ಪ್ರವಾದಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ವಿರುದ್ಧ ಪ್ರತಿಭಟನೆ: ಸುಮೈಯಾ ರಾಣಾ ಬಂಧನ
ಲಕ್ನೋ ಜೂನ್ 04: ಖ್ಯಾತ ಕವಿ ಮುನವ್ವರ್ ರಾಣಾ ಅವರ ಪುತ್ರಿ ಸುಮೈಯಾ ರಾಣಾ ಅವರನ್ನು ಲಕ್ನೋ ಪೊಲೀಸರು ಇಂದು (ಜೂನ್ 04) ಬಂಧಿಸಿದ್ದಾರೆ. ಭಾರತೀಯ ಜನತಾ ಪಕ್ಷದ (ಬಿಜೆಪಿ) ವಕ್ತಾರೆ ನೂಪುರ್ ಶರ್ಮಾ ವಿರುದ್ಧ ಸುಮೈಯಾ ರಾಣಾ ಪ್ರತಿಭಟನೆ ನಡೆಸಲು ಹೊರಟಿದ್ದಾಗ ಲಕ್ನೋ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಪೊಲೀಸರು ಎಸ್‌ಪಿ ನಾಯಕಿಯಾದ ಸುಮೈಯಾ ರಾಣಾ ಅವರನ್ನು ಲಾಲ್‌ಬಾಗ್‌ನಲ್ಲಿರುವ ಅವರ ನಿವಾಸದಲ್ಲಿಯೇ ಬಂಧಿಸಿದ್ದಾರೆ.
ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರು ಜ್ಞಾನವಾಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿವಿ ಚರ್ಚೆಯಲ್ಲಿ ಪ್ರವಾದಿ ಮೊಹಮ್ಮದ್ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಇವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದೇ ಸಮಯದಲ್ಲಿ, ನೂಪುರ್ ಶರ್ಮಾ ಅವರ ಈ ಹೇಳಿಕೆಗೆ ಹಲವು ಮುಸ್ಲಿಂ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ. ಅಷ್ಟೇ ಅಲ್ಲ, ನೂಪುರ್ ಶರ್ಮಾ ವಿರುದ್ಧ ಮಹಾರಾಷ್ಟ್ರದಲ್ಲಿ ಎರಡು ಎಫ್‌ಐಆರ್ ಕೂಡ ದಾಖಲಾಗಿದೆ. ನೂಪುರ್ ಶರ್ಮಾ ಅವರ ಈ ಹೇಳಿಕೆಯಿಂದಾಗಿ ಉತ್ತರ ಪ್ರದೇಶದ ಕಾನ್ಪುರದಲ್ಲೂ ಹಿಂಸಾಚಾರ ಭುಗಿಲೆದ್ದಿತ್ತು.

ಕಾನ್ಪುರದಲ್ಲಿ ಗದ್ದಲದ ನಂತರವೇ ಲಕ್ನೋದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಟಿವಿ ಚರ್ಚೆಯಲ್ಲಿ ಪ್ರವಾದಿ ಮೊಹಮ್ಮದ್ ಕುರಿತು ನೂಪುರ್ ಶರ್ಮಾ ವಿವಾದಾತ್ಮಕ ಹೇಳಿಕೆ ನೀಡಿದ ನಂತರ ಆಕೆಯ ಬಂಧನಕ್ಕೆ ಬೇಡಿಕೆ ತೀವ್ರಗೊಂಡಿದೆ. ಈ ವೇಳೆ ನೂಪುರ್ ಶರ್ಮಾ ವಿರುದ್ಧ ಎಸ್ಪಿ ನಾಯಕ ಸುಮೈಯಾ ರಾಣಾ ಇಂದು ಪ್ರತಿಭಟನೆ ನಡೆಸಲಿದ್ದರು. ಈ ವೇಳೆ ಲಕ್ನೋ ಪೊಲೀಸರು ಸುಮೈಯಾ ರಾಣಾ ಅವರನ್ನು ಲಾಲ್‌ಬಾಗ್‌ನಲ್ಲಿರುವ ಅವರ ನಿವಾಸದಲ್ಲಿ ಬಂಧಿಸಿದ್ದಾರೆ.












Click it and Unblock the Notifications