ಗಂಡು ಮಗು ಹೆರಲಿಲ್ಲವೆಂದು ಹೆಂಡತಿಯನ್ನು ತುಂಡು-ತುಂಡಾಗಿ ಕತ್ತರಿಸಿ ಮಿಕ್ಸಿಗೆ ಹಾಕಿದ
ಲಖನೌ, ಜನವರಿ 16: ಗಂಡು ಮಗುವನ್ನು ಹೆರಲಿಲ್ಲವೆಂದು ಹೆಂಡತಿಯನ್ನು ಮಗಳ ಎದುರೇ ತುಂಡು-ತುಂಡಾಗಿ ಕಡಿದು, ಹಿಟ್ಟು ರುಬ್ಬುವ ಯಂತ್ರಕ್ಕೆ ಹಾಕಿ ರುಬ್ಬಿ, ಉಳಿದ ದೇಹದ ಭಾಗವನ್ನು ಸುಟ್ಟಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ರಾಯ್ ಬರೇಲಿ ಬಳಿ ಘಟನೆ ನಡೆದಿದ್ದು, ರವೀಂದ್ರ ಕುಮಾರ್ (35) ಎಂಬಾತ ತನ್ನ 27 ವರ್ಷದ ಗರ್ಭಿಣಿ ಹೆಂಡತಿ ಊರ್ಮಿಳಾಳನ್ನು ಜನವರಿ 4 ರಂದು ಮನೆಯಲ್ಲಿಯೇ ಕೊಂದು ತುಂಡು-ತುಂಡು ಮಾಡಿ ಕೆಲವು ಭಾಗವನ್ನು ಮಿಕ್ಸಿಗೆ ಹಾಕಿ ನಂತರ ಉಳಿದ ದೇಹದ ಭಾಗವನ್ನು ರಾಯ್ ಬರೇಲಿ ನಗರದ ಹೊರವಲಯದಲ್ಲಿ ಬಿಸಾಡಿದ್ದಾನೆ. ಈ ಎಲ್ಲಾ ರಾಕ್ಷಸೀ ಕೃತ್ಯವನ್ನು ತನ್ನ ಮಗಳ ಎದುರೇ ಆತ ಮಾಡಿದ್ದಾನೆ.
ಜನವರಿ 4 ರಂದೇ ಆತ ಕೊಲೆ ಮಾಡಿದ್ದ. ಆತನ ಮಗಳು ಕಳೆದ ಮಂಗಳವಾರ ತನ್ನ ಅಜ್ಜಿಯ ಮನೆಗೆ ಹೋಗಿ ನಡೆದ ಘಟನೆಯನ್ನೆಲ್ಲಾ ಹೇಳಿದ ಮೇಲೆ ಪ್ರಕರಣ ಬೆಳಕಿಗೆ ಬಂದಿದ್ದು ಘಟನೆ ನಂತರ ತಲೆಮರೆಸಿಕೊಂಡಿದ್ದ ಪಾಪಿ ಪತಿ ರವೀಂದ್ರನನ್ನು ಪೊಲೀಸರು ಬಂಧಿಸಿದ್ದಾರೆ.

ರವೀಂದ್ರನಿಗೆ 2011 ರಲ್ಲಿ ಊರ್ಮಿಳಾ ಜೊತೆ ವಿವಾಹವಾಗಿ 11 ಮತ್ತು 8 ವರ್ಷ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳಿದ್ದರು. ಈಗ ಮತ್ತೆ ಹೆಂಡತಿ ಗರ್ಭಿಣಿ ಆಗಿದ್ದರು. ಆದರೆ ಈ ಭಾರಿಯೂ ಹೆಣ್ಣು ಮಗುವೇ ಆಗುತ್ತದೆಂದುಕೊಂಡು ಸಿಟ್ಟಿನಲ್ಲಿ ಹೆಂಡತಿಯನ್ನು ಕೊಂದಿದ್ದಾನೆ.
ಹೆಂಡತಿಯನ್ನು ಕೊಂದ ನಂತರ ಪೊಲೀಸ್ ಕಂಟ್ರೋಲ್ ರೂಂ ಗೆ ಕರೆ ಮಾಡಿ ಹೆಂಡತಿ ಕಾಣೆ ಆಗಿದ್ದಾಳೆ ಎಂದು ದೂರು ಸಹ ನೀಡಿದ್ದ ರವೀಂದ್ರ. ಊರ್ಮಿಳಾ ಸಹೋದರಿ ಸಹ ಜನವರಿ 10 ರಂದು ದೀಹ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ರವೀಂದ್ರನ ದೊಡ್ಡ ಮಗಳು ಹೇಳಿರುವಂತೆ ಊರ್ಮಿಳೆಯ ಕೊಲೆಯಲ್ಲಿ ರವೀಂದ್ರನ ತಂದೆ ಕರಂ ಚಂದರ್, ಸಹೋದರರಾದ ಸಂಜೀವ್, ಬ್ರಿಜೆಶ್ ಸಹ ಜೊತೆಯಾಗಿದ್ದಾರೆ.
ಪೊಲೀಸ್ ವಿಚಾರಣೆ ವೇಳೆ ತಪ್ಪು ಒಪ್ಪಿಕೊಂಡಿರುವ ರವಿಂದ್ರ ತಾನು ಹರಿತವಾದ ಆಯುಧದಿಂದ ಹೆಂಡತಿಯನ್ನು ಕೊಂದು ತುಂಡಾಗಿ ಕತ್ತರಿಸಿ ಸಹೋದರನ ಫ್ಲೋರ್ ಮಿಲ್‌ನಲ್ಲಿ ದೇಹದ ಭಾಗಗಳನ್ನು ರುಬ್ಬಿ, ಉಳಿದ ದೇಹದ ಭಾಗಗಳನ್ನು ಸುಟ್ಟು ಎಲ್ಲವನ್ನೂ ರಾಯ್ ಬರೇಲಿಯಿಂದ ನಾಲ್ಕು ಕಿ.ಮೀ ಹೊರಕ್ಕೆ ಸಾಗಿಸಿ ಕಂದಕಕ್ಕೆ ಬಿಸಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.












Click it and Unblock the Notifications