ರೈತರ ಪ್ರತಿಭಟನೆಗೆ ಬೆಂಬಲ: ಅಖಿಲೇಶ್ ಯಾದವ್ ಬಂಧನ
ಲಕ್ನೋ, ಡಿಸೆಂಬರ್ 7: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಧರಣಿಗೆ ಕುಳಿತಿದ್ದ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರನ್ನು ಬಂಧಿಸಿ ಪೊಲೀಸ್ ವಾಹನದಲ್ಲಿ ಕರೆದೊಯ್ಯಲಾಗಿದೆ.
ಅಖಿಲೇಶ್ ಯಾದವ್ ಅವರು ಸೋಮವಾರ ಕನ್ನೌಜ್‌ಗೆ ಕಿಸಾನ್ ಯಾತ್ರಾ ಆಯೋಜಿಸಿದ್ದರು. ಅದಕ್ಕೂ ಮುನ್ನ ಸಮಾಜವಾದಿ ಪಕ್ಷದ ರಸ್ತೆಯೊಂದನ್ನು ಪೊಲೀಸರು ಬಂದ್ ಮಾಡಿದ್ದರು. ಹೀಗಾಗಿ ಲಕ್ನೋದ ತಮ್ಮ ನಿವಾಸದ ಮುಂದೆ ಕುಳಿತು ಅವರು ಧರಣಿ ನಡೆಸುತ್ತಿದ್ದರು. ಆದರೆ ಪೊಲೀಸರು ಅದಕ್ಕೆ ಅವಕಾಶ ನೀಡದೆ ಅವರನ್ನು ಬಂಧಿಸಿದ್ದಾರೆ.
ಕೆಲವು ಬೆಂಬಲಿಗರ ಜತೆಗೆ ಲಕ್ನೋದ ವಿಕ್ರಮಾದಿತ್ಯ ಮಾರ್ಗದಲ್ಲಿನ ತಮ್ಮ ನಿವಾಸದ ಸಮೀಪದಲ್ಲಿನ ಪೊಲೀಸ್ ಬ್ಯಾರಿಕೇಡ್‌ಗಳನ್ನು ಕಿತ್ತುಹಾಕಿದ ಅಖಿಲೇಶ್, ಕೃಷಿ ಕಾಯ್ದೆಗಳ ವಿರುದ್ಧದ ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಧರಣಿ ನಡೆಸಿದರು. 'ಹೊಸ ಕೃಷಿ ಕಾಯ್ದೆಗಳು ರೈತರಿಗೆ ಸಹಾಯ ಮಾಡುವ ಉದ್ದೇಶ ಹೊಂದಿದ್ದರೆ ಈಗ ಈ ಯುದ್ಧ ಮಾರ್ಗವೇಕೆ? ಸರ್ಕಾರ ಏಕಿಷ್ಟು ಹಠಮಾರಿಯಾಗಿದೆ? ಕೃಷಿಕರಿಗೆ ಹೊಸ ಕಾಯ್ದೆಗಳು ಬೇಕಿಲ್ಲವೆಂದಾದರೆ ಸರ್ಕಾರ ಅವುಗಳನ್ನು ವಾಪಸ್ ಪಡೆದುಕೊಳ್ಳಬೇಕು' ಎಂದು ಅವರು ಹೇಳಿದರು.

ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೆ ತಂದ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಬೇಡಿಕೆ ಇರಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಪರ ಧ್ವನಿ ಎತ್ತಿರುವ ಅಖಿಲೇಶ್, ಅವರಿಗೆ ಸಹಮತ ವ್ಯಕ್ತಪಡಿಸಿ 13 ಕಿ.ಮೀ. ಉದ್ದದ ಕಿಸಾನ್ ಯಾತ್ರೆಯನ್ನು ಆಯೋಜಿಸಿದ್ದರು.












Click it and Unblock the Notifications