ಉತ್ತರಪ್ರದೇಶ ಚುನಾವಣೆ 2022: ಇಬ್ಬರು ಉಪಮುಖ್ಯಮಂತ್ರಿಗಳು ಕಣಕ್ಕೆ
ಲಕ್ನೋ ಜನವರಿ 13: ಕಳೆದ ಕೆಲ ದಿನಗಳಿಂದ ಉತ್ತರಪ್ರದೇಶದಲ್ಲಿ ಬಿಜೆಪಿ ತೊರೆಯುವ ಜನನಾಯಕರ ಸಂಖ್ಯೆ ಹೆಚ್ಚಾಗುತ್ತಿದೆ. ಈವರೆಗೆ ಒಂಬತ್ತು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದು ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಗೆ ಬಹುದೊಡ್ಡ ಹೊಡೆತವನ್ನು ನೀಡಿದೆ. ಚುನಾವಣೆ ಹತ್ತಿರದಲ್ಲಿ ಪಕ್ಷ ತೊರೆದ ಶಾಸಕರ ಮುಂದೆ ಗೆಲುವು ಸಾಧಿಸಲು ಬಿಜೆಪಿ ರಣತಂತ್ರ ಹೆಣೆಯುತ್ತಿದೆ. ಹೀಗಾಗಿ ಪ್ರಬಲ ಅಭ್ಯರ್ಥಿಗಳನ್ನು ಚುನಾವಣೆಯಲ್ಲಿ ಕಣಕ್ಕಿಳಿಸಲು ಮುಂದಾಗಿದೆ.
ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಸಾಂಪ್ರದಾಯಿಕ ಕ್ಷೇತ್ರ ಸಿರತುದಿಂದ ಸ್ಪರ್ಧಿಸುವ ಸಾಧ್ಯತೆಯಿದೆ. ಕಳೆದ ಹಲವು ದಿನಗಳಿಂದ ಕೆಲ ಸಮುದಾಯದ ಹಲವು ನಾಯಕರು ಪಕ್ಷ ತೊರೆದಿರುವ ಸಂದರ್ಭದಲ್ಲಿ ಬಿಜೆಪಿಯಲ್ಲಿ ಒಬಿಸಿಯಿಂದ ಕೇಶವ್ ಪ್ರಸಾದ್ ಮೌರ್ಯ ಸ್ಪರ್ಧಿಸುವುದು ನಿರ್ಣಾಯಕವಾಗಿದೆ.
ಸಿರತು ವಿಧಾನಸಭೆ ಕೌಶಂಬಿ ಜಿಲ್ಲೆಯಲ್ಲಿದ್ದು, ಐದನೇ ಹಂತದ ಚುನಾವಣೆಗೆ ಮತದಾನ ನಡೆಯಲಿದೆ. ಅಲ್ಲದೆ ಬ್ರಾಹ್ಮಣ ಸಮುದಾಯದಿಂದ ಇನ್ನೊಬ್ಬ ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ ಲಕ್ನೋದ ಮೂರು ಕ್ಷೇತ್ರಗಳಲ್ಲಿ ಒಂದರಿಂದ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಬಿಜೆಪಿಯು ಮೌರ್ಯ ಅವರನ್ನು ರಾಜ್ಯದಲ್ಲಿ ಪಕ್ಷದ ಒಬಿಸಿ ಉಪಜಾತಿಯಾಗಿ ಕಣಕ್ಕಿಳಿಸುತ್ತದೆ ಮತ್ತು ಅವರನ್ನು ರಾಜ್ಯಾದ್ಯಂತ ಕಠಿಣ ಪೈಪೋಟಿಗೆ ಬಳಸಿಕೊಳ್ಳುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಯಾದವರು ಪ್ರಧಾನವಾಗಿ ಸಮಾಜವಾದಿ ಪಕ್ಷದತ್ತ ವಾಲಿದ್ದರೂ, ಒಬಿಸಿಗಳಲ್ಲಿ ಉಳಿದ ಅರ್ಧದಷ್ಟು ಉಪಜಾತಿಯನ್ನು ಬಿಜೆಪಿ ಈ ಚುನಾವಣೆಯಲ್ಲಿ ಗುರಿಯಾಗಿಸಿಕೊಂಡಿದೆ. ಈ ಎರಡು ಜಾತಿಗಳ ಭಾವನೆಗಳ ಮೇಲೆ ಪ್ರತಿಪಕ್ಷಗಳು ಬಿಜೆಪಿ ಪಕ್ಷವನ್ನು ಗುರಿಯಾಗಿಸಿಕೊಂಡಿವೆ. ಆದರೆ ಈ ಮತಗಳನ್ನು ಪಡೆಯಲು ಬಿಜೆಪಿಗೆ ಸದ್ಯ ಬಹುದೊಡ್ಡ ಸವಾಲಾಗಿದೆ. ಆದರೆ ಈ ಮತಗಳನ್ನು ಪಡೆಯಲು ನಾವು ಪ್ರಯತ್ನಿಸುತ್ತೇವೆ ಎಂದು ಪಕ್ಷದ ಹಿರಿಯ ನಾಯಕರು ಹೇಳಿದ್ದಾರೆ.

ಮೌರ್ಯ ಎಲ್ಲಿಂದ ಸ್ಪರ್ಧೆ?:
ಮೌರ್ಯ ಅವರು 2012 ರಲ್ಲಿ ಸಿರತು ವಿಧಾನಸಭಾ ಕ್ಷೇತ್ರದಲ್ಲಿ ಜಯ ಸಾಧಿಸಿ ಮೊದಲ ಬಾರಿಗೆ ಶಾಸಕರಾಗಿದ್ದರು. ಅಲ್ಲಿಯವರೆಗೆ ಈ ಸ್ಥಾನವನ್ನು ಬಹುಜನ ಸಮಾಜ ಪಕ್ಷದ ಭದ್ರಕೋಟೆ ಎಂದು ಪರಿಗಣಿಸಲಾಗಿತ್ತು. ಪ್ರಬಲ ಒಬಿಸಿ ಸಮುದಾಯದ ಪ್ರತಿನಿಧಿ ಎಂದು ಗುರುತಿಸಿಕೊಂಡಿರುವ ಮೌರ್ಯ ಅವರಿಗೆ ಜವಾಹರಲಾಲ್ ನೆಹರು ಅವರ ಕ್ಷೇತ್ರ ಎಂದು ಕರೆಯಲ್ಪಡುವ ಫುಲ್ಪುರ್‌ನಿಂದ 2014 ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಯಿತು.ಅಲ್ಲಿಯೂ ಅವರು ಜಯ ಸಾಧಿಸಿದರು.
2016ರಲ್ಲಿ ಮೌರ್ಯ ಅವರಿಗೆ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯ ಘಟಕದ ನೇತೃತ್ವ ವಹಿಸಲಾಗಿತ್ತು. ಈ ವೇಳೆ ಪಕ್ಷವು ಪ್ರಚಂಡ ಗೆಲುವು ಸಾಧಿಸಿತು ಮತ್ತು ಮೌರ್ಯ ಅವರ ಕಠಿಣ ಪ್ರಯತ್ನಕ್ಕೆ ಪ್ರತಿಫಲವನ್ನು ನೀಡಲಾಯಿತು. ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರದಲ್ಲಿ ಅವರಿಗೆ ಎಂಎಲ್‌ಸಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಲಾಯಿತು. ಜೊತೆಗೆ ಉಪ ಮುಖ್ಯಮಂತ್ರಿ ಮಾಡಲಾಯಿತು. ಮೌರ್ಯ ಅವರು ತಮ್ಮ ಮೊದಲ MLA ಚುನಾವಣೆಯಲ್ಲಿ ಸ್ಪರ್ಧಿಸುವ ಮೊದಲು RSS ಮತ್ತು ಅದರ ಅಂಗಸಂಸ್ಥೆ VHP ಯೊಂದಿಗೆ ಸಂಬಂಧ ಹೊಂದಿದ್ದಾರೆ.
ಇಂದು ಮತ್ತೋರ್ವ ಸಚಿವ ಕಮಲದ ಕೈ ಬಿಟ್ಟಿದ್ದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಉತ್ತರ ಪ್ರದೇಶದ ಸಚಿವ ಧರಂ ಸಿಂಗ್ ಸೈನಿ ಗುರುವಾರ ಬಿಜೆಪಿಗೆ ರಾಜೀನಾಮೆ ನೀಡಿದ್ದು, ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳಲ್ಲಿ ಕೇಸರಿ ಪಕ್ಷದೊಂದಿಗಿನ ಸಂಬಂಧವನ್ನು ಮುರಿದುಕೊಂಡ ಒಂಬತ್ತನೇ ಶಾಸಕರಾಗಿದ್ದಾರೆ.
ಇದಕ್ಕೂ ಮೊದಲು, ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ (ಎಸ್‌ಬಿಎಸ್‌ಪಿ) ಮುಖ್ಯಸ್ಥ ಓಂ ಪ್ರಕಾಶ್ ರಾಜ್‌ಭರ್ ಅವರು ಯೋಗಿ ಆದಿತ್ಯನಾಥ್ ಕ್ಯಾಬಿನೆಟ್‌ನಿಂದ ಪ್ರತಿದಿನ ಒಂದರಿಂದ ಇಬ್ಬರು ಸಚಿವರು ಹೊರಬರುತ್ತಾರೆ ಮತ್ತು ಜನವರಿ 20 ರ ವೇಳೆಗೆ ಈ ಸಂಖ್ಯೆ 18 ಕ್ಕೆ ಏರುತ್ತದೆ ಎಂದು ಹೇಳಿದ್ದರು. ರಾಜ್‌ಭರ್ ಹೇಳಿದಂತೆ ವಿಧಾನಸಭೆಗೂ ಮುನ್ನ ಶಾಸಕರು ಪಕ್ಷ ತೊರೆಯುತ್ತಿದ್ದಾರೆ. ಇದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
Recommended Video
ರಾಜೀನಾಮೆ ನೀಡುತ್ತಿರುವ ಜನನಾಯಕರು ಬಿಜೆಪಿ ಆಡಳಿತದ ವಿರುದ್ಧ ಅಸಮಧಾನಗೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಜೊತೆಗೆ ಬಿಜೆಪಿಗೆ ದಲಿತರು, ಹಿಂದುಳಿದವರು, ರೈತರು, ನಿರುದ್ಯೋಗಿ ಯುವಕರು ಮತ್ತು ಸಣ್ಣ ವ್ಯಾಪಾರಿಗಳ ಬಗ್ಗೆ ತೀವ್ರ ನಿರ್ಲಕ್ಷ್ಯವಿದೆ ಎಂದು ಆರೋಪಿಸಿ ರಾಜೀನಾಮೆ ನೀಡುತ್ತಿದ್ದಾರೆ.
ಒಬಿಸಿ ನಾಯಕ ದಾರಾ ಸಿಂಗ್ ಚೌಹಾಣ್ ಬುಧವಾರ ಯೋಗಿ ಆದಿತ್ಯನಾಥ್ ಸಂಪುಟಕ್ಕೆ ರಾಜೀನಾಮೆ ನೀಡಿ ಸಮಾಜವಾದಿ ಪಕ್ಷದತ್ತ ಮುಖ ಮಾಡಿರುವುದು ಕಂಡುಬಂದಿದೆ. ಕಳೆದ ಐದು ವರ್ಷಗಳಿಂದ ತಾನು ಸಮರ್ಪಣಾ ಭಾವದಿಂದ ದುಡಿದಿದ್ದೇನೆ ಆದರೆ ದಲಿತರು, ಒಬಿಸಿಗಳು ಮತ್ತು ನಿರುದ್ಯೋಗಿಗಳಿಗೆ ಬಿಜೆಪಿ ಸರ್ಕಾರದಿಂದ ನ್ಯಾಯ ಸಿಕ್ಕಿಲ್ಲ ಎಂದು ಚೌಹಾಣ್ ರಾಜೀನಾಮೆಗೆ ಕಾರಣ ಹೇಳಿಕೊಂಡಿದ್ದಾರೆ.












Click it and Unblock the Notifications