'ಪ್ರಸ್ತುತ ದೇಶದಲ್ಲಿ ಬಿಜೆಪಿ ವಿರೋಧಿ ಅಲೆ ಇದೆ': ಅಖಿಲೇಶ್ ಯಾದವ್
ಲಕ್ನೋ, ಡಿಸೆಂಬರ್ 21: "ಆಡಳಿತಾರೂಢ ಬಿಜೆಪಿ ದೇಶದ ರಾಜಕೀಯವನ್ನು ಕಲುಷಿತಗೊಳಿಸುತ್ತಿದೆ. ಈಗ ದೇಶದಲ್ಲಿ ಬಿಜೆಪಿ ವಿರೋಧಿ ಅಲೆ ಇದೆ," ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸೋಮವಾರ ಆರೋಪಿಸಿದ್ದಾರೆ. ಹಾಗೆಯೇ "ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶವು ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಭವಿಷ್ಯವನ್ನು ನಿರ್ಧರಿಸುತ್ತದೆ," ಎಂದಿದ್ದಾರೆ.
"ರಾಜ್ಯ ಮತ್ತು ಕೇಂದ್ರದಲ್ಲಿ ಸರ್ಕಾರ ನಡೆಸುತ್ತಿರುವ ಬಿಜೆಪಿ ವಿರುದ್ಧವಾಗಿ ಈಗ ಅಲೆ ಎದ್ದಿದೆ. ಪ್ರಸ್ತುತ ದೇಶದ ಪ್ರಜಾಪ್ರಭುತ್ವಕ್ಕೆ ಅಪಾಯವಿದೆ. ಪದೇ ಪದೇ ಸುಳ್ಳು ಹೇಳುವ ಮೂಲಕ ಸುಳ್ಳನ್ನೇ ಸತ್ಯ ಎಂದು ಬಿಂಬಿಸುವ ಯತ್ನವನ್ನು ಬಿಜೆಪಿ ಮಾಡುತ್ತಿದೆ. ಇದು ನದಿಗಳನ್ನು ಮಾತ್ರವಲ್ಲದೆ ದೇಶದ ರಾಜಕೀಯವನ್ನೂ ಕಲುಷಿತಗೊಳಿಸಿದೆ," ಎಂದು ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹೇಳಿದರು.
"ಈಗ ಉತ್ತರ ಪ್ರದೇಶ ಮಾತ್ರವಲ್ಲದೇ ಈಡೀ ದೇಶದಲ್ಲೇ ಬಿಜೆಪಿ ವಿರುದ್ಧವಾದ ಅಲೆ ಇದೆ. ಜನರು ಬಿಜೆಪಿಯ ಆಡಳಿತದಿಂದ ಬೇಸತ್ತಿದ್ದಾರೆ. ಈಗ ಬಿಜೆಪಿಯನ್ನು ತೊಡೆದುಹಾಕಲು ಮತ್ತು ಯುಪಿಯಲ್ಲಿ ಸಮಾಜವಾದಿ ಪಕ್ಷಕ್ಕೆ ಅವಕಾಶ ನೀಡಲು ಜನರು ಕಾಯುತ್ತಿದ್ದಾರೆ," ಎಂದು ಕೂಡಾ ಅಖಿಲೇಶ್ ಯಾದವ್ ತಿಳಿಸಿದರು.

ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಿಂದಾಗಿ ಎಲ್ಲಾ ಪಕ್ಷಗಳು ಚುನಾವಣಾ ಕಾರ್ಯವನ್ನು ನಡೆಸುತ್ತಿದೆ. ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಬಿಜೆಪಿ ವಿರುದ್ಧವಾಗಿ ನಿರಂತರ ವಾಗ್ದಾಳಿ ನಡೆಸುತ್ತಲಿದ್ದಾರೆ. "ವಿಧಾನಸಭಾ ಚುನಾವಣೆಯು ರಾಜ್ಯದ ಭವಿಷ್ಯವನ್ನು ಮಾತ್ರವಲ್ಲದೆ ಕೇಂದ್ರ ಸರ್ಕಾರದ ಭವಿಷ್ಯವನ್ನೂ ನಿರ್ಧರಿಸುತ್ತದೆ," ಎಂದು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಹೇಳಿದ್ದಾರೆ.
ಎಸ್‌ಪಿ ನಾಯಕರ ಮೇಲೆ ಐಟಿ ಶೋಧದ ಬಗ್ಗೆ ಅಖಿಲೇಶ್ ಹೇಳಿದ್ದಿಷ್ಟು..
ಯುಪಿಯಲ್ಲಿ ಸಮಾಜವಾದಿ ಪಕ್ಷದ ನಾಯಕರಿಗೆ ಸೇರಿದ ಸ್ಥಳಗಳಲ್ಲಿ ಇತ್ತೀಚೆಗೆ ಆದಾಯ ತೆರಿಗೆ ಇಲಾಖೆ ಶೋಧ ನಡೆಸಿರುವುದನ್ನು ಉಲ್ಲೇಖ ಮಾಡಿ ಮಾತನಾಡಿದ ಅಖಿಲೇಶ್ ಯಾದವ್, "ಸೋಲಿನ ಭಯದಿಂದ ಬಿಜೆಪಿ ಈಗ ತನ್ನ ಸರ್ಕಾರಿ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಸರ್ಕಾರಿ ಸಂಸ್ಥೆಗಳನ್ನು ವಿರೋಧ ಪಕ್ಷಗಳನ್ನು ಹತ್ತಿಕ್ಕಲು ಬಳಸುತ್ತಿದೆ. ಆದರೆ ಇದರಿಂದಾಗಿ ಸಾರ್ವಜನಿಕರಲ್ಲಿ ಬಿಜೆಪಿ ವಿರುದ್ಧವಾಗಿರುವ ಭಾವನೆಯನ್ನು ಹೆಚ್ಚು ಮಾಡಿದೆ. ಜನರು ಇನ್ನು ಮುಂದೆ ಪ್ರಜಾಪ್ರಭುತ್ವ ವಿರೋಧಿ, ಜನವಿರೋಧಿ ಸರ್ಕಾರವನ್ನು ದೀರ್ಘಕಾಲ ಅಧಿಕಾರದಲ್ಲಿ ನೋಡಲು ಬಯಸುವುದಿಲ್ಲ," ಎಂದರು.
"ಸಮಾಜವಾದಿ ರಥಯಾತ್ರೆಗೆ ಸೇರುತ್ತಿರುವ ಜನರು"
"ಜನರು ಈಗ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜವಾದಿ ಪಕ್ಷದ ರಥಯಾತ್ರೆಗೆ ಆಗಮಿಸುತ್ತಿದ್ದಾರೆ," ಎಂದು ಪ್ರತಪಾದನೆ ಮಾಡಿರುವ ಎಸ್‌ಪಿ ನಾಯಕ ಅಖಿಲೇಶ್, "ನಾವು ಮಾಡಿದ್ದನ್ನು ನೋಡಿ ಬಿಜೆಪಿಯು ಇದೇ ರೀತಿಯ ಪ್ರಯತ್ನವನ್ನು ಮಾಡುತ್ತಿದೆ," ಎಂದು ಟೀಕೆ ಮಾಡಿದರು. ಸಮಾಜವಾದಿ ಪಕ್ಷವು ಸಮಾಜವಾದಿ ವಿಜಯ ಯಾತ್ರೆಯನ್ನು ಪ್ರಾರಂಭಿಸಿದೆ. ಇದಾದ ಬೆನ್ನಲ್ಲೇ ಬಿಜೆಪಿಯು ಆರು ರಥಯಾತ್ರೆಗಳ ಸರಣಿಯನ್ನು ಪ್ರಾರಂಭಿಸಿದೆ.
ಮುಂದಿನ ವರ್ಷ ಪಂಜಾಬ್, ಮಣಿಪುರ, ಗೋವಾ, ಉತ್ತರಾಖಂಡ ಹಾಗೂ ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಎಲ್ಲಾ ಪಕ್ಷಗಳು ಪ್ರಚಾರ ಕಾರ್ಯವನ್ನು ನಡೆಸುತ್ತಿದೆ. ಈ ನಡುವೆ ಸಮಾಜವಾದಿ ಪಕ್ಷ ತನ್ನ ಕೈ ತಪ್ಪಿ ಹೋಗಿರುವ ಸರ್ಕಾರವನ್ನು ಮತ್ತೆ ತನ್ನ ಹಿಡಿತಕ್ಕೆ ಪಡೆಯುವ ಯತ್ನದಲ್ಲಿ ಇದೆ. ನಿರಂತರವಾಗಿ ರ್‍ಯಾಲಿ, ಸಭೆಗಳನ್ನು ಸಮಾಜವಾದಿ ಪಕ್ಷವು ನಡೆಸುತ್ತಿದೆ. ಅಖಿಲೇಶ್ ಯಾದವ್ 2012-17ರಲ್ಲಿ ಸಮಾಜವಾದಿ ಪಕ್ಷದ ಸರ್ಕಾರವನ್ನು ಮುನ್ನಡೆಸಿದರು. ಆ ಬಳಿಕ ಯೋಗಿ ಆದಿತ್ಯನಾಥ್ ಅಧಿಕಾರವನ್ನು ಪಡೆದುಕೊಂಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಆದಿತ್ಯನಾಥ್ ಅವರೇ ತಮ್ಮ ಮುಖ ಎಂದು ಬಿಜೆಪಿ ಈಗಾಗಲೇ ಘೋಷಿಸಿದೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications