2017ರ ಹಳೆ ಜೋಡಿಗೆ ಹೊಸ ಪ್ಯಾಕ್: ಅಖಿಲೇಶ್-ಜಯಂತ್ ವಿರುದ್ಧ ಯೋಗಿ ವಾಕ್ಪ್ರಹಾರ
ಲಕ್ನೋ, ಫೆಬ್ರವರಿ 2: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಅಖಾಡಕ್ಕೆ ಇಳಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ರಾಷ್ಟ್ರೀಯ ಲೋಕ ದಳ ಮುಖ್ಯಸ್ಥ ಜಯಂತ್ ಚೌಧರಿ ವಿರುದ್ಧ ವಾಗ್ದಾಳಿ ನಡೆಸಿದರು.
ಲಕ್ನೋದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, 2013ರ ಮುಜಾಫರ್‌ನಗರ ಗಲಭೆಯಲ್ಲಿ ಅಂದಿನ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಕೂಡ ಭಾಗಿಯಾಗಿದ್ದರು ಎಂದು ಆರೋಪಿಸಿದರು. ಈ ಹಿಂದೆ ಮುಜಾಫರ್‌ನಗರ ಗಲಭೆಯಲ್ಲಿ ಜಾಟ್ ಸಮುದಾಯದವರ ಹತ್ಯೆ ಬಗ್ಗೆ ದೂಷಿಸಿದರು.
2014ರ ರಾಷ್ಟ್ರೀಯ ಚುನಾವಣೆಗಳು ಮತ್ತು 2017ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗಳನ್ನು ಉಲ್ಲೇಖಿಸಿದ ಯೋಗಿ ಆದಿತ್ಯನಾಥ್, ಈ ಜೋಡಿ ಈಗ ಬಂದಿದೆ. ಇಬ್ಬರು ಹುಡುಗರು ಇದೇ ರೀತಿ 2014 ಮತ್ತು 2017ರಲ್ಲಿ ಬಂದಿದ್ದರು ಎಂದರು. ಅಖಿಲೇಶ್ ಯಾದವ್ ಮತ್ತು ಜಯಂತ್ ಚೌಧರಿ 2017ರ ರಾಜ್ಯ ಚುನಾವಣೆಗಳಲ್ಲಿ ಒಟ್ಟಿಗೆ ಹೋರಾಡಿ ವಿಫಲರಾಗಿದ್ದರು. 2017ರಲ್ಲಿ ಅವರು ಯೋಗ್ಯರಾಗಿಲ್ಲ," ಎಂದು ರಾಜ್ಯದ ಜನರು ಅವರಿಗೆ ತಿಳಿಸಿದ್ದರು ಅಂತಾ ಸಿಎಂ ಯೋಗಿ ಹೇಳಿದ್ದಾರೆ.

ಮುಜಾಫರ್‌ನಗರ ಗಲಭೆ ಉಲ್ಲೇಖ:
"ಕಳೆದ 2013ರಲ್ಲಿ ಮುಜಾಫರ್‌ನಗರ ಗಲಭೆ ಸಂಭವಿಸಿದಾಗ ಸಚಿನ್ ಮತ್ತು ಗೌರವ್ ಎಂಬ ಇಬ್ಬರು ಯುವಕರ ಹತ್ಯೆಯಾಗಿತ್ತು. ಈ ಇಬ್ಬರಲ್ಲಿ ಒಬ್ಬರು ಲಕ್ನೋ ಮೂಲದವರಾಗಿದ್ದು, ಅವರು ಕೊಲೆಗೆ ಅಧಿಕಾರದಲ್ಲಿದ್ದವರೂ ಕಾರಣರಾಗಿದ್ದರು. ಯಾರ ಮೇಲೆ ಪ್ರಕರಣವನ್ನು ದಾಖಲಿಸಿ ಕಂಬಿ ಹಿಂದೆ ಕಳುಹಿಸಬೇಕಾಗಿತ್ತೋ ಅಂಥವರನ್ನು ರಾಜ್ಯ ರಾಜಧಾನಿಗೆ ಕರೆಸಿ ಸನ್ಮಾನಿಸಲಾಯಿತು. ದೆಹಲಿಯ ಆ ವ್ಯಕ್ತಿ ಕೂಡ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದರು ಎನ್ನುವ ಮೂಲಕ ಪರೋಕ್ಷವಾಗಿ ರಾಹುಲ್ ಗಾಂಧಿ ವಿರುದ್ಧ ಯೋಗಿ ಆದಿತ್ಯನಾಥ್ ಆರೋಪಿಸಿದರು. ಇಂದು ಮತ್ತೆ ಹಳೆ ಜೋಡಿ ಒಂದಾಗಿದೆ, ಆದರೆ ಪ್ಯಾಕಿಂಗ್ ಮಾತ್ರ ಬದಲಾಗಿದೆ ಎಂದು ಲೇವಡಿ ಮಾಡಿದರು.
ಬಿಹಾರದ ವೈಖರಿಯಲ್ಲೇ ಜೋಡಿ ವಿರುದ್ಧ ವಾಗ್ದಾಳಿ:
ಕಳೆದ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಮತ್ತು ತೇಜಸ್ವಿ ಯಾದವ್ ಮೈತ್ರಿ ವಿರುದ್ಧ ಪ್ರಧಾನಮಂತ್ರಿ ನರೇಂದ್ರ ಮೋದಿ ಇಬ್ಬರು ಯುವರಾಜರು ಎಂದು ವಾಗ್ದಾಳಿ ನಡೆಸಿದ್ದರು. ಅಂದು ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವವನ್ನು ಡಬಲ್ ಇಂಜಿನ್ ಸರ್ಕಾರ ಎನ್ನುವ ಮೂಲಕ ಪ್ರತಿಪಕ್ಷಗಳು ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ್ದವು. ಉತ್ತರ ಪ್ರದೇಶದಲ್ಲಿ ಅದೇ ವೈಖರಿಯಲ್ಲಿ ಈಗ ಅಖಿಲೇಶ್ ಯಾದವ್ ಮತ್ತು ಜಯಂತ್ ಚೌಧರಿ ವಿರುದ್ಧ ಯೋಗಿ ಆದಿತ್ಯನಾಥ್ ವಾಕ್ಪ್ರಹಾರ ನಡೆಸಿದರು.
ಸಮಾಜವಾದಿ ಜೊತೆ ರಾಷ್ಟ್ರೀಯ ಲೋಕ ದಳ ಮೈತ್ರಿ:
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಜಯಂತ್ ಚೌಧರಿ ನೇತೃತ್ವದ ರಾಷ್ಟ್ರೀಯ ಲೋಕ ದಳ (ಆರ್‌ಎಲ್‌ಡಿ) ಪಕ್ಷವು ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದೆ. ಪಶ್ಚಿಮ ಯುಪಿಯಲ್ಲಿ ಜಾಟ್ ನಾಯಕ ಜಯಂತ್ ಚೌಧರಿ ಗಮನಾರ್ಹ ಹಿಡಿತ ಸಾಧಿಸಿದ್ದಾರೆ. ವಿಶೇಷವಾಗಿ ಈ ಪ್ರದೇಶದಲ್ಲಿ ಪ್ರಮುಖ ಮತದಾನದ ಬಣವಾದ ರೈತರ ಪರವಾಗಿ ಜಯಂತ್ ಚೌಧರಿ ಹೋರಾಡುತ್ತಿದ್ದಾರೆ.
ಏಳು ಹಂತಗಳಲ್ಲಿ ನಡೆಯಲಿರುವ ಯುಪಿ ಚುನಾವಣೆ
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, ಫೆಬ್ರವರಿ 14, ಫೆಬ್ರವರಿ 20, ಫೆಬ್ರವರಿ 23, ಫೆಬ್ರವರಿ 27, ಮಾರ್ಚ್ 3 ಮತ್ತು ಮಾರ್ಚ್ 7ರಂದು ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಅಂತಿಮವಾಗಿ ಮಾರ್ಚ್ 10ರಂದು ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ, ಕಾಂಗ್ರೆಸ್ ಮತ್ತು ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷದ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ.
ಈ ಹಿಂದೆ 2017ರಲ್ಲಿ ಉತ್ತರ ಪ್ರದೇಶದಲ್ಲಿ 403 ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಒಟ್ಟು 403 ಕ್ಷೇತ್ರಗಳ ಪೈಕಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಹುಜನ ಸಮಾಜವಾದಿ ಪಕ್ಷವು 19 ಕ್ಷೇತ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿತ್ತು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದ್ದು, ಕೇವಲ ಏಳು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.












Click it and Unblock the Notifications