ಯುಪಿ ಚುನಾವಣೆ: ಪ್ರಧಾನಿ ನೇತೃತ್ವದಲ್ಲಿ ಬಿಜೆಪಿ ಚುನಾವಣಾ ಸಮಿತಿ ಸಭೆ
ಲಕ್ನೋ, ಜನವರಿ 13: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹಿನ್ನೆಲೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದೆ.
ನವದೆಹಲಿ ಬಿಜೆಪಿ ಕೇಂದ್ರ ಕಚೇರಿಯ 42 ಸಿಬ್ಬಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಈ ಹಿನ್ನೆಲೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವರ್ಚುವಲ್ ಸಭೆಯಲ್ಲಿ ನಡೆಸಲಿದ್ದಾರೆ. ಕೊರೊನಾವೈರಸ್ ಸೋಂಕು ತಗುಲಿರುವ ಕಾರಣ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಾರಿಗೆ ಸಚಿವ ನಿತಿನ್ ಗಡ್ಕರಿ ಕೂಡ ಆನ್‌ಲೈನ್ ಮೂಲಕ ಸಭೆಗೆ ಹಾಜರಾಗಲಿದ್ದಾರೆ.
ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆಯುವ ಸಭೆಗೆ ಕೇಂದ್ರ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ ಹಾಗೂ ಕೇಶವ ಪ್ರಸಾದ್ ಶರ್ಮಾ ಭಾಗವಹಿಸಲಿದ್ದಾರೆ. ಗುರುವಾರದ ಸಭೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಯಾವ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದು ಪ್ರಮುಖ ಚರ್ಚಾ ವಿಷಯವಾಗಿದೆ.

ಯೋಗಿ ಆದಿತ್ಯನಾಥ್ ವಿಧಾನಸಭೆ ಕ್ಷೇತ್ರ ಯಾವುದು?
ಉತ್ತರ ಪ್ರದೇಶದ ಗೋರಖ್ ಪುರ್ ಲೋಕಸಭೆ ಕ್ಷೇತ್ರದಿಂದ ಈ ಹಿಂದೆ ಐದು ಸ್ಪರ್ಧಿಸಿರುವ ಯೋಗಿ ಆದಿತ್ಯನಾಥ್ ಇದುವರೆಗೂ ಯಾವುದೇ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿಲ್ಲ. ಅದರ ಬದಲಿಗೆ ವಿಧಾನ ಪರಿಷತ್ ಸದಸ್ಯರನ್ನಾಗಿ ಅವರನ್ನು ಆಯ್ಕೆ ಮಾಡಲಾಗಿತ್ತು. ಪ್ರಸ್ತುತ ಸಿಎಂ ಯೋಗಿ ಆದಿತ್ಯನಾಥ್ ವಿಧಾನ ಪರಿಷತ್ ಸದಸ್ಯರೇ ಆಗಿದ್ದಾರೆ. ಹೀಗಾಗಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ ಯಾವ ಕ್ಷೇತ್ರದಿಂದ ಸ್ಪರ್ಧಿಸುವುದು ಉತ್ತಮ ಹಾಗೂ ಸುರಕ್ಷಿತ ಎಂಬುದರ ಬಗ್ಗೆ ಬಿಜೆಪಿಯ ಕೇಂದ್ರ ನಾಯಕರು ಲೆಕ್ಕಾಚಾರ ಹಾಕುತ್ತಿದ್ದಾರೆ.
ಅಯೋಧ್ಯೆ ಅಥವಾ ಮಥುರಾದಲ್ಲಿ ಯೋಗಿ ಸ್ಪರ್ಧೆ?:
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಯಾವ ಕ್ಷೇತ್ರದಿಂದ ಕಣಕ್ಕಿಳಿಯಬೇಕು ಎಂಬ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಗುತ್ತಿದೆ. ಒಂದು ವೇಳೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಾದರೆ, ದೇವಾಲಯಗಳ ನಗರಿ ಎನಿಸಿರುವ ಅಯೋಧ್ಯೆ ಅಥವಾ ಮಥುರಾದಿಂದ ಕಣಕ್ಕಿಳಿಯುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.
ಮೊದಲ ಹಂತದಲ್ಲಿ 113 ಕ್ಷೇತ್ರಗಳಿಗೆ ಚುನಾವಣೆ:
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, ಫೆಬ್ರವರಿ 14, ಫೆಬ್ರವರಿ 20, ಫೆಬ್ರವರಿ 23, ಫೆಬ್ರವರಿ 27, ಮಾರ್ಚ್ 3 ಮತ್ತು ಮಾರ್ಚ್ 7ರಂದು ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಅಂತಿಮವಾಗಿ ಮಾರ್ಚ್ 10ರಂದು ಅಂತಿಮ ಫಲಿತಾಂಶ ಪ್ರಕಟವಾಗಲಿದೆ. ಫೆಬ್ರವರಿ 10 ಮತ್ತು 14ರಂದು ಮೊದಲ ಎರಡು ಹಂತಗಳಲ್ಲಿ ಪಶ್ಚಿಮ ಭಾಗದ 113 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಈ ಸಂಬಂಧ ಟಿಕೆಟ್ ಹಂಚಿಕೆ ಕುರಿತು ಮಂಗಳವಾರ ಮತ್ತು ಬುಧವಾರದ ಸರಣಿ ಸಭೆಗಳನ್ನು ನಡೆಸಲಾಗಿದೆ.
ಮಿತ್ರಪಕ್ಷಗಳ ಜೊತೆ ಸೀಟು ಹಂಚಿಕೆ ಚರ್ಚೆ:
ಬುಧವಾರವಷ್ಟೇ ಮಿತ್ರಪಕ್ಷಗಳ ಜೊತೆ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯು 14 ಗಂಟೆಗಳ ಸುದೀರ್ಘ ಚರ್ಚೆ ಬಳಿಕ ಮಧ್ಯರಾತ್ರಿ 1.35 ಗಂಟೆಗೆ ಮುಕ್ತಾಯವಾಗಿತ್ತು. ಕೇಂದ್ರ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಮಿತ್ರಪಕ್ಷಗಳ ಜೊತೆ ಸೀಟು ಹಂಚಿಕೆ ಕುರಿತು ಚರ್ಚೆ ನಡೆಸಲಾಯಿತು. ಈ ವೇಳೆ ಬಿಜೆಪಿ ಸಭೆಯಲ್ಲಿ ಮಿತ್ರಪಕ್ಷ ನಿಶಾದ್ ಪಕ್ಷದ ಅಧ್ಯಕ್ಷ ಸಂಜಯ್ ನಿಶಾದ್, ಅಪ್ನಾ ದಳ ಮುಖಂಡ ಅನುಪಮಾ ಪಟೇಲ್ ಭಾಗವಹಿಸಿದ್ದರು.
2017j ಉತ್ತರ ಪ್ರದೇಶ ಫಲಿತಾಂಶ:
ಕಳೆದ 2017ರಲ್ಲಿ ಉತ್ತರ ಪ್ರದೇಶದಲ್ಲಿ 403 ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಒಟ್ಟು 403 ಕ್ಷೇತ್ರಗಳ ಪೈಕಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಹುಜನ ಸಮಾಜವಾದಿ ಪಕ್ಷವು 19 ಕ್ಷೇತ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿತ್ತು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದ್ದು, ಕೇವಲ ಏಳು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.












Click it and Unblock the Notifications