'ಹಿಂದೂಗಳು 4ಮಕ್ಕಳನ್ನು ಹೆತ್ತು ಇಬ್ಬರನ್ನು RSSಗೆ ಕೊಡಬೇಕು'
ಲಕ್ನೋ, ಏಪ್ರಿಲ್ 19: "ಪ್ರತೀ ಹಿಂದೂ ಪೋಷಕರು ನಾಲ್ಕು ಮಕ್ಕಳನ್ನು ಹೆತ್ತು, ಅದರಲ್ಲಿ ಎರಡು ಮಕ್ಕಳನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನೀಡುವ ಸಂಕಲ್ಪವನ್ನು ಮಾಡಬೇಕು" ಎಂದು ಆಧ್ಯಾತ್ಮಕಿ ಸಾಧ್ವಿ ಋತಂಭರಾ ಕರೆ ನೀಡಿದ್ದಾರೆ.
ಉತ್ತರ ಪ್ರದೇಶದ ಕಾನ್ಪುರದಲ್ಲಿ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ರಾಮೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಋತಂಭರಾ, "ಹಿಂದೂ ಪೋಷಕರು ಇಬ್ಬರು ಮಕ್ಕಳನ್ನು RSS ಅಥವಾ ವಿಎಚ್ಪಿಗೆ ನೀಡಿದರೆ ರಾಷ್ಟ್ರತ್ಯಾಗಕ್ಕೆ ಕೊಡುಗೆ ನೀಡಿದಂತಾಗುತ್ತದೆ"ಎಂದು ಇವರು ಅಭಿಪ್ರಾಯ ಪಟ್ಟರು.
"ಈ ಸುಂದರ ಸಮಾರಂಭದಲ್ಲಿ ನಾನು ಹೇಳಲು ಬಯಸುವುದೇನಂದರೆ, ನಾವೆಲ್ಲಾ ರಾಮನ ಭಕ್ತನಾಗಿರುವುದು ನಮ್ಮ ಸೌಭಾಗ್ಯ. ರಾಮನ ಭಕ್ತನಾಗಲು, ರಾಮತ್ವವನ್ನು ಮೊದಲು ಅಳವಡಿಸಿಕೊಳ್ಳಬೇಕು. ಏಕೆಂದರೆ, ರಾಮನು ಅಜೇಯ ಪುರುಷತ್ವದ ಸಂಕೇತವಾಗಿದ್ದಾನೆ. ರಾಜಕೀಯ ಪಕ್ಷಗಳು ಹಿಂದೂಗಳನ್ನು ವಿಭಜಿಸುತ್ತವೆ, ಆದರೆ ಶ್ರೀರಾಮನ ನಡವಳಿಕೆಯು ಇಡೀ ಸಮಾಜವನ್ನು ಒಂದುಗೂಡಿಸುತ್ತದೆ" ಎಂದು ಸಾಧ್ವಿ ಋತಂಭರಾ ಹೇಳಿದ್ದಾರೆ.

ಹನುಮ ಜಯಂತಿಯ ಮೆರವಣಿಗೆಯ ಮೇಲೆ ಕಲ್ಲು ತೂರಾಟದ ಬಗ್ಗೆ ಮಾತನಾಡುತ್ತಾ, "ದೆಹಲಿಯಲ್ಲಿ ಧಾರ್ಮಿಕ ಮೆರವಣಿಗೆಯ ಮೇಲೆ ದಾಳಿ ಮಾಡುವವರು ಭಾರತದ ಪ್ರಗತಿಯ ಬಗ್ಗೆ ಅಸೂಯೆ ಪಡುವವರು. ಇಂತಹ ಘಟನೆಗಳಿಂದ ಹಿಂದೂಗಳ ಮನಸ್ಸು ಪ್ರಕ್ಷುಬ್ಧವಾಗುತ್ತದೆ, ಇದು ಸರಿಯಲ್ಲ ಎನ್ನುವುದನ್ನು ಮುಸ್ಲಿಮರು ಅರ್ಥಮಾಡಿಕೊಳ್ಳಬೇಕು "ಎಂದು ಕಾನ್ಪುರದ ನಿರಾಲಾನಗರ ರೈಲ್ವೆ ಮೈದಾನದಲ್ಲಿ ನಡೆದ ರಾಮೋತ್ಸವದಲ್ಲಿ ಭಾಗವಹಿಸಿ ಋತಂಭರಾ ಹೇಳಿದ್ದಾರೆ.
ಎರಡು ದಿನಗಳ ಹಿಂದೆ, ವಿವಾದಿತ ಅರ್ಚಕ ಯತಿ ನರಸಿಂಹಾನಂದರ ಸಂಘಟನೆಯು ಭಾರತವು ಇಸ್ಲಾಮಿಕ್ ರಾಷ್ಟ್ರವಾಗುವುದನ್ನು ತಪ್ಪಿಸಲು ಹೆಚ್ಚಿನ ಮಕ್ಕಳಿಗೆ ಜನ್ಮ ನೀಡುವಂತೆ ಹಿಂದೂಗಳಿಗೆ ಕೇಳಿಕೊಂಡಿತ್ತು. ಅದೇ ರೀತಿ, ಹರಿದ್ವಾರ ದ್ವೇಷ ಭಾಷಣ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗೆ ಬಂದಿರುವ ನರಸಿಂಹಾನಂದರು, ಮುಂದಿನ ದಶಕಗಳಲ್ಲಿ ದೇಶವು ಹಿಂದೂ ಅಲ್ಪಸಂಖ್ಯಾತ ಆಗುವುದನ್ನು ತಡೆಯಲು ಹಿಂದೂ ಪೋಷಕರು ಹೆಚ್ಚಿನ ಮಕ್ಕಳಿಗೆ ಜನ್ಮ ನೀಡಬೇಕೆಂದು ಒತ್ತಾಯಿಸಿದ್ದರು.
ಅಖಿಲ ಭಾರತೀಯ ಸಂತ ಪರಿಷತ್ತಿನ ಹಿಮಾಚಲ ಪ್ರದೇಶದ ಉಸ್ತುವಾರಿ ಯತಿ ಸತ್ಯದೇವಾನಂದ ಸರಸ್ವತಿ ಮಾತನಾಡುತ್ತಾ, "ಹಿಂದೂಗಳು ಬಹುಸಂಖ್ಯಾತರಾಗಿರುವುದರಿಂದ ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಆದರೆ ದೇಶದಲ್ಲಿ ಮುಸ್ಲಿಮರ ಸಂಖ್ಯೆಯೂ ವೃದ್ದಿಸುತ್ತಿದೆ ಎನ್ನುವುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು" ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.












Click it and Unblock the Notifications