ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ಪ್ರಾರಂಭಿಸುವ ಬಗ್ಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೀಗ್ ಅಂದ್ಬಿಟ್ರು
ಕೊಪ್ಪಳ, ಮಾರ್ಚ್, 03: ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ಆರಂಭಕ್ಕೆ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಸೇರಿ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಒಂದು ದಿನ ಕೊಪ್ಪಳ ನಗರ ಬಂದ್ಗೆ ಕರೆ ನೀಡಲಾಗಿತ್ತು. ನಿನ್ನೆ ಅಂದರೆ ಭಾನುವಾರ ಕೊಪ್ಪಳ ನಗರಕ್ಕೆ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಭೇಟಿ ನೀಡಿದ್ದು, ಈ ವೇಳೆ ಕೊಪ್ಪಳದಲ್ಲಿ ಕಾರ್ಖಾನೆ ಆರಂಭಿಸದಂತೆ ಸ್ಥಳೀಯರು ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ಇದು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ್ದಲ್ಲ. ಬಲ್ಡೋಟಾ ಕಾರ್ಖಾನೆ ರಾಜ್ಯ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡಿದೆ. ಕೇಂದ್ರ ಸರ್ಕಾರದ ಮುಂದೆ ಈ ಪ್ರಸ್ತಾವನೆ ಬಂದಿಲ್ಲ ಎಂದು ಹೇಳಿದರು. ಅಲ್ಲದೆ, ನಾನು ರಾಜ್ಯ ಸರ್ಕಾರಕ್ಕೆ ಜನರಿಗೆ ತೊಂದರೆಯಾಗುವ ಯೋಜನೆ ಬೇಡ ಎಂದು ಹೇಳಿದ್ದೇನೆ. ಗವಿಮಠದ ಶ್ರೀಗಳ ನೇತೃತ್ವದಲ್ಲಿ ಪಕ್ಷಬೇಧ ಮರೆತು ಬಂದ್ ಮಾಡಿದ್ದಾರೆ. ಈ ವಿಚಾರಕ್ಕೆ ಜನರ ಜೊತೆ ಸರ್ಕಾರ ಚರ್ಚೆ ಮಾಡಬೇಕೆಂದು ಹೇಳಿದರು.

ಸ್ಟೀಲ್ ತಯಾರಿಸುವಂತ ದೇಶದ ಹಲವಾರು ದೊಡ್ಡ ಕಾರ್ಖಾನೆಗಳಿಗೆ ಭೇಟಿ ನೀಡಿದ್ದೇನೆ. ಅಲ್ಲಿ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಕ್ರಮ ಕೈಗೊಂಡಿದ್ದಾರೆ. 30 ರಿಂದ 35 ಸಾವಿರ ಎಕರೆ ಪ್ರದೇಶದಲ್ಲಿ ಉಕ್ಕಿನ ಕಾರ್ಖಾನೆ ಮಾಡಿದ್ದಾರೆ. ಅಲ್ಲಿ ಟೌನ್ ಶಿಪ್ ನಿರ್ಮಾಣ ಮಾಡಿದ್ದಾರೆ. ಅದೇ ರೀತಿಯಲ್ಲಿ ಆಯಾ ರಾಜ್ಯ ಸರ್ಕಾರಗಳು ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು. ಯಾವುದೇ ಸರ್ಕಾರವಾಗಲಿ ಜನಸಾಮಾನ್ಯರಿಗೆ ತೊಂದರೆ ಆಗದ ರೀತಿಯಲ್ಲಿ ಕ್ರಮ ಜರುಗಿಸಬೇಕೆಂದಿದ್ದಾರೆ. ಕೈಗಾರಿಕೆಗಳಿಗೆ ಕೇಂದ್ರದ ಒಂದು ನೀತಿಯಿದ್ದು, ಅದು ಉಲ್ಲಂಘನೆ ಆಗದಂತೆ ಕ್ರಮ ವಹಿಸಬೇಕು ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳನ್ನು ಪ್ರಚಾರ ಮಾಡುವುದು ಹಾಗೂ ಕೇಂದ್ರ ಸರ್ಕಾರವನ್ನು ದೂಷಣೆ ಮಾಡುವ ಈ ಎರಡು ಕೆಲಸ ಬಿಟ್ಟು ರಾಜ್ಯ ಸರ್ಕಾರ ಬೇರೆ ಏನು ಮಾಡುತ್ತಿಲ್ಲ. ಕಲ್ಯಾಣ ಕರ್ನಾಟಕಕ್ಕೆ ಕಳೆದ ವರ್ಷದ ಬಜೆಟ್‌ನಲ್ಲಿ 5 ಸಾವಿರ ಕೋಟಿ ರೂಪಾಯಿ ಕೊಟ್ಟರೂ ಯಾವುದೇ ಹಣ ಬಿಡುಗಡೆ ಮಾಡಲಿಲ್ಲ. ಈ ಬಾರಿಯೂ ಘೋಷಣೆಗೆ ಮಾತ್ರ ಸೀಮಿತ ಆಗಲಿದೆ ಎಂದರು.
ರಾಜ್ಯದಲ್ಲಿ ರಾಜಕೀಯ ಬೆಳವಣಿಗೆ ನಿರಂತರವಾಗಿ ನಡೆಯಲಿವೆ. ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡುವುದನ್ನು ಬಿಟ್ಟು ರಾಜ್ಯ ಸರ್ಕಾರದಿಂದ ಬೇರೇನನ್ನೂ ನಿರೀಕ್ಷೆ ಮಾಡಲು ಸಾಧ್ಯ ಇಲ್ಲ. ಸರಕಾರದ ಖಜಾನೆಯಲ್ಲಿ ಹಣ ಎಲ್ಲಾ ಖಾಲಿ ಆಗಿದೆ. ಹಣ ದುರ್ಬಳಕೆ ಹಾಗೂ ಸೋರಿಕೆ ಆಗುತ್ತಿರುವುದರಿಂದ ಅಭಿವೃದ್ಧಿ ಕಾರ್ಯಕ್ರಮಗಳು ಹಳ್ಳ ಹಿಡಿದಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ರಾಜ್ಯದ ಜನತೆ ಸರ್ಕಾರದ ಖಜಾನೆ ತುಂಬಿಸುವ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಸರ್ಕಾರದಲ್ಲಿ ಹಣದ ಕೊರತೆ ಆಗಿಲ್ಲ. ಆದರೆ, ಗ್ಯಾರಂಟಿ ಯೋಜನೆಗಳ ನೆಪ ಮುಂದಿಟ್ಟುಕೊಂಡು ಸೋರಿಕೆ ಮಾಡಲಾಗುತ್ತಿದೆ ಎಂದು ಆರೋಪ ಮಾಡಿದರು.












Click it and Unblock the Notifications