ಅಂದು ಸ್ಪರ್ಧಿಸಲ್ಲ ಎಂದು ಇಂದು ಸ್ಪರ್ಧಿಸುವೆ ಎಂದ ಅಖಿಲೇಶ್ ಯಾದವ್
ಲಕ್ನೋ ನವೆಂಬರ್ 17: ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತಾನು ಸ್ಪರ್ಧಿಸುವುದಿಲ್ಲ ಎಂದು ಕೆಲ ದಿನಗಳ ಹೀಂದೆ ಹೇಳಿದ್ದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಬುಧವಾರದಂದು ಉಲ್ಟಾ ಹೊಡೆದಿದ್ದಾರೆ. ಪಕ್ಷ ಬಯಸಿದರೆ ತಾವು ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಎನ್‌ಡಿಟಿವಿಗೆ ಹೇಳಿದ್ದಾರೆ. ಜೊತೆಗೆ ಮುಂಬರುವ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯನ್ನು ಸೋಲಿಸುವುದು ಮೊದಲ ಆದ್ಯತೆಯಾಗಿದೆ ಎಂದು ಅವರು ಹೇಳಿದರು.
ನವೆಂಬರ್ 1 ರಂದು, ಸುದ್ದಿ ಸಂಸ್ಥೆ ಪಿಟಿಐಗೆ ಯಾದವ್ ಅವರು "ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ" ಎಂದು ಹೇಳಿದ್ದರು. ಆದರಿಂದು "ನನ್ನ ಹೇಳಿಕೆಯನ್ನು ತಿರುಚಲಾಗಿದೆ. ಸಮಾಜವಾದಿ ಪಕ್ಷ ನಿರ್ಧರಿಸಿದರೆ ನಾನು ಸ್ಪರ್ಧಿಸುತ್ತೇನೆ" ಎಂದು ಯಾದವ್ ಗಾಜಿಪುರ ಜಿಲ್ಲೆಯಲ್ಲಿ ನಡೆದ ರ್ಯಾಲಿಯಲ್ಲಿ ಬೆಂಬಲಿಗರ ಗುಂಪಿನ ಮುಂದೆ ತಿಳಿಸಿದರು. ಜೊತೆಗೆ ಬಿಜೆಪಿ ಸೋಲುವುದನ್ನು ನಾನು ನೋಡಲು ಬಯಸುತ್ತೇನೆ ಎಂದರು.
ಕೆಲವು ದಿನಗಳ ಹಿಂದಷ್ಟೇ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ 2022ರಲ್ಲಿ ಭಾರತೀಯ ಜನತಾ ಪಕ್ಷದ ಸರ್ಕಾರವನ್ನು ತೆಗೆದು ಹಾಕುವುದೇ ತಮ್ಮ ಮುಖ್ಯ ಉದ್ದೇಶವಾಗಿದೆ,'' ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದರು. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಅವರು, 2022ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಗಳು 400ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
"ಬಿಜೆಪಿ ಸರ್ಕಾರದ ವಿರುದ್ಧದ ನಿರಾಶೆಯನ್ನು ನೋಡಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ಮತದಾರರು ನಮ್ಮ ಪಕ್ಷವನ್ನು 400 ಕ್ಷೇತ್ರಗಳಲ್ಲಿ ಗೆಲ್ಲುವಂತೆ ಮಾಡಬಹುದು. ಬಿಜೆಪಿ ಸರ್ಕಾರವನ್ನು ತೆಗೆದು ಹಾಕುವುದೇ ನಮ್ಮ ಗುರಿ," ಎಂದು ಅಖಿಲೇಶ್ ಯಾದವ್ ಹೇಳಿದ್ದರು. ಆದರೆ ಕೆಲ ದಿನಗಳ ಹಿಂದೆಯಷ್ಟೇ ಅಖಿಲೇಶ್ ಅವರು ಸ್ಪರ್ಧೆಯಿಂದಲೇ ಹಿಂದೆ ಸರಿಯುವ ಮಾತನಾಡಿರುವುದು ಆಶ್ಚರ್ಯ ಮೂಡಿಸಿತ್ತು.
ತಾವು ಅಧಿಕಾರಕ್ಕೆ ಬಂದರೆ ಮಾಡುವ ಜನೋಪಯೋಗಿ ಕಾರ್ಯಗಳ ಬಗ್ಗೆ ಪಕ್ಷಗಳು ಭರವಸೆ ನೀಡುತ್ತಿದೆ. ಈ ನಡುವೆ ಸಮಾಜವಾದಿ ಪಕ್ಷದ ನಾಯಕ, ಮಾಜಿ ಮಖ್ಯಮಂತ್ರಿ ಅಖಿಲೇಶ್ ಯಾದವ್, "ನಾವು ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದರೆ ಹಿಂದುಳಿದ ವರ್ಗದ ಜನರ ಜಾತಿ ಗಣತಿಯನ್ನು ಮಾಡುತ್ತೇವೆ," ಎಂದು ಭರವಸೆಯನ್ನು ನೀಡಿದ್ದಾರೆ.
"ಬಿಜೆಪಿ ಸರ್ಕಾರವು ಹಿಂದುಳಿದ ವರ್ಗದ ಜನರ ಜಾತಿ ಗಣತಿಯನ್ನು ಮಾಡಲು ಬಯಸಲ್ಲ. ಆದರೆ ಉತ್ತರ ಪ್ರದೇಶದಲ್ಲಿ ನಾವು ಗೆಲುವು ಸಾಧಿಸಿ ಅಧಿಕಾರವನ್ನು ಪಡೆಯಲು ನೀವು ಮತವನ್ನು ಹಾಕಿದರೆ, ನಾವು ಹಿಂದುಳಿದ ವರ್ಗದ ಜನರ ಜಾತಿ ಗಣತಿಯನ್ನು ಮಾಡುತ್ತೇವೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ," ಎಂದು ಮುಜಾಫರ್‌ನಗರದಲ್ಲಿ ಉತ್ತರ ಪ್ರದೇಶದ ಮಾಜಿ ಮಖ್ಯಮಂತ್ರಿ ಅಖಿಲೇಶ್ ಯಾದವ್ ಹೇಳಿದ್ದಾರೆ.
"ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ನಡೆಯುವ ಚುನಾವಣೆಯಲ್ಲಿ ನಮ್ಮ ಪಕ್ಷವು ಬೇರೆ ಬೇರೆ ಪಕ್ಷಗಳೊಂದಿಗೆ ಮೈತ್ರಿಯನ್ನು ಮಾಡುತ್ತದೆ. ನಮ್ಮ ಪಕ್ಷದಲ್ಲಿ ಹಲವಾರು ಪಕ್ಷಗಳು ಮೈತ್ರಿ ಮಾಡಿಕೊಳ್ಳಲಿದೆ. ಶೀಘ್ರದಲ್ಲೇ ಈ ಮೈತ್ರಿಯು ನಡೆಯಲಿದೆ. ಈ ಬಿಜೆಪಿ ಸರ್ಕಾರವು ಅಧಿಕಾರದಲ್ಲಿಯೇ ಉಳಿದರೆ, ಜನರಿಂದ ಈ ಬಿಜೆಪಿ ಸರ್ಕಾರ ಎಲ್ಲವನ್ನೂ ಕಸಿದು ಕೊಳ್ಳುತ್ತದೆ," ಎಂದು ದೂರಿದ್ದಾರೆ.
ಈ ವಾರದ ಆರಂಭದಲ್ಲಿ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಪಕ್ಷದ ಹೊಸ ಮಿಷನ್ 2022 ಅನ್ನು ಸಮಾಜವಾದಿ ವಿಜಯ ರಥಯಾತ್ರೆಗೆ ಚಾಲನೆ ನೀಡುವ ಮೂಲಕ ಆರಂಭ ಮಾಡಿದ್ದಾರೆ. ಈ ರಥಯಾತ್ರೆಯು ಉತ್ತರ ಪ್ರದೇಶದ 403 ವಿಧಾನಸಭೆ ಕ್ಷೇತ್ರದಲ್ಲೂ ನಡೆಯಲಿದೆ. 2022 ರಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಹಿನ್ನೆಲೆಯಿಂದಾಗಿ ಈ ರಥಯಾತ್ರೆಯನ್ನು ನಡೆಸಲಾಗುತ್ತಿದೆ. ಇದು ಮೊದಲ ಹಂತದಲ್ಲಿ ಕಾನ್ಪುರ, ಕಾನ್ಪುರ ದೇಹತ್, ಹಮೀರ್‌ಪುರ, ಜಲೌನ್ ಮೂಲಕ ಸಾಗಲಿದೆ. ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ದೌರ್ಜನ್ಯ, ಜನವಿರೋಧಿ ನೀತಿಯ ಬಗ್ಗೆ ಜನರಿಗೆ ಎಚ್ಚರಿಕೆಯನ್ನು ನೀಡುವ ನಿಟ್ಟಿನಲ್ಲಿ ಹಾಗೂ ನಿಜವಾದ ಪ್ರಜಾಪ್ರಭುತ್ವವನ್ನು ಸ್ಥಾಪನೆ ಮಾಡುವ ನಿಟ್ಟಿನಲ್ಲಿ ನಾವು ಕಾರ್ಯ ನಿರ್ವಹಣೆ ಮಾಡುತ್ತೇವೆ ಎಂಬ ದ್ಯೇಯವನ್ನು ಎಸ್‌ಪಿ ಹೊಂದಿದೆ.