ಲಖಿಂಪುರ ಪ್ರಕರಣ: ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾಗೆ ಜಾಮೀನು
ಲಕ್ನೋ ಫೆಬ್ರವರಿ 10: ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರಿಗೆ ಜಾಮೀನು ಸಿಕ್ಕಿದೆ. ಆಶಿಶ್ ಮಿಶ್ರಾ ಅವರಿಗೆ ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠ ಜಾಮೀನು ನೀಡಿದೆ. ಆಶಿಶ್ ಮಿಶ್ರಾ ನಾಳೆ (ಶುಕ್ರವಾರ ಫೆಬ್ರವರಿ 11) ಜೈಲಿನಿಂದ ಹೊರಬರಬಹುದು ಎಂದು ಹೇಳಲಾಗುತ್ತಿದೆ. ಆಶಿಶ್ ಮಿಶ್ರಾ ಪರವಾಗಿ ಹೈಕೋರ್ಟ್ ಜಾಮೀನು ಅರ್ಜಿ ಸಲ್ಲಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಆದರೆ ಈ ಬಾರಿ ನ್ಯಾಯಾಲಯ ಆಶಿಶ್ ಮಿಶ್ರಾಗೆ ಜಾಮೀನು ಮಂಜೂರು ಮಾಡಿದೆ.
ಈ ಪ್ರಕರಣದಲ್ಲಿ ಅಜಯ್ ಮಿಶ್ರಾ ಅವರ ಸೋದರ ಮಾವ ವೀರೇಂದ್ರ ಶುಕ್ಲಾ ಅವರಿಗೆ ಮೊದಲು ಜಾಮೀನು ಸಿಕ್ಕಿತ್ತು. ವೀರೇಂದ್ರ ಶುಕ್ಲಾ ಅವರು ಜನವರಿ 10 ರಂದು ನ್ಯಾಯಾಲಯದಿಂದ ಜಾಮೀನು ಪಡೆದರು. ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಸಾಕ್ಷ್ಯ ನಾಶಪಡಿಸಿದ ಆರೋಪದ ಮೇಲೆ ವೀರೇಂದ್ರ ಶುಕ್ಲಾ ಅವರನ್ನು ಬಂಧಿಸಿತ್ತು. ವೀರೇಂದ್ರ ಶುಕ್ಲಾ ವಿರುದ್ಧ IPC ಸೆಕ್ಷನ್ 201 (ಅಪರಾಧದ ಸಾಕ್ಷ್ಯವನ್ನು ಕಳೆದುಕೊಂಡಿರುವುದು ಅಥವಾ ಅಪರಾಧವನ್ನು ಮಾಡಿರುವವರಿಗೆ ಮಾಹಿತಿ ನೀಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. 20,000 ರೂಪಾಯಿಗಳ ಶ್ಯೂರಿಟಿಯೊಂದಿಗೆ ವೀರೇಂದ್ರ ಶುಕ್ಲಾ ಅವರಿಗೆ ನ್ಯಾಯಾಲಯ ಜಾಮೀನು ನೀಡಿತ್ತು.

ಆಶಿಶ್ ಮಿಶ್ರಾ ಪ್ರಮುಖ ಆರೋಪಿ
ಲಖಿಂಪುರ ಖೇರಿ ಪ್ರಕರಣದಲ್ಲಿ ಎಸ್‌ಐಟಿ ಸುಮಾರು ಐದು ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಸಿತ್ತು. ಈ ಆರೋಪ ಪಟ್ಟಿಯಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಟೆನಿ ಅವರ ಪುತ್ರ ಆಶಿಶ್ ಮಿಶ್ರಾ ಅವರನ್ನು ಪ್ರಮುಖ ಆರೋಪಿ ಎಂದು ಕರೆಯಲಾಗಿದೆ. ಅಷ್ಟೇ ಅಲ್ಲ, ಅಜಯ್ ಮಿಶ್ರಾ ಅವರ ಮತ್ತೊಬ್ಬ ಆಪ್ತ ವೀರೇಂದ್ರ ಶುಕ್ಲಾ ಅವರನ್ನೂ ಆರೋಪಿಯನ್ನಾಗಿ ಮಾಡಲಾಗಿದೆ. ಲಖಿಂಪುರ ಹಿಂಸಾಚಾರದಲ್ಲಿ ಆಶಿಶ್ ಮಿಶ್ರಾ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸಿರುವುದನ್ನು ಎಸ್‌ಐಟಿ ತನ್ನ ತನಿಖೆಯಲ್ಲಿ ದೃಢಪಡಿಸಿತ್ತು. ಆಶಿಶ್ ಮಿಶ್ರಾ ಅವರ ರಿವಾಲ್ವರ್ ಮತ್ತು ರೈಫಲ್‌ನಿಂದಲೂ ಗುಂಡಿನ ದಾಳಿ ನಡೆದಿದೆ. ಚಾರ್ಜ್‌ಶೀಟ್‌ನಲ್ಲಿ, ಆಶಿಶ್ ಮಿಶ್ರಾ ಮತ್ತು ಅಂಕಿತ್ ದಾಸ್ ಅವರ ಪರವಾನಗಿ ಪಡೆದ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸಿದ ಬಗ್ಗೆ ಎಸ್‌ಐಟಿ ಮಾತನಾಡಿದೆ.

ನಾಲ್ವರು ರೈತರು ಹಿಂಸಾಚಾರದಲ್ಲಿ ಸಾವು
ಕಳೆದ ವರ್ಷ ಅಕ್ಟೋಬರ್ 3 ರಂದು, ಲಖಿಂಪುರ ಖೇರಿಯ ಟಿಕುನಿಯಾದಲ್ಲಿ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸಿ ಹಿಂದಿರುಗುತ್ತಿದ್ದರು. ಈ ವೇಳೆ ರೈತರ ಗುಂಪಿನ ಮೇಲೆ ವೇಗವಾಗಿ ಬಂದ ಎಸ್‌ಯುವಿ ಕಾರು ಡಿಕ್ಕಿ ಹೊಡೆದಿದೆ. ಈ ವೇಳೆ ನಾಲ್ವರು ರೈತರು ಸಾವನ್ನಪ್ಪಿದ್ದಾರೆ. ಘಟನೆಯ ನಂತರ ಹಿಂಸಾಚಾರ ಭುಗಿಲೆದ್ದಿದೆ. ಹಿಂಸಾಚಾರದಲ್ಲಿ ಇತರ ನಾಲ್ವರು ಸಹ ಸಾವನ್ನಪ್ಪಿದ್ದಾರೆ. ಹಿಂಸಾಚಾರದಲ್ಲಿ ಸ್ಥಳೀಯ ಪತ್ರಕರ್ತ ರಮಣ್ ಕಶ್ಯಪ್ ಕೂಡ ಕೊಲ್ಲಲ್ಪಟ್ಟಿದ್ದಾರೆ. ಯುಪಿ ಪೊಲೀಸರು ಮರುದಿನ ಆಶಿಶ್ ಮಿಶ್ರಾ ಮತ್ತು ಇತರ 12 ಮಂದಿಯನ್ನು ಕೊಲೆ ಆರೋಪಿಗಳೆಂದು ಹೆಸರಿಸಿ ಎಫ್‌ಐಆರ್ ದಾಖಲಿಸಿದ್ದರು. ಆದರೆ ಯಾರನ್ನೂ ಕೂಡ ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿರಲಿಲ್ಲ. ಆದರೆ ಸುಪ್ರೀಂ ಕೋರ್ಟ್ ಖಂಡನೆಯ ನಂತರ ಕೇಂದ್ರ ಸಚಿವರ ಮಗನನ್ನು ಒಂದು ವಾರದ ನಂತರ ಬಂಧಿಸಲಾಯಿತು.

ಬಿಜೆಪಿಯ ಮೇಲೆ ಪರಿಣಾಮ
ಉತ್ತರಪ್ರದೇಶದಲ್ಲಿ ಚುನಾವಣೆ ಇಂದು ಆರಂಭವಾಗಿದ್ದು ಈ ವೇಳೆ ಲಖಿಂಪುರ ಪ್ರಮುಖ ಆರೋಪಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿರುವುದು ಬಿಜೆಪಿಯ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂಬುದನ್ನ ಕಾದು ನೋಡಬೇಕಿದೆ.ಉತ್ತರ ಪ್ರದೇಶದ 11 ಜಿಲ್ಲೆಗಳ 58 ವಿಧಾನಸಭಾ ಸ್ಥಾನಗಳಿಗೆ ಗುರುವಾರ ಮತದಾನ ಆರಂಭವಾಗಿದೆ. ಬೆಳಗ್ಗೆ 7.00 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 6.00 ಗಂಟೆಯವರೆಗೆ ಮತದಾನ ನಡೆಯಲಿದೆ. ರೈತ ಸಂಘಟನೆಗಳು ಲಖಿಂಪುರಖೇರಿ ಪ್ರಕರಣದಲ್ಲಿ ಸಚಿವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ ಸಚಿವರ ಮೇಲೆ ಕ್ರಮ ಕೈಗೊಳ್ಳುವುದಿರಲಿ ಪ್ರಮುಖ ಆರೋಪಿಗೆ ಜಾಮೀನು ಸಿಕ್ಕಿರುವುದು ಉತ್ತರಪ್ರದೇಶ ಚುನಾವಣೆಯಲ್ಲಿ ಬಿಜೆಪಿಗೆ ರೈತ ಮತಗಳು ದೊಡ್ಡ ಸವಾಲಾಗಿ ಪರಿಣಮಿಸಿವೆ.

ರೈತ ಪ್ರತಿಭಟನೆ ಹಿಂಪಡೆದ ಬಳಿಕ ನಿರ್ಲಕ್ಷ್ಯ ತೋರಿದ ಸರ್ಕಾರ
ವಿವಾದಿತ ಮೂರು ಕೃಷಿ ಕಾನೂನುಗಳನ್ನು ಹಿಂಪಡೆದ ನಂತರ ಕೇಂದ್ರ ಸರ್ಕಾರ ಪ್ರತಿಭಟನೆಯಲ್ಲಿ ಸಾವನ್ನಪ್ಪಿದ ರೈತರಿಗೆ ಪರಿಹಾರ, ಬೆಳೆಗೆ ನಿಗಧಿತ ಬೆಲೆ ಬಗ್ಗೆ ನಿರ್ಲಕ್ಷ್ಯ ತೋರಿದೆ. ಕೊಟ್ಟ ಮಾತನ್ನು ಉಳಿಸಿಕೊಳ್ಳದೇ ಬಿಜೆಪಿ ಸರ್ಕಾರ ರೈತರಿಗೆ ಮೋಸ ಮಾಡಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಇದರೊಂದಿಗೆ ಲಖಿಂಪುರ ಖೇರಿ ಪ್ರಕರಣದಲ್ಲಿ ಕೇಂದ್ರ ಸಚಿವರ ಪುತ್ರ ಆಶಿಶ್ ಮಿಶ್ರಾ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿತ್ತು. ಆದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಲಿ, ಅಜಯ್ ಮಿಶ್ರಾ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನವನ್ನು ಬಿಜೆಪಿ ಮಾಡಿಲ್ಲ. ಹೀಗಿರುವಾಗ ಆಶಿಸ್ ಮಿಶ್ರಾಗೆ ಜಾಮೀನು ನೀಡಿರುವುದು ರೈತರ ಕೆಂಗಣ್ಣಿಗೆ ಗುರಿಯಾಗಿದೆ. ಇದರ ಪರಿಣಾಮ ಬಿಜೆಪಿ ಚುನಾವಣೆಯಲ್ಲಿ ಎದುರಿಸಬೇಕಾಗಬಹುದು. ಹೀಗಾಗಿ ಈ ಬೆಳವಣಿಗೆ ಭಾರೀ ನಿರೀಕ್ಷೆಯನ್ನು ಹುಟ್ಟು ಹಾಕಿದೆ.












Click it and Unblock the Notifications