ಉತ್ತರಪ್ರದೇಶ ಚುನಾವಣೆ: 114 ಯೋಜನೆಗಳನ್ನು ಉದ್ಘಾಟಿಸಿದ ಸಿಎಂ
ಗೋರಖ್‌ಪುರ ಡಿಸೆಂಬರ್ 30: ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ಸರ್ಕಾರ ಹಲವಾರು ಯೋಜನೆಗಳನ್ನು ಕಾರ್ಯ ರೂಪಕ್ಕೆ ತರಲು ಮುಂದಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗುರುವಾರ ಗೋರಖ್‌ಪುರದಲ್ಲಿ 1,304 ಕೋಟಿ ವೆಚ್ಚದ 114 ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಿಎಂ ಯೋಗಿ, 2022ರ ಆಗಮನಕ್ಕೂ ಮುನ್ನ ಗೋರಖ್‌ಪುರಕ್ಕೆ ನಿನ್ನೆ ಮತ್ತು ಇಂದು ಸೇರಿದಂತೆ ಸುಮಾರು 1,850 ಕೋಟಿ ರೂ.ಗಳ ಯೋಜನೆಗಳನ್ನು ಉಡುಗೊರೆಯಾಗಿ ನೀಡಲಾಗಿದೆ. ಈ ವೇಳೆ ತಮ್ಮ ಸರ್ಕಾರದ ಸಾಧನೆಗಳನ್ನು ಹೇಳಿಕೊಳ್ಳುವ ಭರದಲ್ಲಿ ಹಿಂದಿನ ಸರ್ಕಾರದ ಕಾರ್ಯವೈಖರಿ ಬಗ್ಗೆ ಯೋಗಿ ಹರಿಹಾಯ್ದರು.
ಹಿಂದಿನ ಸರ್ಕಾರ ಉತ್ತರಪ್ರದೇಶದಲ್ಲಿ ಯಾವುದೇ ಅಭಿವೃದ್ಧಿಗೆ ಅವಕಾಶ ನೀಡಿಲ್ಲ. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ತಾರತಮ್ಯವಿಲ್ಲದೇ ಅಭಿವೃದ್ಧಿಗೆ ಅವಕಾಶ ನೀಡಿದೆ ಎಂದು ಮುಖ್ಯಮಂತ್ರಿ ಯೋಗಿ ಹೇಳಿದ್ದಾರೆ. ಇದರಿಂದ ಪ್ರತಿಯೊಬ್ಬ ಬಡವರಿಗೂ ಜನಕಲ್ಯಾಣ ಯೋಜನೆಗಳ ಲಾಭ ದೊರೆಯುತ್ತಿದೆ. ಇಂದು ಬಡವರಿಗೆ ಉಚಿತ ಪಡಿತರ, ಉಚಿತ ಲಸಿಕೆ, ಉಚಿತ ಚಿಕಿತ್ಸೆ ದೊರೆಯುತ್ತಿದೆ. ಇದು ಬಿಜೆಪಿ ಸರ್ಕಾರ ಜನರಿಗಾಗಿ ಜನರ ಕಲ್ಯಾಣಕ್ಕಾಗಿ ಕೈಗೊಂಡ ಕ್ರಮಗಳು ಎಂದಿದ್ದಾರೆ.
ಕಾಂಗ್ರೆಸ್ ಸರ್ಕಾರವನ್ನು ಗುರಿಯಾಗಿಸಿಕೊಂಡು ಮಾತನಾಡಿದ ಅವರು 2017ರ ಮೊದಲು ರಾಜ್ಯದಲ್ಲಿ ಎರಡು-ಮೂರನೇ ದಿನಕ್ಕೆ ಗಲಭೆ ನಡೆಯುತ್ತಿತ್ತು ಎಂದು ಕಿಡಿಕಾರಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಒಂದು ಕಡೆ ಇರಲಿ 2017ಕ್ಕಿಂತ ಮೊದಲು ಪ್ರತಿ ಎರಡು ಅಥವಾ ಮೂರನೇ ದಿನಕ್ಕೆ ಇದೇ ರಾಜ್ಯದಲ್ಲಿ ಗಲಭೆ ನಡೆಯುತ್ತಿತ್ತು ಎಂದು ಮುಖ್ಯಮಂತ್ರಿ ಯೋಗಿ ಹೇಳಿದ್ದಾರೆ. ಈ ಕಾರಣದಿಂದಾಗಿ, ಯಾವುದೇ ಹೂಡಿಕೆದಾರರು ರಾಜ್ಯದಲ್ಲಿ ಹೂಡಿಕೆ ಮಾಡುವ ಮೊದಲು ಭಯಪಡುತ್ತಿದ್ದರು. ಅದೇ ರಾಜಧಾನಿ ಸಾಯುತ್ತದೆ ಎಂದು ಅವರು ಹೆದರುತ್ತಿದ್ದರು. ಆದರೀಗ ಅದೇ ರಾಜ್ಯ ಅಭಿವೃದ್ಧಿಯತ್ತ ಮುಖ ಮಾಡುತ್ತಿದೆ. ಅಭಿವೃದ್ಧಿ ಕಾರ್ಯಗಳು ನಡೆಯುತ್ತಲಿದೆ. ಜನ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದಾರೆ ಎಂದು ಯೋಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿಯೊಂದಿಗೆ ತಮ್ಮ ಪಕ್ಷದ ಕಾರ್ಯವೈಖರಿಯನ್ನು ಹೊಗಳಿದ್ದಾರೆ.

ಇದೇ ಡಿಸೆಂಬರ್ 27ರಂದು ಕಾಸ್ ಗಂಜ್ (ಉತ್ತರ ಪ್ರದೇಶ)ನಲ್ಲಿ ಬಿಜೆಪಿಯ ಜನ ವಿಶ್ವಾಸ ಯಾತ್ರೆಯ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಯೋಗಿ ಆದಿತ್ಯನಾಥ್ ಆಡಳಿತದಲ್ಲಿ ಗೂಂಡಾಗಳು ಉತ್ತರ ಪ್ರದೇಶದಿಂದ ಓಡಿ ಹೋಗಿದ್ದಾರೆ ಎಂದು ಹೇಳಿದ್ದರು. ಮೊದಲು ಪ್ರತೀ ಜಿಲ್ಲೆಗೊಂದು ಬಾಹುಬಲಿ ಇರ್ತಾ ಇದ್ದ. ಈಗ ಪ್ರತೀ ಜಿಲ್ಲೆಗೊಂದು ಹೊಸ ವಸ್ತು ಇದೆ. ಮೊದಲು ಜಿಲ್ಲೆಗೊಂದು ಮಿನಿ ಸಿಎಂ ಇರ್ತಾ ಇದ್ದ. ಇದೀಗ ಪ್ರತೀ ಜಿಲ್ಲೆಗೊಂದು ಕಾರ್ಖಾನೆ ಇದೆ. ಈ ಹಿಂದೆ ಪ್ರತಿಯೊಂದು ಜಿಲ್ಲೆಯಲ್ಲಿ ಭ್ರಷ್ಟಾಚಾರ ನಡೀತಾ ಇತ್ತು. ಇಂದು ಪ್ರತಿಯೊಂದು ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಇದೆ ಎಂದು ಹೇಳಿದ್ದರು.
ಜೊತೆಗೆ ಪ್ರಧಾನಿ ಮೋದಿ ಕೂಡ ಯೋಗಿ ಆದಿತ್ಯನಾಥ್ ಸರ್ಕಾರವನ್ನು ಹೊಗಳಿದ್ದಾರೆ. ಕನೌಜ್‌ನಲ್ಲಿ ಉದ್ಯಮಿ ಮನೆ ಮೇಲೆ ತೆರಿಗೆ ಇಲಾಖೆ ದಾಳಿ ವೇಳೆ ಕೋಟ್ಯಂತರ ರೂ. ಹಣ ಪತ್ತೆಯಾಗಿದೆ. ಉದ್ಯಮಿ ಪಿಯೂಷ್ ಜೈನ್ ಬಳಿ ಇದ್ದ ಹಣಕ್ಕು ಅಖಿಲೇಶ್ ಯಾದವ್‌ಗೂ ಸಂಬಂಧ ಕಲ್ಪಿಸಲಾಗಿದೆ. ಆದರೆ ಅಖಿಲೇಶ್ ಈ ಆರೋಪವನ್ನು ತಳ್ಳಿ ಹಾಕಿ ಬಿಜೆಪಿ ತಪ್ಪಾಗಿ ತಮ್ಮ ಪಕ್ಷದವರ ಮೇಲೆ ದಾಳಿ ಮಾಡಿದೆ ಎಂದು ಟೀಕಿಸಿದ್ದಾರೆ. ಒಟ್ಟಾರೆಯಾಗಿ ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಆರಂಭಕ್ಕೂ ಮುನ್ನ ರಾಜಕೀಯ ಕೆಸರೆರೆಚಾಟಗಳು ಜೋರಾಗಿದ್ದು, ಹಲವಾರು ಯೋಜನೆಗಳು ಜಾರಿಗೆ ತರಲಾಗುತ್ತಿದೆ. ಜನ ಯಾವ ಪಕ್ಷದ ಕೈ ಹಿಡಿಯುತ್ತಾರೆಂದು ಕಾದು ನೋಡಬೇಕಿದೆ.












Click it and Unblock the Notifications