'ಮತಯಂತ್ರಗಳ ದುರ್ಬಳಕೆ ಮಾಡದಿದ್ದರೆ ಬಿಜೆಪಿಗೆ ಸೋಲು ಕಟ್ಟಿಟ್ಟ ಬುತ್ತಿ'
ಲಕ್ನೋ, ಜನವರಿ 09: ಸರ್ಕಾರಿ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳದೆ ಅಥವಾ ಮತಯಂತ್ರವನ್ನು ದುರ್ಬಳಕೆ ಮಾಡದೆ ಚುನಾವಣೆಗೆ ಸ್ಪರ್ಧೆ ಮಾಡಿದರೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸೋಲಲಿದೆ ಎಂದು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಭಾನುವಾರ ಹೇಳಿದ್ದಾರೆ.
Recommended Video
ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಾಯಾವತಿ, "ಸರ್ಕಾರಿ ಯಂತ್ರದ ವಿಚಾರದಲ್ಲಿ ಚುನಾವಣಾ ಆಯೋಗಕ್ಕೆ ಭಯ ಇರಬೇಕಾದುದ್ದು ಅಗತ್ಯ. ಚುನಾವಣಾ ಆಯೋಗವು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯುತ್ತಿದೆಯೇ ಎಂದು ಪರಿಶೀಲನೆ ಮಾಡಬೇಕು. ಬಿಜೆಪಿ ಪಕ್ಷವು ಸರ್ಕಾರಿ ಯಂತ್ರಗಳನ್ನು ಅಥವಾ ಮತಯಂತ್ರವನ್ನು ದುರ್ಬಳಕೆ ಮಾಡದೆ ಇದ್ದರೆ ಈ ಚುನಾವಣೆಯಲ್ಲಿ ಬಿಜೆಪಿಗೆ ಸೋಲು ಕಟ್ಟಿಟ್ಟ ಬುತ್ತಿ," ಎಂದು ತಿಳಿಸಿದ್ದಾರೆ.
ಈ ನಡುವೆ ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಭಾನುವಾರ ಲಕ್ನೋದಲ್ಲಿ ಪಕ್ಷದ ಅಧಿಕಾರಿಗಳ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದಾರೆ. ಈ ಚುನಾವಣೆಯ ಬಗ್ಗೆ ಮಾತನಾಡಿದ ಮಾಯಾವತಿ, "ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಶಾಂತಿಯುತವಾಗಿ ನಡೆಯಬೇಕು. ಪೊಲೀಸರು ಯಾವುದೇ ಪಕ್ಷ ಬೇಧವಿಲ್ಲದೆ ಈ ಚುನಾವಣೆ ಸಂದರ್ಭದಲ್ಲಿ ಕಾರ್ಯ ನಿರ್ವಹಣೆ ಮಾಡಬೇಕು. ಉತ್ತರ ಪ್ರದೇಶದ ಜನರು ಅಭಿವೃದ್ಧಿಗೆ ಮತ ಹಾಕಬೇಕು," ಎಂದು ಹೇಳಿದರು.

"ಚುನಾವಣಾ ಆಯೋಗದ ಎಲ್ಲಾ ಮಾರ್ಗಸೂಚಿಗಳನ್ನು ನಮ್ಮ ಪಕ್ಷ ಅನುಸರಿಸುತ್ತದೆ. ಪಕ್ಷದ ಪದಾಧಿಕಾರಿಗಳ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸುತ್ತೇನೆ. ಅಭ್ಯರ್ಥಿಗಳ ಅಂತಿಮ ಆಯ್ಕೆಗೆ ಸಂಬಂಧಿಸಿದಂತೆ ಈ ಸಭೆಯಲ್ಲಿ ನಿರ್ಧಾರ ಮಾಡಲಾಗುವುದು," ಎಂದು ತಿಳಿಸಿದರು.
ಧರ್ಮದ ದುರುಪಯೋಗದ ಬಗ್ಗೆ ಮಾಯಾವತಿ ಕಳವಳ
ಬಹುಜನ ಸಮಾಜ ಪಕ್ಷದ ವರಿಷ್ಠೆ ಮಾಯಾವತಿ ಚುನಾವಣಾ ಸಮಯದಲ್ಲಿ ರಾಜಕೀಯದಲ್ಲಿ ಹೆಚ್ಚುತ್ತಿರುವ ಧರ್ಮದ ದುರುಪಯೋಗದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನು ತಡೆಗಟ್ಟುವ ಕಾರ್ಯವನ್ನು ಚುನಾವಣಾ ಆಯೋಗ ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ. "ಕಳೆದ ಕೆಲವು ವರ್ಷಗಳಿಂದ ಚುನಾವಣಾ ಸಮಯದಲ್ಲಿ ಧರ್ಮವನ್ನು ಬಳಸಿಕೊಂಡು ಚುನಾವಣಾ ಲಾಭ ಪಡೆಯುವ ಪ್ರಯತ್ನಗಳು ನಡೆಯುತ್ತಿವೆ. ಇದು ಚುನಾವಣೆಯ ಮೇಲೆ ಪರಿಣಾಮ ಬೀರುತ್ತದೆ. ಇಡೀ ದೇಶವೇ ಚಿಂತನೆ ಮಾಡಬೇಕಾದ ವಿಚಾರ ಇದಾಗಿದೆ," ಎಂದರು.
ಫೆಬ್ರವರಿ 10 ರಿಂದ ಉತ್ತರ ಪ್ರದೇಶದಲ್ಲಿ ಏಳು ಹಂತಗಳ ವಿಧಾನಸಭಾ ಚುನಾವಣೆ ನಡೆಯಲಿದ್ದು, ಐದು ರಾಜ್ಯಗಳ ಚುನಾವಣಾ ದಿನಾಂಕಗಳನ್ನು ಚುನಾವಣಾ ಆಯೋಗ ಶನಿವಾರ ಪ್ರಕಟಿಸಿದೆ. ಎಲ್ಲಾ ರಾಜ್ಯಗಳ ಮತ ಎಣಿಕೆ ಮಾರ್ಚ್ 10 ರಂದು ನಡೆಯಲಿದೆ. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3 ಮತ್ತು 7 ರಂದು ಚುನಾವಣೆ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. ಪಂಜಾಬ್, ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ.
ಇನ್ನು ಕೊರೊನಾ ವೈರಸ್ ಸೋಂಕು ಪ್ರಕರಣ ಏರಿಕೆ ಹಿನ್ನೆಲೆಯಿಂದಾಗಿ ಜನವರಿ 15 ರವರೆಗೆ ಯಾವುದೇ ರಾಜಕೀಯ ರ್‍ಯಾಲಿಯನ್ನು ಹಾಗೂ ರೋಡ್‌ಶೋಗಳನ್ನು ಅನುಮತಿಸಲಾಗುವುದಿಲ್ಲ ಎಂದು ಆಯೋಗವು ನಿರ್ದೇಶನ ಮಾಡಿದೆ. 2017ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 312 ವಿಧಾನಸಭಾ ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಗೆಲುವು ಸಾಧಿಸಿದೆ. 403 ಸದಸ್ಯ ಬಲದ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಪಕ್ಷವು 39.67 ರಷ್ಟು ಮತಗಳನ್ನು ಗಳಿಸಿತು. ಸಮಾಜವಾದಿ ಪಕ್ಷ (ಎಸ್‌ಪಿ) 47 ಸ್ಥಾನಗಳನ್ನು ಗೆದ್ದುಕೊಂಡರೆ, ಬಿಎಸ್‌ಪಿ 19 ಸ್ಥಾನಗಳನ್ನು ಗೆದ್ದುಕೊಂಡಿತು. ಕಾಂಗ್ರೆಸ್ ಕೇವಲ 7 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು. (ಒನ್‌ಇಂಡಿಯಾ ಸುದ್ದಿ)












Click it and Unblock the Notifications