Breaking: ಮರ್ಯಾದೆಗೇಡು ಹತ್ಯೆ; ಜೋಡಿಯನ್ನು ಕೊಂದ ಬಾಲಕಿ ಕುಟುಂಬ
ಲಕ್ನೋ, ಆಗಸ್ಟ್ 29: ಅಂತರ್‌ಧರ್ಮೀಯ ಸಂಬಂಧದ ಹಿನ್ನೆಲೆ 18 ವರ್ಷದ ಯುವಕ ಮತ್ತು ಬಾಲಕಿಯನ್ನು ಮರ್ಯಾದೆಗೇಡು ಹತ್ಯೆ ಮಾಡಿರುವ ಶಂಕಿತ ಘಟನೆ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ವರದಿಯಾಗಿದೆ.
ಅಂತರ್‌ಧರ್ಮೀಯ ಸಂಬಂಧದ ಕಾರಣ ಕೊಲೆ ಮಾಡಲಾಗಿದೆ ಎಂದು ಶಂಕಿಸಿರುವ ಪ್ರಕರಣದಲ್ಲಿ, 18 ವರ್ಷದ ಯುವಕ ಮತ್ತು ಬಾಲಕಿಯನ್ನು ಆಕ್ಷೇಪಾರ್ಹ ಸ್ಥಿತಿಯಲ್ಲಿ ಕಂಡು ನಂತರ ಹತ್ಯೆ ಮಾಡಲಾಗಿದೆ.
ರುಧೌಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕಿಯ ಮನೆಯವರು ಜೋಡಿಯನ್ನು ಕೊಂದು ಆಕೆಯ ಶವವನ್ನು ಹೂತು ಹಾಕಿದ್ದು, 18 ವರ್ಷದ ಯುವಕನ ಶವವನ್ನು ಸಮೀಪದ ಕಬ್ಬಿನ ಗದ್ದೆಗೆ ಎಸೆದಿದ್ದಾರೆ.

ಬಾಲಕಿಯ ಶವವನ್ನು ಸಮಾಧಿಯಿಂದ ಹೊರತೆಗೆಯುವ ಪ್ರಕ್ರಿಯೆ ಆರಂಭವಾಗಿದ್ದು, ಎರಡೂ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ದೀಪೇಂದ್ರ ಚೌಧರಿ ತಿಳಿಸಿದ್ದಾರೆ.
"ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಈ ವಿಷಯದ ಬಗ್ಗೆ ಮತ್ತಷ್ಟು ತನಿಖೆ ನಡೆಸಲಾಗುತ್ತಿದೆ. ಶೀಘ್ರದಲ್ಲೇ ಅಪರಾಧಿಗಳನ್ನು ಹಿಡಿಯಲಾಗುವುದು" ಎಂದು ಪೊಲೀಸ್ ವರಿಷ್ಠಾಧಿಕಾರಿ ಹೇಳಿದರು.
ಪರಾಸ್ ನಾಥ್ ಚೌಧರಿ ಎಂಬ ರೈತ ತನ್ನ ಕಬ್ಬಿನ ಗದ್ದೆಯಲ್ಲಿ ಯುವಕನ ಶವವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದಾಗ ವಿಷಯ ಬೆಳಕಿಗೆ ಬಂದಿದೆ. ರುಧೌಲಿ ಪೊಲೀಸ್ ಠಾಣೆ ಪ್ರಭಾರಿ ಇನ್ಸ್‌ಪೆಕ್ಟರ್ ರಾಮಕೃಷ್ಣ ಮಿಶ್ರಾ ಅವರು ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಯುವಕನ ದೇಹದಲ್ಲಿ ಹಲವಾರು ಗಾಯದ ಗುರುತುಗಳು ಕಂಡುಬಂದಿವೆ. ಆತನ ಮೃತ ದೇಹ ಪತ್ತೆಯಾದಾಗ, ಆತನ ಬಟ್ಟೆ ಹರಿದ ಸ್ಥಿತಿಯಲ್ಲಿ, ಪ್ಯಾಟ್ ಕಾಲಿಗೆ ಜಾರಿದ ರೀತಿಯಲ್ಲಿ ಪತ್ತೆಯಾಗಿದ್ದಾರೆ.
ತನ್ನ ಮಗ ಬಾಲಕಿಯ ಗ್ರಾಮದ ವ್ಯಕ್ತಿಯೊಬ್ಬರ ಟ್ರ್ಯಾಕ್ಟರ್ ಓಡಿಸುತ್ತಿದ್ದ ಎಂದು ಯುವಕನ ತಂದೆ ಪೊಲೀಸರಿಗೆ ತಿಳಿಸಿದ್ದಾರೆ. ಇದಲ್ಲದೆ, ಮೃತನ ಸಹೋದರ ಕೂಡ, ಯುವಕ ಆ ವ್ಯಕ್ತಿಯ ಮನೆಗೆ ಹೋಗಿದ್ದರು ಎಂದು ಮಾಹಿತಿ ನೀಡಿದ್ದಾರೆ. ರಾತ್ರಿ ಮನೆಯಿಂದ ಹೋದ ಆತ ವಾಪಸ್ ಬಂದಿಲ್ಲ. ಆತನ ಫೋನ್ ಸ್ವಿಚ್ ಆಫ್ ಆಗಿತ್ತು ಎಂದು ಕುಟುಂಬದವರು ಆರೋಪಿಸಿದ್ದಾರೆ.
ಈ ಮಾಹಿತಿಯಲ್ಲಿ ಆರೋಪಿಗಳ ಮನೆಗೆ ಹೋದ ಪೊಲೀಸರಿಗೆ, ಆರೋಪಿಯ ಸಹೋದರಿ ಕೂಡ ಹಿಂದಿನ ರಾತ್ರಿ ಸಾವನ್ನಪ್ಪಿದ್ದಾರೆ ಎಂಬುದು ತಿಳಿದು ಬಂದಿದೆ. ಆಕೆಯನ್ನು ಹೂತು ಹಾಕಿದ್ದಾರೆ. ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.
"ಹೆಚ್ಚಿನ ತನಿಖೆಯಲ್ಲಿ ತಿಳಿದು ಬಂದಿದ್ದೆಂದರೆ, ರಾತ್ರಿಯ ಸಮಯದಲ್ಲಿ ಹುಡುಗಿ ನಿಗೂಢವಾಗಿ ಸಾವನ್ನಪ್ಪಿದ್ದಾಳೆ ಮತ್ತು ಸಮಾಧಿ ಮಾಡಲಾಗಿದೆ. ಯುವಕನ ಕುಟುಂಬವು ಮರ್ಯಾದೆಗೇಡು ಹತ್ಯೆಯಾಗಿದೆ ಎಂದು ಆರೋಪಿಸಿದ್ದಾರೆ. ನಾವು ಪ್ರಕರಣವನ್ನು ದಾಖಲಿಸಿದ್ದೇವೆ. ತನಿಖೆ ನಡೆಯುತ್ತಿದೆ" ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ದೀಪೇಂದ್ರ ಚೌಧರಿ ತಿಳಿಸಿದ್ದಾರೆ.












Click it and Unblock the Notifications