ತಾಜ್ ಮಹಲ್ ನಿಂದ ಪ್ರೀತಿ, ಮಮತೆ ಬಗ್ಗೆ ಮೋದಿ ಕಲಿಯಲಿ, ಅಖಿಲೇಶ್ ಟಾಂಗ್
ಆಗ್ರಾ (ಉತ್ತರಪ್ರದೇಶ), ಜನವರಿ 9: ಉತ್ತರಪ್ರದೇಶದ ಆಗ್ರಾಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುವ ಕೆಲ ಗಂಟೆಗಳ ಮುಂಚೆ, "ತಾಜ್ ಮಹಲ್ ನಿಂದ ಪ್ರೀತಿ ಹಾಗೂ ಮಮತೆ ಬಗ್ಗೆ ಸ್ವಲ್ಪವಾದರೂ ಪ್ರಧಾನಿ ನರೇಂದ್ರ ಮೋದಿ ಕಲಿಯಬಹುದು" ಎಂದು ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಸಮಾಜವಾದಿ ಪಕ್ಷದ ಮುಖ್ಯಸ್ಥರೂ ಆಗಿರುವ ಅವರು, ಆಗ್ರಾದ ಬಳಿ ಪ್ರಧಾನಿಗಳು ಆಲೂಗಡ್ಡೆ, ಕಬ್ಬು ಹಾಗೂ ಭತ್ತದ ಬೆಳೆಗಾರರ ಸಂಕಷ್ಟವನ್ನು ನೆನಪಿಸಿಕೊಳ್ಳಲಿ. ಈ ಹಿಂದೆಂದೂ ಉತ್ತರಪ್ರದೇಶಕ್ಕೆ ದೆಹಲಿ ಇಷ್ಟು ದೂರ ಇರಲಿಲ್ಲ. ಅದೆಷ್ಟು ದೂರ ಆಗಿದೆಯೆಂದರೆ, ರಾಜ್ಯದ ರೈತರ ಹಾಗೂ ವ್ಯಾಪಾರದವರ ದುಃಖ ಕೂಡ ಆಡಳಿತಗಾರರಿಗೆ ಕಾಣುತ್ತಿಲ್ಲ ಎಂದಿದ್ದಾರೆ.
ಯುವ ಜನತೆಗೆ ಕೋಟ್ಯಂತರ ಮಂದಿಗೆ ಉದ್ಯೋಗ ನೀಡುವುದಾಗಿ ಬಿಜೆಪಿ ನೇತೃತ್ವದ ಸರಕಾರ ಭರವಸೆ ನೀಡಿತ್ತು. ಆದರೆ ಈಚಿನ ಘಟನೆ ಆ ಭರವಸೆಯನ್ನು ಸುಳ್ಳು ಎಂದು ಸಾಬೀತು ಮಾಡಿ. ರೈಲ್ವೆ ಇಲಾಖೆಯ ಅರವತ್ಮೂರು ಸಾವಿರ ಹುದ್ದೆಗಳಿಗೆ ಎರಡು ಕೋಟಿ ಮಂದಿ ಅರ್ಜಿ ಹಾಕಿದ್ದರು. ಅದೇ ಯುವ ಜನತೆ, ಯಾರಿಗೆ ಉದ್ಯೋಗದ ಭರವಸೆ ನೀಡಿದ್ದರೋ ಅವರೇ ಈ ಸರಕಾರವನ್ನು ಕಿತ್ತೊಗೆಯುತ್ತಾರೆ ಎಂದು ಅಖಿಲೇಶ್ ಹೇಳಿದ್ದಾರೆ.

ಘಟಬಂಧನ್ ನಲ್ಲಿ ನಾವು (ಬಿಎಸ್ ಪಿ-ಎಸ್ ಪಿ) ಎಷ್ಟು ಸೀಟುಗಳನ್ನು ಹಂಚಿಕೊಳ್ಳುತ್ತಿದ್ದೇವೆ ಎನ್ನುವುದನ್ನು ಸಿಬಿಐಗೆ ಹೇಳಬೇಕಿದೆ ಎಂದು ತಮ್ಮ ಮೇಲಿನ ಸಿಬಿಐ ಪ್ರಕರಣದ ವಿಚಾರವಾಗಿ ಅಖಿಲೇಶ್ ವಿಚಾರವಾಗಿ ಹೇಳಿದ್ದಾರೆ. ಕಳೆದ ವಾರ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಕರೆ ಮಾಡಿ, ಇಂಥ ಗಿಮಿಕ್ ಗಳಿಗೆ ಹೆದರಬೇಡಿ ಎಂದು ಅಖಿಲೇಶ್ ಗೆ ಹೇಳಿದ್ದಾರೆ.












Click it and Unblock the Notifications