನು ಒತ್ತಾಯಿಸಿದೆ. ಗಮನಾರ್ಹವೆಂದರೆ 2017ರ ಯುಪಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಒಬ್ಬನೇ ಒಬ್ಬ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ.

ಚುನಾವಣಾ ಆಯೋಗ ಘೋಷಿಸಿದ ಪ್ರಕಾರ, ಉತ್ತರ ಪ್ರದೇಶದಲ್ಲಿ ಮತದಾನ ಫೆಬ್ರವರಿ 10, 14, 20, 23, 27 ಮತ್ತು ಮಾರ್ಚ್ 3 ಮತ್ತು 7 ರಂದು ನಡೆಯಲಿದೆ. ಉತ್ತರ ಪ್ರದೇಶ ಚುನಾವಣೆ 2022 ಫಲಿತಾಂಶವನ್ನು ಮಾರ್ಚ್ 10 ರಂದು ಪ್ರಕಟಿಸಲಾಗಲಿದೆ. 2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಚುನಾವಣಾ ಆಯೋಗವು ಚುನಾವಣಾ ರ್‍ಯಾಲಿಗಳನ್ನು ನಿಷೇಧಿಸಿರುವುದರಿಂದ ಭಾರತೀಯ ಜನತಾ ಪಕ್ಷ (ಬಿಜೆಪಿ) ಮಂಗಳವಾರ ಮತದಾರರನ್ನು ತಲುಪಲು ತನ್ನ ಮನೆ-ಮನೆ ಪ್ರಚಾರವನ್ನು ಪ್ರಾರಂಭಿಸಿದೆ. ದೇಶದಲ್ಲಿ ಅತಿಹೆಚ್ಚು ವಿಧಾನಸಭೆ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶ ಚುನಾವಣೆಯು ಪಂಚರಾಜ್ಯ ಚುನಾವಣೆಗಳಲ್ಲೇ ಅತಿಹೆಚ್ಚು ಕುತೂಹಲ ಕೆರಳಿಸಿದೆ. ಬಿಜೆಪಿ ಪಾಲಿಗೆ ಭದ್ರಕೋಟೆ ಎನಿಸಿರುವ ಈ ರಾಜ್ಯದಲ್ಲಿ ಮತದಾರರು ಯಾರಿಗೆ ಅಧಿಕಾರದ ಕುರ್ಚಿ ನೀಡುತ್ತಾರೆ ಎಂಬುದು ತಿಳಿದು ಬರಬೇಕಿದೆ.












Click it and Unblock the Notifications