ಗಂಗಾ ನದಿಯಲ್ಲಿ ತೇಲಿ ಬಂದ ಮರದ ಪೆಟ್ಟಿಗೆಯಲ್ಲಿ ನವಜಾತ ಹೆಣ್ಣು ಶಿಶು: ದೋಣಿಗಾರನಿಂದ ರಕ್ಷಣೆ
ಗಾಜಿಪುರ, ಜೂ. 17: ಗಾಜಿಪುರದ ದಾದ್ರಿ ಘಾಟ್‌ನ ಉದ್ದಕ್ಕೂ ಇರುವ ಗಂಗಾ ನದಿಯಲ್ಲಿ ಮರದ ಪೆಟ್ಟಿಗೆಯೊಂದು ತೇಲಿ ಬಂದಿದ್ದು, ಆ ಪೆಟ್ಟಿಗೆಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆಯಾಗಿದೆ ಎಂದು ವರದಿಯಾಗಿದೆ. ಈ ಮಗುವನ್ನು ದೋಣಿಗಾರ ರಕ್ಷಿಸಿದ್ದಾನೆ ಎಂದು ವರದಿ ಉಲ್ಲೇಖಿಸಿದೆ.
ಈ ಶಿಶುವನ್ನು ಸ್ಥಳೀಯ ದೋಣಿಗಾರ ಗುಲ್ಲು ಚೌಧರಿ ರಕ್ಷಿಸಿದ್ದಾರೆ. ''ಈ ಮಗು ಗಂಗಾ ನದಿಯ ಉಡುಗೊರೆಯಾಗಿರುವುದರಿಂದ ಈ ಮಗುವನ್ನು ನಾನೇ ಸಾಕುತ್ತೇನೆ,'' ಎಂದು ಹೇಳಿದ್ದಾರೆ. ಇನ್ನು ''ನವಜಾತ ಹೆಣ್ಣು ಶಿಶು ಇದ್ದ ಮರದ ಪೆಟ್ಟಿಗೆಯಲ್ಲಿ ದೇವರು ಮತ್ತು ದೇವತೆಗಳ ಚಿತ್ರಗಳಿವೆ. ಹಾಗೆಯೇ ಈ ಶಿಶುವಿನ ಜಾತಕವೂ ಕೂಡಾ ಇದೆ,'' ಎಂದು ಗುಲ್ಲು ಚೌಧರಿ ವಿವರಿಸಿದ್ದಾರೆ.
ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿದ ಕೂಡಲೇ ಈ ಹೆಣ್ಣು ಮಗುವನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಶಿಶುವಿನ ಮುಂದಿನ ಪಾಲನೆಯ ಬಗ್ಗೆ ಪೊಲೀಸರು ಯಾವುದೇ ಮಾಹಿತಿ ನೀಡಿಲ್ಲ. ಆದರೆ ದೋಣಿಗಾರ ಗುಲ್ಲು ಚೌಧರಿ ತಾನೇ ಈ ಮಗುವನ್ನು ಸಾಕುವುದಾಗಿ ಹೇಳಿದ್ದಾರೆ.

''ಸದ್ಯ ಶಿಶು ವೈದ್ಯಕೀಯ ಪರೀಕ್ಷೆಗೆ ಒಳಗೊಳ್ಳಲಿದ್ದು ಪೋಷಕರನ್ನು ಹುಡುಕುವ ಪ್ರಯತ್ನಗಳು ನಡೆಯುತ್ತಿವೆ,'' ಎಂದು ಪೊಲೀಸ್ ಅಧಿಕಾರಿಯೊಬ್ಬರು ಎಂದಿದ್ದಾರೆ.
गाजीपुर में माँ गंगा की लहरों पर तैरते संदूक में रखी नवजात बालिका "गंगा" की जीवन-रक्षा करने वाले नाविक ने मानवता का अनुपम उदाहरण प्रस्तुत किया है।
— Yogi Adityanath (@myogiadityanath) June 16, 2021
नाविक को आभार स्वरूप सभी पात्र सरकारी योजनाओं से लाभान्वित किया जाएगा।@UPGovt नवजात बच्ची के लालन-पालन का संपूर्ण प्रबंध करेगी। pic.twitter.com/YXTTOmYVqy
ಇನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಶಿಶುವನ್ನು ರಕ್ಷಿಸಿದ ದೋಣಿಗಾರನನ್ನು ಪ್ರಶಂಸಿದ್ದಾರೆ. ''ಗಾಜಿಪುರದ ತಾಯಿ ಗಂಗಾ ಅಲೆಯಲ್ಲಿ ತೇಲುತ್ತಿರುವ ಪೆಟ್ಟಿಗೆಯಲ್ಲಿ ಇರಿಸಲಾಗಿರುವ 'ಗಂಗಾ' ಎಂಬ ನವಜಾತ ಶಿಶುವಿನ ಜೀವವನ್ನು ಉಳಿಸಿದ ನಾವಿಕನು ಮಾನವೀಯತೆಗೆ ಒಂದು ವಿಶಿಷ್ಟ ಉದಾಹರಣೆಯಾಗಿದ್ದಾನೆ. ನಾವಿಕನಿಗೆ ಕೃತಜ್ಞತೆಯ ಸಂಕೇತವಾಗಿ, ಎಲ್ಲಾ ಅರ್ಹ ಸರ್ಕಾರಿ ಯೋಜನೆಗಳ ಫಲಾನುಭವಿ ಈ ನಾವಿಕರಾಗಲಿದ್ದಾರೆ. ಉತ್ತರ ಪ್ರದೇಶ ಸರ್ಕಾರ ನವಜಾತ ಹೆಣ್ಣು ಮಗುವನ್ನು ಬೆಳೆಸಲು ಸಂಪೂರ್ಣ ವ್ಯವಸ್ಥೆ ಮಾಡುತ್ತದೆ,'' ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
(ಒನ್‌ಇಂಡಿಯಾ ಸುದ್ದಿ)












Click it and Unblock the Notifications