ಡಬಲ್ ಇಂಜಿನ್ ಸರ್ಕಾರ ಎಂದರೆ ಡಬಲ್ ಭ್ರಷ್ಟಾಚಾರ: ಅಖಿಲೇಶ್ ಯಾದವ್ ಸಿಡಿಮಿಡಿ
ಲಕ್ನೋ, ಫೆಬ್ರವರಿ 10: ಉತ್ತರ ಪ್ರದೇಶದಲ್ಲಿ ಡಬಲ್ ಇಂಜಿನ್ ಸರ್ಕಾರ ಎಂದರೆ ಡಬಲ್ ಭ್ರಷ್ಟಾಚಾರ ಎಂದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಜ್ನೋರ್‌ನಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಸರ್ಕಾರವು ಹೊಸ ಲೋಕಸಭೆಯಲ್ಲಿ ಯಾವ ಸಂವಿಧಾನವನ್ನು ತರುತ್ತದೆ ಎಂಬುದು ಅನಿಶ್ಚಿತವಾಗಿದೆ ಎಂದರು. ನವದೆಹಲಿ ಹೃದಯಭಾಗದಲ್ಲಿ ಹೊಸ ಸಂಸತ್ತಿನ ಕಟ್ಟಡವನ್ನು ಉಲ್ಲೇಖಿಸಿದ ಅವರು, ಹೊಸ ಲೋಕಸಭೆಯನ್ನು ನಿರ್ಮಿಸುತ್ತಿದ್ದಾರೆಂದು ನೀವು ಕೇಳಿದ್ದೀರಿ" ಎಂದು ಹೇಳಿದರು.
'ಹೊಸ ಲೋಕಸಭೆಗೆ ಯಾವ ಸಂವಿಧಾನವನ್ನು ತರುತ್ತಾರೆ ಎಂಬುದು ಯಾರಿಗೆ ಗೊತ್ತು. ಉತ್ತರ ಪ್ರದೇಶದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯನ್ನು ತಡೆಯುವುದು ಬಹಳ ಮುಖ್ಯವಾಗಿದೆ, ಏಕೆಂದರೆ ಅಂಬೇಡ್ಕರ್ ಸಂವಿಧಾನವನ್ನು ಬಿಜೆಪಿಯವರು ಏನು ಬೇಕಾದರೂ ಮಾಡಬಹುದು' ಎಂದು ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.

"ಸಣ್ಣ ನಾಯಕ ಸಣ್ಣ ಸುಳ್ಳು ಹೇಳುತ್ತಾನೆ, ದೊಡ್ಡ ನಾಯಕ, ದೊಡ್ಡ ಸುಳ್ಳು ಹೇಳುತ್ತಾನೆ ಮತ್ತು ಅವರ ಅತಿದೊಡ್ಡ ನಾಯಕ ಅತಿದೊಡ್ಡ ಸುಳ್ಳು ಹೇಳುತ್ತಾನೆ. ನೋಟು ಅಮಾನ್ಯೀಕರಣ ಎನ್ನುವುದು ಭ್ರಷ್ಟಾಚಾರ ನಿರ್ಮೂಲನೆಯ ಉದ್ದೇಶವನ್ನು ಹೊಂದಿತ್ತು, ಆದರೆ ಈ ಡಬಲ್ ಇಂಜಿನ್ ಸರ್ಕಾರದಿಂದ ಭ್ರಷ್ಟಾಚಾರವೂ ಡಬಲ್ ಆಗಿದೆ," ಎಂದಿದ್ದಾರೆ.
ಯೋಗಿ ಸರ್ಕಾರವನ್ನು ಹಾಡಿ ಹೊಗಳಿದ ಪ್ರಧಾನಿ:
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರವನ್ನು ಹಾಡಿ ಹೊಗಳಿದ ಪ್ರಧಾನಿ ಮೋದಿ, "ರಾಜ್ಯದ ಬಿಜೆಪಿ ಸರ್ಕಾರವು ಬಡವರಿಗೆ ಉಚಿತ ಮನೆಗಳನ್ನು ಮತ್ತು ಉತ್ತಮ ಆಸ್ಪತ್ರೆಗಳಲ್ಲಿ 5 ಲಕ್ಷದವರೆಗೆ ಉಚಿತ ಚಿಕಿತ್ಸೆ ನೀಡುತ್ತಿರುವುದು ಬಹಳ ಮುಖ್ಯವಾಗಿದೆ. ರೈತರ ಖಾತೆಗಳಿಗೆ ನೇರವಾಗಿ ಹಣ ತಲುಪಲು, ಯುಪಿಯಲ್ಲಿ ಬಿಜೆಪಿ ಸರ್ಕಾರ ಅಗತ್ಯವಾಗಿದೆ. ಸಾಂಕ್ರಾಮಿಕ ಸಮಯದಲ್ಲಿ ಬಡವರು ಪಡಿತರ ಪಡೆಯಲು ಬಿಜೆಪಿ ಅಗತ್ಯವಾಗಿದೆ," ಎಂದು ಮೋದಿ ಹೇಳಿದರು.
ಉತ್ತರ ಪ್ರದೇಶವನ್ನು ಗಲಭೆಮುಕ್ತವಾಗಿರಿಸಲು ಹಾಗೂ ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಆತಂಕಮುಕ್ತ ವಾತಾವರಣವನ್ನು ಸೃಷ್ಟಿಸುವುದಕ್ಕೆ ಬಿಜೆಪಿಗೆ ಮತವನ್ನು ನೀಡಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಮತದಾನ:
ಉತ್ತರ ಪ್ರದೇಶದಲ್ಲಿ ಮೊದಲ ಹಂತದಲ್ಲಿ 11 ಜಿಲ್ಲೆಗಳ 58 ವಿಧಾನಸಭೆ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಶಾಮ್ಲಿ, ಮೀರತ್, ಹಾಪುರ್, ಮುಜಾಫರ್ ನಗರ್, ಭಾಗ್ಪತ್, ಗಜಿಯಾಬಾದ್, ಬುಲಂದ್ ಶಹರ್, ಅಲಿಘರ್, ಆಗ್ರಾ, ಗೌತಮ್ ಬುದ್ಧ ನಗರ್ ಹಾಗೂ ಮಥುರಾ ಜಿಲ್ಲೆಗಳಲ್ಲಿ ಮತದಾನ ನಡೆದಿದೆ. ಕಳೆದ 2017ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 53 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.
ಉತ್ತರ ಪ್ರದೇಶದಲ್ಲಿ ಗುರುವಾರ ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಗಲಿದೆ. ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಚುನಾವಣಾ ಭದ್ರತೆಗಾಗಿ 412 ಸೆಂಟ್ರಲ್ ಪ್ಯಾರಾಮಿಲಿಟರ್ ಫೋರ್ಸ್ ಕಂಪನಿಗಳ 50,000 ಸಿಬ್ಬಂದಿಯನ್ನು ವಿವಿಧ ಕ್ಷೇತ್ರಗಳಲ್ಲಿ ನಿಯೋಜನೆ ಮಾಡಲಾಗಿದೆ.












Click it and Unblock the Notifications