ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಬೆನ್ನಿಗೆ ನಿಂತ ರಾಷ್ಟ್ರೀಯ ಕಿಸಾನ್ ಮಂಚ್
ಲಕ್ನೋ, ಫೆಬ್ರವರಿ 24: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಡುವೆ ಸಮಾಜವಾದಿ ಪಕ್ಷಕ್ಕೆ ರೈತ ಸಂಘಟನೆಗಳು ಬೆಂಬಲವಾಗಿ ನಿಲ್ಲುತ್ತಿವೆ. ಇದೀಗ ರಾಷ್ಟ್ರೀಯ ಕಿಸಾನ್ ಮಂಚ್ ರೈತ ಸಂಘಟನೆಯು ಸಮಾಜವಾದಿ ಪಕ್ಷಕ್ಕೆ ತನ್ನ ಬೆಂಬಲ ಸೂಚಿಸಿದೆ.
ಸಮಾಜವಾದಿ ಪಕ್ಷ ಮುಖ್ಯಸ್ಥ ಅಖಿಲೇಶ್ ಯಾದವ್ ಅವರಿಗೆ ರಾಷ್ಟ್ರೀಯ ಕಿಸಾನ್ ಮಂಚ್ ರಾಷ್ಟ್ರಾಧ್ಯಕ್ಷ ಶೇಖರ್ ದೀಕ್ಷಿತ್ ಈ ಸಂಬಂಧ ಪತ್ರವೊಂದನ್ನು ಬರೆದಿದ್ದಾರೆ. ತಮ್ಮ ಸಂಘಟನೆಯು ಸಮಾಜವಾದಿ ಪಕ್ಷಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಲಾಗಿದೆ.
ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷವು ರೈತರ ಹಿತಕ್ಕಾಗಿ ಏನನ್ನೂ ಮಾಡದೆ ಅನೈತಿಕತೆ ಸೃಷ್ಟಿಸುವ ಮಾತನಾಡುತ್ತಿರುವುದು ದುರಾದೃಷ್ಟಕರ ಎಂದು ಶೇಖರ್ ದೀಕ್ಷಿತ್ ಪತ್ರದಲ್ಲಿ ಬರೆದಿದ್ದಾರೆ.

ಬಿಜೆಪಿಯದ್ದು ಒಡೆದು ಆಳುವ ನೀತಿ:
ಉತ್ತರ ಪ್ರದೇಶದಲ್ಲಿ ಬಿಜೆಪಿಯವರು ಧಾರ್ಮಿಕ ಉನ್ಮಾದ ಮೂಡಿಸುವುದರ ಮೂಲಕ ಮತ್ತೆ ಅಧಿಕಾರ ಹಿಡಿಯಲು ಯತ್ನಿಸುತ್ತಿದ್ದಾರೆ. ಆಡಳಿತ ಪಕ್ಷ ಈಸ್ಟ್ ಇಂಡಿಯಾ ಕಂಪನಿಯಂತೆ ವರ್ತಿಸುತ್ತಿದ್ದು, ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದು ಶೇಖರ್ ದೀಕ್ಷಿತ್ ಆರೋಪಿಸಿದ್ದಾರೆ.
ಸಮಾಜವಾದಿ ಪಕ್ಷಕ್ಕೆ ರೈತ ಸಂಘಟನೆ ಬೆಂಬಲ:
ರಾಷ್ಟ್ರೀಯ ಕಿಸಾನ್ ಮಂಚ್‌ನ ತುರ್ತು ಸಭೆಯಲ್ಲಿ ರಾಜ್ಯದ ಪ್ರಸ್ತುತ ಪರಿಸ್ಥಿತಿಯ ಕುರಿತು ಚರ್ಚಿಸಿದ ನಂತರ ಎಸ್‌ಪಿಗೆ ಬೆಂಬಲವನ್ನು ನೀಡಲಾಯಿತು. ರೈತರು ಮತ್ತು ಯುವಕರ ಏಳಿಗೆಯ ದೃಷ್ಟಿಯನ್ನು ಸಾಕಾರಗೊಳಿಸುವ ಉದ್ದೇಶದಿಂದ ಈ ಬೆಂಬಲ ನೀಡಲಾಗುತ್ತಿದೆ ಎಂದು ಎಂದು ರಾಷ್ಟ್ರೀಯ ಕಿಸಾನ್ ಮಂಚ್ ರಾಷ್ಟ್ರಾಧ್ಯಕ್ಷ ಶೇಖರ್ ದೀಕ್ಷಿತ್ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ರೈತರಿಗೆ ಉಚಿತ ನೀರಾವರಿ, 300 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುವುದು ಸೇರಿದಂತೆ ಸಮಾಜವಾದಿ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದ ಭರವಸೆಗಳ ಬಗ್ಗೆ ದೀಕ್ಷಿತ್ ಪತ್ರದಲ್ಲಿ ತಿಳಿಸಿದ್ದಾರೆ. ಈ ಹಿಂದೆಯೂ ಸಮಾಜವಾದಿ ಪಕ್ಷ ರೈತರ ಹಿತಕ್ಕಾಗಿ ಹಲವು ಫಲಪ್ರದ ಕೆಲಸಗಳನ್ನು ಮಾಡಿದ್ದು, ಮುಂದಿನ ದಿನಗಳಲ್ಲಿ ಸರ್ಕಾರ ರಚಿಸಿದರೆ ಈ ಕಾರ್ಯಗಳನ್ನು ಮುಂದುವರಿಸುವ ನಿರೀಕ್ಷೆಯಿದೆ ಎಂದಿದ್ದಾರೆ.
ಉತ್ತರ ಪ್ರದೇಶದಲ್ಲಿ ರೈತ ಸಂಘಟನೆ ಸಮಾವೇಶ:
ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ಟಿಕಾಯತ್ ಸೇರಿದಂತೆ ಸಂಯುಕ್ತ ಕಿಸಾನ್ ಮೋರ್ಚಾದ ಹಲವು ರೈತ ಮುಖಂಡರು ಉತ್ತರ ಪ್ರದೇಶದ ಪ್ರಮುಖ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ. ಪ್ರಯಾಗ್‌ರಾಜ್, ಗೋರಖ್‌ಪುರ, ವಾರಣಾಸಿ ಜಿಲ್ಲೆಗಳಿಗೆ ರೈತ ಮುಖಂಡರು ಸಮಾವೇಶ ನಡೆಸಲು ಈಗಾಗಲೇ ನಿರ್ಧರಿಸಿದ್ದಾರೆ. ಭಾರತೀಯ ಕಿಸಾನ್ ಮೋರ್ಚಾದ ವಕ್ತಾರ ಸೌರಭ್ ಉಪಾಧ್ಯಾಯ ಮಾತನಾಡಿ, ಸಂಯುಕ್ತ ಕಿಸಾನ್ ಮೋರ್ಚಾ ಫೆಬ್ರವರಿ 23ರಂದು ಪ್ರಯಾಗರಾಜ್‌ನಲ್ಲಿ, ಫೆಬ್ರವರಿ 28ರಂದು ಗೋರಖ್‌ಪುರದಲ್ಲಿ ಮತ್ತು ಮಾರ್ಚ್ 2ರಂದು ವಾರಣಾಸಿಯಲ್ಲಿ ಸಮಾವೇಶ ನಡೆಸಲಿದೆ ಎಂದಿದ್ದಾರೆ.
ಉತ್ತರ ಪ್ರದೇಶ ಸರ್ಕಾರದ ಸಚಿವ ನಂದಗೋಪಾಲ್ ಗುಪ್ತಾ ಮತ್ತು ಸಿದ್ಧಾರ್ಥ್ ನಾಥ್ ಸಿಂಗ್ ಪ್ರಯಾಗರಾಜ್‌ನಿಂದ ಬಿಜೆಪಿಯ ಅಭ್ಯರ್ಥಿಗಳು ರಣದಲ್ಲಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೋರಖ್‌ಪುರದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಫೆಬ್ರವರಿ 27ರಂದು ಪ್ರಯಾಗ್‌ರಾಜ್‌ನಲ್ಲಿ, ಮಾರ್ಚ್ 3 ರಂದು ಗೋರಖ್‌ಪುರದಲ್ಲಿ ಮತ್ತು ಮಾರ್ಚ್ 7 ರಂದು ವಾರಣಾಸಿಯಲ್ಲಿ ವಿಧಾನಸಭೆ ಚುನಾವಣಾ ಮತದಾನ ನಿಗದಿಯಾಗಿದೆ. ಮಾರ್ಚ್ 10ರಂದು ಅಂತಿಮ ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications