UP Election Result 2022: ಜಯ ಸಾಧಿಸಿದ ಮುಸ್ಲಿಂ ಅಭ್ಯರ್ಥಿಗಳು
ಲಕ್ನೋ ಮಾರ್ಚ್ 11: ಈ ಬಾರಿ ಯುಪಿ ಚುನಾವಣೆಯಲ್ಲಿ ಧ್ರುವೀಕರಣದ ರಾಜಕೀಯ ಮಾಡಲಾಗುತ್ತಿದೆ ಎಂದು ಬಿಜೆಪಿ ಹಾಗೂ ಎಸ್‌ಪಿ ಪರಸ್ಪರ ಆರೋಪಿಸಿಕೊಂಡಿವೆ. ಈ ವಾತಾವರಣದಲ್ಲಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ (ಎಸ್‌ಪಿ) ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ವಾದ ಪ್ರತಿವಾದದ ನಡುವೆ ಸ್ಪರ್ಧೆಯಲ್ಲಿ 36 ಮುಸ್ಲಿಂ ಅಭ್ಯರ್ಥಿಗಳನ್ನು 18ನೇ ಉತ್ತರ ಪ್ರದೇಶದ ಅಸೆಂಬ್ಲಿಗೆ ಕಳುಹಿಸಲಾಗಿದೆ. ಈ ಸಂಖ್ಯೆ ಹಿಂದಿನ ವಿಧಾನಸಭೆಗಿಂತ ಹೆಚ್ಚಾಗಿದೆ.
ಶೇಕಡಾ 20 ಕ್ಕಿಂತ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಯುಪಿಯಲ್ಲಿ ಒಟ್ಟು 403 ಶಾಸಕರಲ್ಲಿ ಹೊಸದಾಗಿ ಚುನಾಯಿತ ಶಾಸಕರು ಶೇಕಡಾ 8.93 ರಷ್ಟಿದ್ದಾರೆ. ಚುನಾಯಿತರಾದ ಪ್ರಮುಖ ಮುಸ್ಲಿಂ ಶಾಸಕರಲ್ಲಿ ಮೊಹಮ್ಮದ್ ಅಜಂ ಖಾನ್, ಅವರ ಮಗ ಅಬ್ದುಲ್ಲಾ ಅಜಂ ಖಾನ್, ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್-ರಾಜಕಾರಣಿ ಮುಖ್ತಾರ್ ಅನ್ಸಾರಿ ಅವರ ಮಗ ಅಬ್ಬಾಸ್ ಮತ್ತು ಸೋದರಳಿಯ ಮನ್ನು ಸೇರಿದ್ದಾರೆ.
ರಾಮ್‌ಪುರದಲ್ಲಿ, ಜೈಲಿನಲ್ಲಿರುವ ಎಸ್‌ಪಿ ನಾಯಕ ಅಜಂ ಖಾನ್ 1,21,755 ಮತಗಳನ್ನು ಗಳಿಸಿ ಸ್ಥಾನವನ್ನು ಗೆದ್ದರು. ಆದರೆ ಬಿಜೆಪಿಯ ಆಕಾಶ್ ಸಕ್ಸೇನಾ 56,368 ಮತಗಳನ್ನು ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನೂ ಸುವಾರ್ ಅಸೆಂಬ್ಲಿ ಕ್ಷೇತ್ರದಲ್ಲಿ ಅಪ್ನಾ ದಳದ ಟಿಕೆಟ್‌ನಿಂದ ಸ್ಪರ್ಧಿಸಿದ್ದ ಹೈದರ್ ಅಲಿ ಖಾನ್ ಅಕಾ ಹಮ್ಜಾ ಮಿಯಾನ್ ಅವರ 65,059 ಮತಗಳ ವಿರುದ್ಧ ಅಜಂ ಅವರ ಪುತ್ರ ಅಬ್ದುಲ್ಲಾ ಅಜಮ್ 1,26,162 ಮತಗಳನ್ನು ಪಡೆದರು.

ಮೌವಿನಲ್ಲಿ ಮುಖ್ತಾರ್ ಅನ್ಸಾರಿ ಅವರ ಪುತ್ರ ಅಬ್ಬಾಸ್ ಅನ್ಸಾರಿ ಅವರು ಎಸ್‌ಬಿಎಸ್‌ಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದು, ಬಿಜೆಪಿಯ ಅಶೋಕ್ ಕುಮಾರ್ ಸಿಂಗ್ ಅವರನ್ನು 38,227 ಮತಗಳಿಂದ ಸೋಲಿಸಿದ್ದಾರೆ. ಜೊತೆಗೆ ಮೊಹಮ್ಮದಾಬಾದ್ (ಗಾಜಿಪುರ)ದಲ್ಲಿ ಮಾಜಿ ಶಾಸಕ ಸಿಬ್ಗತುಲ್ಲಾ ಅನ್ಸಾರಿ ಅವರ ಪುತ್ರ ಮತ್ತು ಮುಖ್ತಾರ್ ಅವರ ಸೋದರಳಿಯ ಸುಹೈಬ್ ಅನ್ಸಾರಿ ಅಕಾ ಮನ್ನು 18,199 ಮತಗಳ ಅಂತರದಿಂದ ಬಿಜೆಪಿಯ ಹಾಲಿ ಶಾಸಕಿ ಅಲ್ಕಾ ರೈ ಅವರನ್ನು ಸೋಲಿಸಿ ವಿಜಯಶಾಲಿಯಾಗಿದ್ದಾರೆ.

ಕೈರಾನಾ ಕ್ಷೇತ್ರದಲ್ಲಿ ಎಸ್‌ಪಿಯ ನಹಿದ್ ಹಸನ್ ಅವರು ಬಿಜೆಪಿ ಅಭ್ಯರ್ಥಿ ಮೃಗಾಂಕಾ ಸಿಂಗ್ ಅವರ 1,05,148 ವಿರುದ್ಧ 1,31,035 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ನಿಜಾಮಾಬಾದ್‌ನಲ್ಲಿ (ಅಜಂಗಢ) ಎಸ್‌ಪಿಯ 85 ವರ್ಷದ ಅನುಭವಿ ಆಲಂ ಬಾಡಿ ಅವರು ಬಿಜೆಪಿಯ ಮನೋಜ್ ಅವರನ್ನು 34,187 ಮತಗಳ ಅಂತರದಿಂದ ಸೋಲಿಸಿ ಮರು ಆಯ್ಕೆಯಾದರು.
ಮೀರತ್‌ನ ಕಿಥೋರ್ ಅಸೆಂಬ್ಲಿ ಕ್ಷೇತ್ರದಲ್ಲಿ ಎಸ್‌ಪಿಯ ಶಾಹಿದ್ ಮಜೂರ್ ಮತ್ತು ಬಿಜೆಪಿಯ ಸತ್ವಿರ್ ಸಿಂಗ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಮಜೂರ್ ಅವರು 2,180 ಮತಗಳ ಅಲ್ಪ ಅಂತರದಿಂದ ಗೆಲು ಸಾಧಿಸಿದರು. ಕುಂದರ್ಕಿಯಲ್ಲಿ (ಮೊರಾದಾಬಾದ್) ಎಸ್‌ಪಿ ಸಂಸದ ಶಫೀಕರ್ ರಹಮಾನ್ ಬಾರ್ಕ್ ಅವರ ಪುತ್ರ ಜಿಯಾ-ಉರ್-ರೆಹಮಾನ್ ಬಿಜೆಪಿಯ ಕಮಲ್ ಕುಮಾರ್ ಅವರನ್ನು 43,162 ಮತಗಳಿಂದ ಸೋಲಿಸಿದ್ದಾರೆ.
ಈ ಬಾರಿ ಎಸ್‌ಪಿ ಕಡಿಮೆ ಸಂಖ್ಯೆಯ (64) ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ, ಬಿಎಸ್‌ಪಿ 88 ಮುಸ್ಲಿಮರನ್ನು ಕಣಕ್ಕಿಳಿಸಿತು ಮತ್ತು ಕಾಂಗ್ರೆಸ್ 75 ಮುಸ್ಲೀಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಕೂಡ ಸಮುದಾಯದ 60 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.












Click it and Unblock the Notifications