ಲುಲು ಮಾಲ್ ಹೊರಗಡೆ ಹೈಡ್ರಾಮ: ಹನುಮಾನ್ ಚಾಲೀಸಾ ಪಠಿಸುತ್ತಿದ್ದವನ ಬಂಧನ
ಲಕ್ನೋ, ಜುಲೈ 16: ಲಕ್ನೋದಲ್ಲಿ ನೂತನವಾಗಿ ನಿರ್ಮಿಸಿರುವ ಲುಲು ಮಾಲ್‌ನ ಹೊರಗೆ ಹನುಮಾನ್ ಚಾಲೀಸಾ ಪಠಿಸಲು ಪ್ರಯತ್ನಿಸಿದ ಮತ್ತು ಮಾಲ್ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ಹಿಂದೂ ಮಹಾಸಭಾದ ಹಲವು ಪದಾಧಿಕಾರಿಗಳನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ.
ಶುಕ್ರವಾರ, ಲುಲು ಮಾಲ್‌ನ ಪ್ರವೇಶ ದ್ವಾರದ ಹೊರಗೆ ಸುಂದರ ಕಾಂಡವನ್ನು ಪಠಿಸುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದರು. ಸೆಕ್ಷನ್ 144 ಜಾರಿಯಾಗಿದ್ದರೂ ಲೆಕ್ಕಿಸದೆ ಉಲ್ಲಂಘಿಸಿದ್ದಕ್ಕಾಗಿ ಇವರನ್ನು ವಶಕ್ಕೆ ಪಡೆದಿದ್ದ ಪೊಲೀಸರು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇದಾದ ಬಳಿಕ ಮಾಲ್‌ನ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು ಮತ್ತು ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ಆದರೆ, ಇದನ್ನೂ ಲೆಕ್ಕಿಸದೆ ಕೇಸರಿ ಧ್ವಜಗಳನ್ನು ಹಾರಿಸುವ ಮೂಲಕ ಘೋಷಣೆಗಳನ್ನು ಕೂಗುತ್ತಿದ್ದ ಎಲ್ಲ ಪ್ರತಿಭಟನಾಕಾರರನ್ನು ಪೊಲೀಸರು ಇಂದು ವಶಕ್ಕೆ ಪಡೆದಿದ್ದಾರೆ.
ಇತ್ತೀಚೆಗಷ್ಟೇ ತೆರೆಯಲಾಗಿದ್ದ ಲುಲು ಮಾಲ್‌ನ ಒಳಗಡೆ ಮುಸ್ಲಿಮರ ಗುಂಪೊಂದು ನಮಾಜ್ ಮಾಡುತ್ತಿರುವ ವಿಡಿಯೊವೊಂದು ವೈರಲ್ ಆಗಿತ್ತು. ಇದನ್ನು ಖಂಡಿಸಿ ಅಖಿಲ ಭಾರತ ಹಿಂದೂ ಮಹಾಸಭಾ ಮಾಲ್ ಹೊರಗೆ ಪ್ರತಿಭಟನೆಗೆ ಮುಂದಾಗಿತ್ತು. ತಾವೂ ಕೂಡ ಹನುಮಾನ್ ಚಾಲೀಸಾವನ್ನು ಪಠಿಸಲು ಅನುಮತಿ ನೀಡಬೇಕೆಂದು ಸ್ಥಳೀಯ ಅಧಿಕಾರಿಗಳಿಗೆ ಮನವಿ ಮಾಡಿತ್ತು. ಆದರೆ, ಈ ಮನವಿಯನ್ನು ಅಧಿಕಾರಿಗಳು ತಿರಸ್ಕರಿಸಿದ್ದರು.
|
ಅಖಿಲ ಭಾರತ ಹಿಂದೂ ಮಹಾಸಭಾ ಪ್ರತಿಭಟನೆ
ಹೀಗಾಗಿ ಮಾಲ್ ಮುಂದೆ ಪ್ರತಿಭಟನೆಯನ್ನು ಆರಂಭಿಸಿದ ಪ್ರತಿಭಟನಾಕಾರರು, ಹನುಮಾನ್ ಚಾಲೀಸಾ ಪಠಿಸಲು ಲುಲು ಮಾಲ್‌ನ ಒಳಗೆ ಬಂದಿದ್ದರು. ಈ ವಿಚಾರ ತಿಳಿದು ಸ್ಥಳಕ್ಕೆ ಬಂದ ಪೊಲೀಸರನ್ನು ಕಂಡು ಕೆಲ ಪ್ರತಿಭಟನಾಕಾರರು ಓಡಿದ್ದಾರೆ. ಕೊನೆಗೂ ಪೊಲೀಸರು ಪ್ರತಿಭಟನೆಯಲ್ಲಿ ತೊಡಗಿದ್ದ ಎಲ್ಲರನ್ನು ವಶಕ್ಕೆ ಪಡೆದಿದ್ದಾರೆ.
ಹಿಂದೂ ಮಹಾಸಭಾದ ರಾಷ್ಟ್ರೀಯ ವಕ್ತಾರ ಶಿಶಿರ್ ಚತುರ್ವೇದಿ, "ಲುಲು ಮಾಲ್‌ನಲ್ಲಿ ಜನರ ಗುಂಪೊಂದು ನಮಾಜ್ ಮಾಡಿರುವ ವಿಡಿಯೊ ಕಂಡುಬಂದಿದೆ. ಈ ಮಾಲ್‌ನಲ್ಲಿ ಸರ್ಕಾರದ ಆದೇಶಗಳನ್ನು ಉಲ್ಲಂಘಿಸಲಾಗಿದೆ ಎಂಬುದು ಈ ವಿಡಿಯೊ ಮೂಲಕ ಸಾಬೀತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡುವಂತಿಲ್ಲ ಎಂದು ಸರ್ಕಾರ ಆದೇಶ ನೀಡಿದೆ. ಹೀಗಿದ್ದರೂ, ಲುಲು ಮಾಲ್‌ನಲ್ಲಿ ನಮಾಜ್ ಮಾಡಲು ಅವಕಾಶ ನೀಡಿರುವುದು ತಪ್ಪು" ಎಂದು ಪ್ರತಿಕ್ರಿಯಿಸಿದ್ದರು.
|
ನಮಾಜ್ ಮಾಡುವ ವಿಡಿಯೋ ವೈರಲ್
ನಮಾಜ್ ಮಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬಳಿಕ, ಮಾಲ್ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿತ್ತು. ವಿವಿಧ ಗುಂಪುಗಳ ನಡುವೆ ದ್ವೇಷ ಬಿತ್ತುವ ಮತ್ತು ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ನಮಾಜ್ ಮಾಡಲಾಗಿದೆ ಎಂದು ಅಪರಿಚಿತ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಾಗಿತ್ತು.
ಲುಲು ಮಾಲ್‌ನಲ್ಲಿ ಶೇಕಡಾ 70 ರಷ್ಟು ಸಿಬ್ಬಂದಿ ಮುಸ್ಲಿಮರಾಗಿರುವುದರಿಂದ ಮಾಲ್ 'ಲವ್ ಜಿಹಾದ್' ಅನ್ನು ಅಭ್ಯಾಸ ಮಾಡುತ್ತಿದೆ ಎಂದು ಹಿಂದೂ ಪರ ಸಂಘಟನೆಗಳು ಆರೋಪಿಸಿದೆ.

ಯಾವುದೇ ಧರ್ಮದ ಪ್ರಾರ್ಥನೆಗೆ ಅವಕಾಶ ಇಲ್ಲ
ಜು. 10 ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಲುಲು ಮಾಲ್ ಅನ್ನು ಉದ್ಘಾಟಿಸಿದ್ದರು. ಬಳಿಕ, ಜು. 12 ರಂದು ಲುಲು ಮಾಲ್‌ನ ಆವರಣದಲ್ಲಿ ಕೆಲವರು ನಮಾಜ್ ನೀಡುತ್ತಿರುವ ವಿಡಿಯೊ ವೈರಲ್ ಆಗಿತ್ತು.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಖಿಲ ಭಾರತ ಹಿಂದೂ ಮಹಾಸಭಾ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಇದಾದ ನಂತರ, ಮಾಲ್ ಅಧಿಕಾರಿಗಳು ಶುಕ್ರವಾರ ಯಾವುದೇ ಧರ್ಮದ ಧಾರ್ಮಿಕ ಪ್ರಾರ್ಥನೆಗಳಿಗೆ ಅನುಮತಿ ನೀಡುವುದಿಲ್ಲ ಎಂದು ಮಾಲ್‌ನ ಹಲವು ಸ್ಥಳಗಳಲ್ಲಿ ಸೂಚನಾ ಫಲಕಗಳನ್ನು ಹಾಕಿದ್ದಾರೆ. ಬಳಿಕವೂ, ಮತ್ತೊಂದು ವಿಡಿಯೊ ಬಿಡುಗಡೆಯಾಗಿತ್ತು.

ದೇಶದ ಅತಿ ದೊಡ್ಡ ಮಾಲ್
ಲುಲು ಮಾಲ್ ದೇಶದ ಅತಿ ದೊಡ್ಡ ಮಾಲ್ ಆಗಿದ್ದು, ಇದನ್ನು ಸುಶಾಂತ್ ಗಾಲ್ಫ್ ಸಿಟಿಯಲ್ಲಿ ನಿರ್ಮಿಸಲಾಗಿದೆ. ಈ ಮಾಲ್ 2.2 ಮಿಲಿಯನ್ ಚದರ ಅಡಿಗಳ ವಿಸ್ತಾರ ಹೊಂದಿದ್ದು, ಅತ್ಯಂತ ವಿಶಾಲವಾಗಿದೆ. ಈ ಮಾಲ್‌ನಲ್ಲಿ 15 ರೆಸ್ಟೋರೆಂಟ್‌ಗಳು ಮತ್ತು ಕೆಫೆಗಳಿವೆ. 25 ಬ್ರಾಂಡ್ ಔಟ್ ಲೆಟ್‌ಗಳು, ಫುಡ್ ಕೋರ್ಟ್ ಕೂಡ ಇದೆ. ಒಂದೇ ಸಮಯದಲ್ಲಿ 1600 ಜನರು ಒಟ್ಟಿಗೆ ಕುಳಿತು ಆಹಾರ ಸೇವಿಸಬಹುದಾಗಿದೆ.












Click it and Unblock the Notifications