ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಮದರಸಾಗಳ ಸ್ಫೋಟಿಸಲು ಕರೆ: ಯತಿ ವಿರುದ್ಧ ಕೇಸ್
ವಿವಾದಾತ್ಮಕ ಬೋಧಕ ಯತಿ ನರಸಿಂಹಾನಂದ ಸರಸ್ವತಿ ಅವರು ಗನ್ ಪೌಡರ್ ಬಳಸಿ ಮದರಸಾಗಳನ್ನು ಮತ್ತು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯವನ್ನು ಧ್ವಂಸಗೊಳಿಸುವಂತೆ ಕರೆ ನೀಡಿದ ಹೇಳಿಕೆಗಾಗಿ ಪ್ರಕರಣ ದಾಖಲಿಸಲಾಗಿದೆ.
ಯತಿ ನರಸಿಂಹಾನಂದ ಅವರು ಹಿಂದೂ ಮಹಾಸಭಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಭಾನುವಾರ ಅಲಿಘರ್‌ಗೆ ಬಂದಿದ್ದರು. ಉತ್ತರ ಪ್ರದೇಶ ಸರ್ಕಾರದಿಂದ ಮಾನ್ಯತೆ ಪಡೆಯದ ಮದರಸಾಗಳ ಕುರಿತು ನಡೆಯುತ್ತಿರುವ ಸಮೀಕ್ಷೆಯ ಕುರಿತು ಮಾತನಾಡಿದ ಯತಿ ನರಸಿಂಹಾನಂದ, ಮದರಸಾದಂತಹ ಸಂಸ್ಥೆ ಇರಬಾರದು ಎಂದಿದ್ದಾರೆ.
"ಚೀನಾ ಮಾಡುವಂತೆ ಎಲ್ಲಾ ಮದರಸಾಗಳನ್ನು ಗನ್‌ಪೌಡರ್‌ನಿಂದ ಸ್ಫೋಟಿಸಬೇಕು. ಎಲ್ಲಾ ಮದರಸಾಗಳ ವಿದ್ಯಾರ್ಥಿಗಳನ್ನು ಶಿಬಿರಗಳಿಗೆ ಕಳುಹಿಸಬೇಕು, ಇದರಿಂದ ಅವರ ಮೆದುಳಿನಿಂದ ಕುರಾನ್ ಎಂಬ ವೈರಸ್ ಅನ್ನು ತೆಗೆದುಹಾಕಬೇಕು" ಎಂದು ಯತಿ ನರಸಿಂಹಾನಂದರು ವಿಡಿಯೊದಲ್ಲಿ ಹೇಳುವುದನ್ನು ಕೇಳಬಹುದು.
ಮದರಸಾಗಳಂತೆ ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯವನ್ನು (ಎಎಂಯು) ಸ್ಫೋಟಿಸಬೇಕು ಮತ್ತು ಅದರ ವಿದ್ಯಾರ್ಥಿಗಳನ್ನು ಬಂಧನ ಕೇಂದ್ರಗಳಿಗೆ ಕಳುಹಿಸಬೇಕು ಮತ್ತು ಅವರ ಮೆದುಳಿಗೆ ಚಿಕಿತ್ಸೆ ನೀಡಬೇಕು ಎಂದು ಯತಿ ನರಸಿಂಗಾನಂದ ಹೇಳಿದ್ದಾರೆ.

ಮಹಾತ್ಮಾ ಗಾಂಧಿ ವಿರುದ್ಧ ವಿವಾದಾತ್ಮಕ ಹೇಳಿಕೆ
ಯತಿ ನರಸಿಂಹಾನಂದ ಅವರು ದ್ವೇಷಪೂರಿತ ಭಾಷಣದ ಆರೋಪಕ್ಕೆ ಗುರಿಯಾಗುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಹರಿದ್ವಾರ ದ್ವೇಷ ಭಾಷಣ ಪ್ರಕರಣದಲ್ಲಿ ಅವರನ್ನು ಈ ಹಿಂದೆ ಬಂಧಿಸಲಾಗಿತ್ತು. ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.
ಮಹಾತ್ಮಾ ಗಾಂಧಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದಲ್ಲಿ ಯತಿ ನರಸಿಂಹಾನಂದ್ ವಿರುದ್ಧ ಇತ್ತೀಚೆಗೆ ಪ್ರಕರಣ ದಾಖಲಾಗಿತ್ತು. ವೈರಲ್ ಆಗಿರುವ ವಿಡಿಯೊದಲ್ಲಿ, ಯತಿ ನರಸಿಂಹಾನಂದರು "ಒಂದು ಕೋಟಿ ಹಿಂದೂಗಳ ಹತ್ಯೆಗೆ ಮಹಾತ್ಮ ಗಾಂಧಿ ಕಾರಣ" ಎಂದು ಹೇಳಿದ್ದರು. ಜೊತೆಗೆ ಅವರು ಇತರ ವಿಷಯಗಳ ಬಗ್ಗೆ ಹೇಳುವುದನ್ನು ಕೇಳಬಹುದು.

'ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯೊಂದು ತಮಾಷೆ'
ಅಲಿಘರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಯತಿ ನರಸಿಂಹಾನಂದ್ ಅವರು ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯನ್ನು "ತಮಾಷೆ" ಎಂದು ಕರೆದಿದ್ದಾರೆ. "ರಾಹುಲ್ ಗಾಂಧಿ ಜಿಹಾದಿಗಳೊಂದಿಗೆ ಇದ್ದಾರೆ, ಅವರು ಉತ್ತರ ಪ್ರದೇಶದಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ ಮತ್ತು ಕೇರಳಕ್ಕೆ ಹೋಗಿ ವಯನಾಡಿನಿಂದ ಸ್ಪರ್ಧಿಸಿದರು" ಎಂದು ಯತಿ ನರಸಿಂಹಾನಂದ ಹೇಳಿದರು.
"ರಾಹುಲ್ ಗಾಂಧಿ ಭಾರತವನ್ನು ಒಗ್ಗೂಡಿಸಲು ಬಯಸಿದರೆ, ಅವರು ಮಹಾತ್ಮ ಗಾಂಧಿಯವರು ನಿರ್ಮಿಸಿದ ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕೆ ಹೋಗಬೇಕು. ಮೊದಲು ಪಾಕಿಸ್ತಾನ, ಬಾಂಗ್ಲಾದೇಶವನ್ನು ಭಾರತದೊಂದಿಗೆ ಸಂಪರ್ಕಿಸಬೇಕು. ಇದನ್ನು ಮಾಡುವ ಮೂಲಕ ಉಳಿದವರೆಲ್ಲರೂ ಅವರೊಂದಿಗೆ ಸೇರುತ್ತಾರೆ" ಎಂದು ಅವರು ಹೇಳಿದರು.

ಯತಿಯಿಂದ ಮತ್ತೆ ವಿವಾದಾತ್ಮಕ ಹೇಳಿಕೆ
ಹರಿದ್ವಾರ ದ್ವೇಷ ಭಾಷಣ ಪ್ರಕರಣದಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ಧಾರ್ಮಿಕ ಮುಖಂಡ ಯತಿ ನರಸಿಂಹಾನಂದ್ ಏಪ್ರಿಲ್ ನಲ್ಲಿ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ದೆಹಲಿಯ ಬುರಾರಿ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಯತಿ ನರಸಿಂಹಾನಂದ ಅವರು ಹಿಂದೂಗಳು ಶಸ್ತ್ರಾಸ್ತ್ರ ಹಿಡಿಯುವಂತೆ ಪ್ರಚೋದನಕಾರಿ ಭಾಷಣ ಮಾಡಿದ್ದರು. ದೇಶದಲ್ಲಿ ಒಬ್ಬ ಮುಸ್ಲಿಂ ಪ್ರಧಾನಿಯಾದರೆ ಆತನಿಂದ ಧಾರ್ಮಿಕ ಮತಾಂತರ, ಹಿಂಸಾಚಾರದ ಅಪಾಯ ಹೆಚ್ಚುತ್ತದೆ. ಹೀಗಾಗಿ ಹಿಂದೂಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳಬೇಕು ಎಂದು ನರಸಿಂಹಾನಂದರು ಹೇಳಿದ್ದರು.

ಸಮಾಜಕ್ಕೆ ವಿಷ ಉಣಿಸುವ ಹೇಳಿಕೆ
ದ್ವೇಷದ ಹೇಳಿಕೆ ನೀಡಿ ಜೈಲು ಪಾಲಾಗಿ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದರೂ ಯತಿ ನರಸಿಂಹಾನಂದರ ನಾಲಿಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಿಲ್ಲ. ಏಪ್ರಿಲ್‌ನಲ್ಲೇ ಮತ್ತೊಮ್ಮೆ ಸಮಾಜಕ್ಕೆ ವಿಷ ಉಣಿಸುವ ಹೇಳಿಕೆ ನೀಡಿದ್ದರು. ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಮುಬಾರಕ್‌ಪುರದಲ್ಲಿ ಆಯೋಜಿಸಿದ್ದ ಧರ್ಮ ಸಂಸದ್‌ನಲ್ಲಿ ಮಾತನಾಡಿದ್ದ ಅವರು, ಭಾರತ ಇಸ್ಲಾಮಿಕ್ ದೇಶವಾಗದಿರಲು ಹೆಚ್ಚು ಮಕ್ಕಳನ್ನು ಹೊಂದುವಂತೆ ಹಿಂದೂಗಳಿಗೆ ಕೇಳಿಕೊಂಡರು. ದೇಶವನ್ನು ಮುಸ್ಲೀಂ ರಹಿತವಾಗದಂತೆ ಉಳಿಸಲು ಹಿಂದೂಗಳು ಹೆಚ್ಚು ಮಕ್ಕಳನ್ನು ಹೇರಬೇಕು ಎಂದು ಕೇಳಿಕೊಂಡಿದ್ದಾರೆ.












Click it and Unblock the Notifications