ಪ್ರವಾದಿ ಮೊಹಮ್ಮದ್ ಬಗ್ಗೆ ವಿವಾದ: ಯುಪಿ ಬಿಜೆಪಿಯ ಹರ್ಷಿತ್ ಶ್ರೀವಾಸ್ತವ ಕೈಗೆ ಕೋಳ
ಲಕ್ನೋ, ಜೂನ್ 8: ಉತ್ತರ ಪ್ರದೇಶದ ಕಾನ್ಪುರದಲ್ಲಿ ಭುಗಿಲೆದ್ದ ಹಿಂಸಾಚಾರದ ನಾಲ್ಕು ದಿನಗಳ ನಂತರ ಪ್ರವಾದಿ ಮುಹಮ್ಮದ್ ಬಗ್ಗೆ ಅವಹೇಳನಕಾರಿ ಟ್ವೀಟ್ ಮಾಡಿದ ಬಿಜೆಪಿ ನಾಯಕನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಬಿಜೆಪಿ ಯುವ ಘಟಕದ ಪದಾಧಿಕಾರಿ ಆಗಿರುವ ಹರ್ಷಿತ್ ಶ್ರೀವಾಸ್ತವ ಮಾಡಿರುವ ಪೋಸ್ಟ್‌ಗಳ ಆಕ್ಷೇಪಾರ್ಹವಾಗಿವೆ. ಆ ಮೂಲಕ ವಾತಾವರಣವನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ದೂಷಿಸಲಾಗಿದೆ.
"ಧಾರ್ಮಿಕ ಭಾವನೆಗಳೊಂದಿಗೆ ಆಟವಾಡಲು ಪ್ರಯತ್ನಿಸುವವರ ವಿರುದ್ಧ ನಾವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತೇವೆ. ಸದ್ಯ ನಾಯಕನ ಟ್ವೀಟ್‌ಗಳನ್ನು ಅಳಿಸಲಾಗಿದೆ" ಎಂದು ಕಾನ್ಪುರ ಪೊಲೀಸ್ ಕಮಿಷನರ್ ವಿಜಯ್ ಮೀನಾ ಹೇಳಿದ್ದಾರೆ.

ಪ್ರಾರ್ಥನೆ ಮುಗಿಯುತ್ತಿದ್ದಂತೆ ಮಾರುಕಟ್ಟೆಯಲ್ಲಿ ಘರ್ಷಣೆ
ಕಳೆದ ಶುಕ್ರವಾರದ ಪ್ರಾರ್ಥನೆಯನ್ನು ಮುಗಿಸಿದ ನಂತರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆಯಿತು. ಅಲ್ಲಿಂದ ಕಾನ್ಪುರದ ಕೆಲವು ಭಾಗಗಳಲ್ಲಿ ಹಿಂಸಾಚಾರ ಪ್ರಾರಂಭವಾಯಿತು, ಜ್ಞಾನವಾಪಿ ಮಸೀದಿಯ ಕುರಿತಾದ ಚರ್ಚೆಯಲ್ಲಿ ಪ್ರವಾದಿ ಮುಹಮ್ಮದ್ ವಿರುದ್ಧ ಹೇಳಿಕೆ ನೀಡಿದ ಬಿಜೆಪಿ ನಾಯಕಿ ನೂಪುರ್ ಶರ್ಮಾ ವಿರುದ್ಧ ಪ್ರತಿಭಟಿಸಿ ಮಾರುಕಟ್ಟೆಯನ್ನು ಮುಚ್ಚುವಂತೆ ಎರಡು ಗುಂಪುಗಳ ಸದಸ್ಯರು ಪರಸ್ಪರ ಕಲ್ಲು ತೂರಾಟ ನಡೆಸಿದವು. ಈ ಹಿಂಸಾಚಾರದಲ್ಲಿ 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ಬಿಜೆಪಿಯಿಂದ ನೂಪುರ್ ಶರ್ಮಾಗೆ ಗೇಟ್ ಪಾಸ್
ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿಯ ವಕ್ತಾರೆ ನೂಪುರ್ ಶರ್ಮಾ ಅನ್ನು ಅಮಾನತುಗೊಳಿಸಲಾಗಿದ್ದು, ದೆಹಲಿ ಘಟಕದ ಮಾಧ್ಯಮ ಮುಖ್ಯಸ್ಥ ನವೀನ್ ಕುಮಾರ್ ಜಿಂದಾಲ್ ಅನ್ನು ಉಚ್ಚಾಟನೆ ಮಾಡಲಾಗಿದೆ. ಆ ಮೂಲಕ ಸಾರ್ವಜನಿಕ ನಡವಳಿಕೆ, ಸಹಿಷ್ಣುತೆ ಮತ್ತು ಇತರರ ಮೇಲಿನ ಹೇಳಿಕೆಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ನಾಯಕರಿಗೆ ನೇರ ಸಂದೇಶವನ್ನು ರವಾನಿಸಲಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ ಜಾಗತಿಕ ಮಟ್ಟದಲ್ಲೂ ಭಾರತದ ವಿರುದ್ದ ಮುಸ್ಲಿಂ ರಾಷ್ಟ್ರಗಳು ಕೆರಳುವಂತೆೆ ಮಾಡಿದೆ. ಈಗಾಗಲೇ ವಿಶ್ವದ 16 ರಾಷ್ಟ್ರಗಳು ಪ್ರವಾದಿ ಮೊಹಮ್ಮದ್ ಬಗ್ಗೆ ನೀಡಿರುವ ವಿವಾದಾತ್ಮಕ ಕಾಮೆಂಟ್‌ಗಳನ್ನು ಖಂಡಿಸಿವೆ.

ಸಿಸಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ಆರೋಪಿಗಳ ಗುರುತು
ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿರುವ ಹಿಂಸಾಚಾರದಲ್ಲಿ ಯಾರು ಯಾರು ಪ್ರಮುಖವಾಗಿ ಭಾಗಿಯಾಗಿದ್ದರು ಎಂಬುದನ್ನು ಗುರುತು ಹಚ್ಚು ಕಾರ್ಯದಲ್ಲಿ ಪೊಲೀಸರು ತೊಡಗಿಸಿದ್ದಾರೆ. ಈ ಸಂಬಂಧ ಈಗಾಗಲೇ 40 ಚಿತ್ರಗಳ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿದ್ದು ಆಗಿದೆ. ಈಗ ಸಿಸಿಟಿವಿ ಮತ್ತು ಮೊಬೈಲ್ ಫೋನ್‌ಗಳಲ್ಲಿ ಸೆರೆಯಾಗಿರುವ ಘಟನೆ ಸೇರಿದಂತೆ ಹಲವು ವಿಡಿಯೋಗಳ ಮೂಲಕ ಆರೋಪಿಗಳ ಚಿತ್ರಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಈ ಸಾಕ್ಷ್ಯಗಳನ್ನು ಆಧರಿಸಿ ಆರೋಪಿಗಳನ್ನು ಬಂಧಿಸಲು ಸ್ಕೆಚ್ ಹಾಕಲಾಗುತ್ತಿದೆ.

ಕಾನ್ಪುರ್ ಪ್ರಕರಣದಲ್ಲಿ 1500 ಜನರ ವಿರುದ್ಧ ಎಫ್ಐಆರ್
ಕಾನ್ಪುರ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ. ಪ್ರಮುಖ ಆರೋಪಿ ಜಾಫರ್ ಹಯಾತ್ ಸೇರಿದಂತೆ 50ಕ್ಕೂ ಹೆಚ್ಚು ಜನರನ್ನು ಈಗಾಗಲೇ ಬಂಧಿಸಲಾಗಿದೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ 1,500 ಕ್ಕೂ ಹೆಚ್ಚು ಹೆಸರು ಮತ್ತು ಹೆಸರಿಸದ ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹಿಂಸಾಚಾರದ ಪ್ರಮುಖ ಸೂತ್ರದಾರ ಎನಿಸಿರುವ ಹಯಾತ್ ಜಫ್ಫರ್ ಹಶ್ಮಿ, ಜಾವೇದ್ ಅಹಮದ್ ಖಾನ್, ಮೊಹಮದ್ ರಾಯಿಲ್ ಮತ್ತು ಮೊಹಮದ್ ಸುಫಿಯಾನ್ ಅನ್ನು ಕಾನ್ಪುರ್ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಗಲಭೆಗೆ ಸಂಬಂಧಿಸಿದಂತೆ ಪಾಪ್ಯಲರ್ ಫ್ರಾಂಟ್ ಆಫ್ ಇಂಡಿಯಾ ಸಂಘಟನೆಯ ಪಾತ್ರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ












Click it and Unblock the Notifications