ವಿಶ್ವಾಸಮತ ಗೆದ್ದ ತೆರೆಸಾ ಮೇ, ಉಳಿದ ಬ್ರಿಟನ್ ಸರ್ಕಾರ
ಲಂಡನ್, ಜನವರಿ 17: ಬ್ರಿಟನ್‌ನ ಕಾರ್ಮಿಕ ಪಕ್ಷವು ಪ್ರಧಾನಿ ತೆರೆಸಾ ಮೇ ವಿರುದ್ಧ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲಾಗಿದ್ದು. ತೆರೆಸಾ ಮೇ ವಿಜಯ ಸಾಧಿಸಿದ್ದಾರೆ.
ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವ ಬ್ರಿಕ್ಸೆಟ್ ಒಪ್ಪಂದ ಕಳೆದ ವರ್ಷ ಮಾರ್ಚ್ ನಲ್ಲಿ ಆಗಿತ್ತು. ಆದರೆ ಇದಕ್ಕೆ ಬ್ರಿಟನ್ ಸಂಸತ್ತಿನ ಒಮ್ಮತ ಇರಲಿಲ್ಲ. ಈ ಒಪ್ಪಂದಕ್ಕೆ ಸಂಸತ್ತಿನಲ್ಲಿ ಸೋಲಾಗಿತ್ತು. ಹಾಗಾಗಿ ವಿರೋಧ ಪಕ್ಷಗಳು ತೆರೆಸಾ ಮೇ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದವು.

ಪ್ರಧಾನಿ ತೆರೆಸಾ ವಿರುದ್ಧ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಇಂದು ಬ್ರಿಟನ್ ಸಂಸತ್ತಿನಲ್ಲಿ ಮತದಾನ ನಡೆದು ಸುಲಭವಾಗಿ ತೆರೆಸಾ ಮೇ ಅವರು ವಿಶ್ವಾಸಮತಗಳನ್ನು ಗಳಿಸಿದ್ದಾರೆ. ಕಾರ್ಮಿಕ ಪಕ್ಷ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲಾಗಿದೆ.
ಪ್ರಧಾನಿ ತೆರೆಸಾ ಮೇ ಅವರು 325-306 ವಿಶ್ವಾಸಮತ ಪಡೆದು, 19 ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಆ ಮೂಲಕ ಸರ್ಕಾರವನ್ನು ಉಳಿಸಿಕೊಂಡಿದ್ದಾರೆ. ಮೇ ಅವರ ಕನ್ಸರ್ವೇಟಿವ್ ಪಕ್ಷ ಮತ್ತು ಡೆಮಾಕ್ರಟಿಕ್ ಯೂನಿಯನ್ ಪಕ್ಷದ ಸದಸ್ಯರು ಮೇ ಪರ ಮತ ಚಲಾಯಿಸಿದ್ದಾರೆ.
ನಿನ್ನೆಯಷ್ಟೆ (ಜನವರಿ 16)ರಂದು ಇದೇ ಬ್ರಿಟನ್ ಸಂಸತ್ತಿನಲ್ಲಿ ಸರ್ಕಾರ ಮಂಡಿಸಿದ ಬ್ರಿಕ್ಸೆಟ್ ಒಪ್ಪಂದಕ್ಕೆ ಭಾರಿ ಸೋಲಾಗಿತ್ತು. ಹಾಗಾಗಿ ಇಂದು ತೆರೆಸಾ ಮೇ ಗೂ ಸೋಲು ಎದುರಾಗುವ ಭೀತಿ ಇತ್ತು. ಆದರೆ ಅವರು ಗೆದ್ದಿದ್ದಾರೆ.
ಜನವರಿ 15ರಂದು ಪ್ರಧಾನಿ ತೆರೇಸಾ ಮೇ ಅವರು ಬ್ರೆಕ್ಸಿಟ್ ಒಪ್ಪಂದ ಪರ ಮತ ಹಾಕುವಂತೆ ಹೌಸ್ ಆಫ್ ಕಾಮನ್ಸ್ ನಲ್ಲಿ ನಿರ್ಣಯ ಮಂಡಿಸಿದ್ದರು. ಇದನ್ನು ಅನುಮೋದಿಸಿ 202 ಮಂದಿ ಮತ ಬಂದಿತ್ತು, 432 ಮಂದಿ ಇದನ್ನು ವಿರೋಧಿಸಿ ಮತ ಚಲಾಯಿಸಿದ್ದಾರೆ. ಹೀಗಾಗಿ, 230ಕ್ಕೂ ಅಧಿಕ ಮತಗಳ ಅಂತರದಲ್ಲಿ ಸರ್ಕಾರಕ್ಕೆ ಮುಖಭಂಗವಾಗಿತ್ತು.
ಅವಿಶ್ವಾಸ ನಿರ್ಣಯದ ವಿರುದ್ಧ ಗೆದ್ದಿರುವ ತೆರೆಸಾ ಮೇ ಅವರು, 'ಸೋಮವಾರದಂದು ಹೊಸ ಮಾದರಿಯ ಬ್ರಿಕ್ಸೆಟ್ ಒಪ್ಪಂದದೊಂದಿಗೆ ಸಂಸತ್ತಿಗೆ ಆಗಮಿಸುವುದಾಗಿ' ಹೇಳಿದ್ದಾರೆ.












Click it and Unblock the Notifications