'ಬಿಜೆಪಿ ಸಂಸದರ ಸಂಬಂಧಿಕರಿಗೆ ಉಪ ಚುನಾವಣೆ ಟಿಕೆಟ್ ಇಲ್ಲ'
ಲಖನೌ, ಜೂನ್ 28: ಉತ್ತರಪ್ರದೇಶದಲ್ಲಿ ಹನ್ನೆರಡು ವಿಧಾನಸಭೆ ಸ್ಥಾನಗಳಿಗೆ ನಡೆಯುವ ಉಪ ಚುನಾವಣೆಯಲ್ಲಿ ಪಕ್ಷದ ಯಾವುದೇ ನಾಯಕರ ಸಂಬಂಧಿಕರನ್ನು ಕಣಕ್ಕೆ ಇಳಿಸಕೂಡದು ಎಂದು ಭಾರತೀಯ ಜನತಾ ಪಕ್ಷ ತೀರ್ಮಾನ ಮಾಡಿದೆ. ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ರಾಜ್ಯಾಧ್ಯಕ್ಷ ಡಾ.ಮಹೇಂದ್ರ ನಾಥ್ ಪಾಂಡೆ ಇತರರು ಭಾಗವಹಿಸಿದ್ದ ಪಕ್ಷದ ಕೋರ್ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ.
ನಾವು ಪಕ್ಷದ ಕಾರ್ಯಕರ್ತರಿಗೆ ಟಿಕೆಟ್ ನೀಡಲಿದ್ದೇವೆ. ಈಚೆಗೆ ಆಯ್ಕೆಯಾದ ಸಂಸದರ ಸಂಬಂಧಿಕರಿಗೆ ಅಲ್ಲ. ಯಾವುದೇ ಕಾರಣಕ್ಕೂ ಕುಟುಂಬ ರಾಜಕಾರಣವನ್ನು ಪ್ರೋತ್ಸಾಹಿಸುವುದಿಲ್ಲ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಮೂಲಗಳ ಪ್ರಕಾರ, ಈ ಬಾರಿ ಲೋಕಸಭೆಗೆ ಆಯ್ಕೆಯಾಗಿರುವ ಶಾಸಕರು, ತೆರವಾಗಿರುವ ಸ್ಥಾನದಲ್ಲಿ ತಮ್ಮ ಸಂಬಂಧಿಕರಿಗೆ ಟಿಕೆಟ್ ಕೊಡಿಸಲು ಯತ್ನಿಸುತ್ತಿದ್ದಾರೆ.

ಡಾ ರೀತಾ ಬಹುಗುಣ ಜೋಶಿ ತಮ್ಮ ಮಗ ಮಯಾಂಕ್ ಗೆ, ಸತ್ಯದೇವ್ ಪಚೌರಿ ಹಾಗೂ ಎಸ್.ಪಿ.ಸಿಂಗ್ ಬಘೇಲ್ ಕೂಡ ತಮ್ಮ ಸಂಬಂಧಿಕರಿಗೆ ಟಿಕೆಟ್ ಕೊಡಿಸಲು ಲಾಬಿ ಮಾಡುತ್ತಿದ್ದಾರೆ. ಉಪಚುನಾವಣೆ ನಡೆಯಬೇಕಿರುವ ಹನ್ನೆರಡು ಸ್ಥಾನಗಳಲ್ಲಿ ಒಂಬತ್ತರಿಂದ ಬಿಜೆಪಿ, ಒಂದರಿಂದ ಅಪ್ನಾದಳ್ ಆಯ್ಕೆ ಮಾಡಲಾಗಿದೆ. ಇನ್ನು ಎಸ್ ಪಿ ಹಾಗೂ ಬಿಎಸ್ ಪಿಯಿಂದ ತಲಾ ಒಂದು ಸ್ಥಾನ ಗೆಲ್ಲಲಾಗಿತ್ತು.












Click it and Unblock the Notifications