ಅಯೋಧ್ಯೆಯ ವಿವಾದಿತ ಭೂಮಿಯನ್ನು ಹಿಂದುಗಳಿಗೆ ಬಿಟ್ಟುಕೊಡಿ: ಮುಸ್ಲಿಂ ನಾಯಕ
ಲಕ್ನೋ, ಅಕ್ಟೋಬರ್ 11: ದೇಶದಲ್ಲಿ ಶಾಂತಿಯನ್ನು ಕಾಪಾಡುವ ಸಲುವಾಗಿ ಮುಸ್ಲಿಮರು ಅಯೋಧ್ಯೆಯ ವಿವಾದಿತ ಭೂಮಿಯನ್ನು ಹಿಂದುಗಳಿಗೆ ಬಿಟ್ಟುಕೊಡಬೇಕು ಎಂದು ಮುಸ್ಲಿಂ ನಾಯಕರೊಬ್ಬರು ಹೇಳಿದ್ದಾರೆ.
ಅಕ್ಟೋಬರ್ 18 ರಂದು ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ಗಡುವು ನೀಡಿದ್ದು, ತೀರ್ಪಿನ ದಿನಾಂಕ ಬಹುಶಃ ಅಂದೇ ನಿರ್ಧಾರವಾಗಲಿದೆ.
ಈ ಹಿನ್ನೆಲೆಯಲ್ಲಿ ಮಾತನಾಡಿದ ಅಲಿಗಢ್ ವಿಶ್ವವಿದ್ಯಾಲಯದ(ಎಎಂಯು) ಮಾಜಿ ಉಪಕುಲಪತಿ ಲೆ.ಜ.(ನಿ.) ಜಮೀರ್ ಉದ್ದಿನ್ ಶಾ, "ಒಂದೊಮ್ಮೆ ಸುಪ್ರೀಂ ಕೋರ್ಟ್ ತೀರ್ಪು ಮುಸ್ಲಿಮರ ಪರವಾಗಿ ಬಂದರೆ ಅವರು ವಿವಾದಿತ ಭೂಮಿಯನ್ನು ಹಿಂದು ಬಾಂಧವರಿಗೆ ಉಡುಗೊರೆ ಎಂದು ಬಿಟ್ಟುಕೊಡುವುದು ಉತ್ತಮ. ಅದರಿಂದ ದೇಶದಲ್ಲಿ ಶಾಂತಿ ನೆಲೆಸುತ್ತದೆ. ಈ ಸಮಸ್ಯೆಗೆ ಒಂದು ಪರಿಹಾರ ಬೇಕೇ ಬೇಕು. ಇಲ್ಲವೆಂದರೆ ಈ ಹೋರಾಟ ಎಂದಿಗೂ ಅಂತ್ಯವಾಗುವುದಿಲ್ಲ" ಎಂದರು.

ಈ ವಿಚಾರದಲ್ಲಿ ನ್ಯಾಯಾಲಯವನ್ನು ಹೊರಗಿಟ್ಟು ಸಂಧಾನದ ಮೂಲಕ ಎಲ್ಲವನ್ನೂ ಬಗೆಹರಿಸಿಕೊಳ್ಳುವುದಕ್ಕೆ ನಾನು ಬೆಂಬಲ ಸೂಚಿಸುತ್ತೇನೆ ಎಂದು ಅವರು ಹೇಳಿದರು.
"ಸುಪ್ರೀಂ ಕೋರ್ಟ್ ತೀರ್ಪು ನೀಡುವುದಾದರೆ ಸ್ಪಷ್ಟವಾಗಿ ನೀಡಬೇಕು. ಅದು ಅಡ್ಡಗೋಡೆಯ ಮೇಲೆ ದೀಪ ಇಡುವಂಥ ತೀರ್ಪು ನೀಡಿದರೆ ಈ ವಿವಾದ ಮತ್ತೆ ಮುಂದುವರಿಯುತ್ತದೆ" ಎಂದು ಅವರು ಹೇಳಿದರು.












Click it and Unblock the Notifications