ಯುಪಿ ಚುನಾವಣೆ: ಫೆ.8 ಬಿಜೆಪಿ ಪ್ರಣಾಳಿಕೆ ಲೋಕ ಕಲ್ಯಾಣ ಸಂಕಲ್ಪ ಪಾತ್ರ ಬಿಡುಗಡೆ
ಫೆಬ್ರವರಿ 8: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷದ ಪ್ರಣಾಳಿಕೆ ಬಿಡುಗಡೆ ಆಗಲಿದೆ. ಲಕ್ನೋದಲ್ಲಿ ಮಂಗಳವಾರ ಕೇಂದ್ರ ಸಚಿವ ಅಮಿತ್ ಶಾ ಪಕ್ಷದ ಪ್ರಣಾಳಿಕೆ ಅನ್ನು ಬಿಡುಗಡೆಗೊಳಿಸಲಿದ್ದಾರೆ.
ಉತ್ತರ ಪ್ರದೇಶದಲ್ಲಿ ಬಿಜೆಪಿ ಚುನಾವಣಾ ಪ್ರಣಾಳಿಕೆ "ಲೋಕ ಕಲ್ಯಾಣ ಸಂಕಲ್ಪ ಪಾತ್ರ" ಅನ್ನು ಮಂಗಳವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಡುಗಡೆ ಮಾಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕಳೆದ ಭಾನುವಾರ ಖ್ಯಾತ ಗಾಯತಿ ಲತಾ ಮಂಗೇಶ್ಕರ್ ಅನಾರೋಗ್ಯದಿಂದ ವಿಧಿಶರಾದ ಹಿನ್ನೆಲೆ ಬಿಜೆಪಿ ಚುನಾವಣಾ ಪ್ರಣಾಳಿಕೆ ಲೋಕ ಕಲ್ಯಾಣ ಸಂಕಲ್ಪ ಪಾತ್ರ ಬಿಡುಗಡೆ ದಿನಾಂಕ ಮುಂದೂಡಲಾಗಿತ್ತು ಎಂದು ಪಕ್ಷ ತಿಳಿಸಿದೆ.

ಲೋಕ ಕಲ್ಯಾಣ ಸಂಕಲ್ಪ ಪಾತ್ರ ಪ್ರಮುಖ ಅಂಶಗಳು:
ಯುಪಿ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಲೋಕ ಕಲ್ಯಾಣ ಸಂಕಲ್ಪ ಪಾತ್ರದಲ್ಲಿ ಹಲವು ವಿಷಯಗಳನ್ನು ಬಹುಮುಖ್ಯವಾಗಿ ಪ್ರಸ್ತಾಪಿಸುವ ನಿರೀಕ್ಷೆಗಳಿವೆ. ರಾಷ್ಟ್ರೀಯವಾದ, ಅಭಿವೃದ್ಧಿ, ಉತ್ತಮ ಸರ್ಕಾರ ಮತ್ತು ಉತ್ತಮ ಆಡಳಿತದ ಜೊತೆಗೆ ಕಾಶಿ ಮಥುರಾ ಅಭಿವೃದ್ಧಿ ವಿಚಾರಗಳನ್ನು ಪ್ರಸ್ತಾಪಿಸುವ ಸಾಧ್ಯತೆಗಳಿವೆ.
ಏಳು ಹಂತಗಳಲ್ಲಿ ಉತ್ತರ ಪ್ರದೇಶ ಚುನಾವಣೆ:
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, ಫೆಬ್ರವರಿ 14, ಫೆಬ್ರವರಿ 20, ಫೆಬ್ರವರಿ 23, ಫೆಬ್ರವರಿ 27, ಮಾರ್ಚ್ 3 ಮತ್ತು ಮಾರ್ಚ್ 7ರಂದು ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಅಂತಿಮವಾಗಿ ಮಾರ್ಚ್ 10ರಂದು ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ, ಕಾಂಗ್ರೆಸ್ ಮತ್ತು ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷದ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ.
2017ರಲ್ಲಿ ಯುಪಿ ಮತದಾರರ ತೀರ್ಪು:
ಈ ಹಿಂದೆ 2017ರಲ್ಲಿ ಉತ್ತರ ಪ್ರದೇಶದಲ್ಲಿ 403 ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಒಟ್ಟು 403 ಕ್ಷೇತ್ರಗಳ ಪೈಕಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಹುಜನ ಸಮಾಜವಾದಿ ಪಕ್ಷವು 19 ಕ್ಷೇತ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿತ್ತು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದ್ದು, ಕೇವಲ ಏಳು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.












Click it and Unblock the Notifications