ವೈರಲ್ ಸುದ್ದಿ: 2 ಬಾರಿ ಸೋತಿರುವ ಪತಿಗೆ ಈ ಬಾರಿಯಾದ್ರೂ ಮತ ನೀಡಿ!
ಲಕ್ನೋ, ಫೆಬ್ರವರಿ 3: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಸಮಾಜವಾದಿ ಪಕ್ಷದ ಅಭ್ಯರ್ಥಿ ಸುನೀಲ್ ಚೌಧರಿ, ಮತದಾರರ ಎದುರು ಕೈ ಮುಗಿದುಕೊಂಡು ಕಣ್ಣೀರು ಹಾಕಿದ ಘಟನೆ ನಡೆದಿದೆ.
ಈ ಬಾರಿ ಸೋಲನ್ನು ಸಹಿಸಿಕೊಳ್ಳುವ ಶಕ್ತಿ ನನ್ನಲ್ಲಿ ಇಲ್ಲ ಎಂದು ಹೇಳುತ್ತಿದ್ದಂತೆ ನೋಯ್ಡಾ ಕ್ಷೇತ್ರದ ಎಸ್‌ಪಿ ಅಭ್ಯರ್ಥಿ ಸುನೀಲ್ ಚೌಧರಿ ಕಣ್ಣೀರು ಹಾಕಿದರು. ಅಭ್ಯರ್ಥಿ ಹಾಗೂ ಅವರ ಪತ್ನಿ ಅಳುತ್ತಾ ಮತಯಾಚನೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ನೋಯ್ಡಾ ವಿಧಾನಸಭೆ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸುನೀಲ್ ಚೌಧರಿ ಈ ಹಿಂದಿನ ಎರಡು ಚುನಾವಣೆಗಳಲ್ಲಿ ಸೋಲು ಕಂಡಿದ್ದರು. ಮೂರನೇ ಬಾರಿಯೂ ಪಕ್ಷ ಸುನೀಲ್ ಚೌಧರಿಗೆ ಟಿಕೆಟ್ ನೀಡುವ ಮೂಲಕ ಮತ್ತೊಂದು ಅವಕಾಶವನ್ನು ಕಲ್ಪಿಸಿದ್ದು, ಸೋಲಿನ ಸುಳಿಯಿಂದ ಹೊರ ಬರುವುದಕ್ಕೆ ಇದು ಬಹುಶಃ ಕೊನೆಯ ಅವಕಾಶವಾಗಬಹುದು.

ಸೋಲನ್ನು ಸಹಿಸಿಕೊಳ್ಳುವ ಧೈರ್ಯವಿಲ್ಲ
"ಈ ಬಾರಿ ಸೋಲನ್ನು ಸಹಿಸಿಕೊಳ್ಳುವ ಧೈರ್ಯ ನನಗೆ ಇಲ್ಲ. ನಾನು ಈ ಬಾರಿ ಸೋಲುವುದಕ್ಕೆ ಇಷ್ಟಪಡುವುದಿಲ್ಲ. ಇದನ್ನು ಮನಪೂರ್ವಕವಾಗಿ ಹೇಳುತ್ತಿದ್ದೇನೆ, ನಿಮಗೆ ನನ್ನನ್ನು ಶೂಟ್ ಮಾಡಬೇಕು ಎನಿಸಿದರೆ ನೇರವಾಗಿ ಎದೆಗೆ ಶೂಟ್ ಮಾಡಿ, ಬೆನ್ನಿಗೆ ಅಲ್ಲ. ಆಗ ಕನಿಷ್ಠ ಪಕ್ಷ ನಮ್ಮದೇ ಜನರು ನನ್ನನ್ನು ಶೂಟ್ ಮಾಡಿದ್ದಾರೆ ಎಂದು ಧೈರ್ಯವಾಗಿ ಹೇಳಿಕೊಳ್ಳಲು ಸಾಧ್ಯವಾಗುತ್ತದೆ," ಎಂದು ಸಮಾಜವಾದಿ ಪಕ್ಷದ ಅಭ್ಯರ್ಥಿ ಸುನೀಲ್ ಚೌಧರಿ ಹೇಳಿರುವ ವಿಡಿಯೋ ವೈರಲ್ ಆಗುತ್ತಿದೆ.

ಕಣ್ಣೀರು ಹಾಕುತ್ತಲೇ ಮತಯಾಚನೆ ಮಾಡಿದ ಪತ್ನಿ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಮತ್ತೊಂದು ವಿಡಿಯೋದಲ್ಲಿ ಪತ್ನಿ ಪ್ರೀತಿ ಚೌಧರಿ ತಮ್ಮ ಪತಿ ಸುನೀಲ್ ಚೌಧರಿ ಪರವಾಗಿ ಮತಯಾಚನೆ ಮಾಡಿದರು. ಮನೆ ಮನೆ ಪ್ರಚಾರದ ಸಂದರ್ಭದಲ್ಲಿ ಕಣ್ಣೀರು ಹಾಕಿದ ಪ್ರೀತಿ ಚೌಧರಿ ತಮ್ಮ ಪತಿಗೆ ಮತ ನೀಡುವಂತೆ ಕೈ ಮುಗಿದು ಬೇಡಿಕೊಂಡರು. ಗ್ರಾಮದಲ್ಲಿ ಮಹಿಳೆಯರು ಕೊರಳಿಗೆ ಹಾರ ಹಾಕುತ್ತಿದ್ದ ಸಂದರ್ಭದಲ್ಲಿಯೂ ಪ್ರೀತಿ ಚೌಧರಿ ಕಣ್ಣೀರು ಹಾಕುತ್ತಿದ್ದರು.

2012ರಿಂದಲೂ ನೋಯ್ಡಾ ಮೇಲೆ ಕಣ್ಣಿಟ್ಟಿರುವ ಸುನೀಲ್ ಚೌಧರಿ
ಕಳೆದ 2012ರಲ್ಲಿ ಮೊದಲ ಬಾರಿಗೆ ಸುನೀಲ್ ಚೌಧರಿಗೆ ಸಮಾಜವಾದಿ ಪಕ್ಷದಿಂದ ಟಿಕೆಟ್ ನೀಡಲಾಯಿತು. ಅಂದಿನಿಂದ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಸುನೀಲ್ ಚೌಧರಿ ಎರಡು ಬಾರಿ ಚುನಾವಣೆಯಲ್ಲಿ ಮುಖಭಂಗ ಅನುಭವಿಸಿದ್ದಾರೆ. 2012ರಲ್ಲಿ ಸೋಲು ಕಂಡ ಸುನೀಲ್ ಚೌಧರಿಗೆ ಸಮಾಜವಾದಿ ಪಕ್ಷದಿಂದ ಎರಡನೇ ಅವಕಾಶ ನೀಡಲಾಯಿತು. 2017ರಲ್ಲೂ ಸುನೀಲ್ ಚೌಧರಿ ಸೋಲು ಕಂಡಿದ್ದರೂ, ಇದೀಗ 2022ರಲ್ಲಿ ಮತ್ತೊಮ್ಮೆ ಟಿಕೆಟ್ ನೀಡಲಾಗಿದೆ. ಈ ಬಾರಿ ಸುನೀಲ್ ಚೌಧರಿ ಎದುರು ಬಿಜೆಪಿ ಶಾಸಕ ಪಂಕಜ್ ಸಿಂಗ್ ಪ್ರಮುಖ ಪ್ರತಿಸ್ಪರ್ಧಿ ಆಗಿದ್ದಾರೆ.

ಉತ್ತರ ಪ್ರದೇಶದಲ್ಲಿ ಏಳು ಹಂತಗಳ ವಿಧಾನಸಭೆ ಚುನಾವಣೆ
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, ಫೆಬ್ರವರಿ 14, ಫೆಬ್ರವರಿ 20, ಫೆಬ್ರವರಿ 23, ಫೆಬ್ರವರಿ 27, ಮಾರ್ಚ್ 3 ಮತ್ತು ಮಾರ್ಚ್ 7ರಂದು ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಅಂತಿಮವಾಗಿ ಮಾರ್ಚ್ 10ರಂದು ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ, ಕಾಂಗ್ರೆಸ್ ಮತ್ತು ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷದ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ.
ಈ ಹಿಂದೆ 2017ರಲ್ಲಿ ಉತ್ತರ ಪ್ರದೇಶದಲ್ಲಿ 403 ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಒಟ್ಟು 403 ಕ್ಷೇತ್ರಗಳ ಪೈಕಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಹುಜನ ಸಮಾಜವಾದಿ ಪಕ್ಷವು 19 ಕ್ಷೇತ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿತ್ತು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದ್ದು, ಕೇವಲ ಏಳು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.












Click it and Unblock the Notifications