ಮಕ್ಕಳಿಗೆ ಮೊಟ್ಟೆ ಕೊಟ್ಟು ವಿಡಿಯೋ ಮಾಡಿ ವಾಪಸ್ ಕಸಿದುಕೊಳ್ಳುವ ಅಂಗನವಾಡಿ ಸಿಬ್ಬಂದಿ
ಕೊಪ್ಪಳ, ಆಗಸ್ಟ್ 10: ರಾಜ್ಯ ಸರ್ಕಾರದಿಂದ ಎಷ್ಟೇ ಸವಲತ್ತುಗಳು ಬಂದರೂ ಸಹ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಯಿಂದ ಫಲಾನುಭವಿಗಳಿಗೆ ತಲುಪುದಿಲ್ಲ ಎನ್ನುವ ಆರೋಪ ಮೊದಲಿನಿಂದಲೂ ಕೇಳಿ ಬರುತ್ತಿದೆ. ದೊಡ್ಡ ಮಟ್ಟದ ಪರಿಹಾರದಿಂದ ಹಿಡಿದು ಅಂಗನವಾಡಿ ಮಕ್ಕಳಿಗೆ ನೀಡುವ ಉಚಿತ ಆಹಾರದವರೆಗೂ ಈ ಗೋಲ್‌ಮಾಲ್ ನಡೆಯುತ್ತದೆ ಎನ್ನುವ ಆರೋಪವಿದ್ದು, ಇದಕ್ಕೆ ಸಾಕ್ಷಿ ಎನಿಸಿರುವ ಘಟನೆಗಳು ಕೂಡ ರಾಜ್ಯದಲ್ಲಿ ನಡೆಯುತ್ತಲೇ ಇರುತ್ತದೆ.
ಅನೇಕ ಇಂತಹ ಗೋಲ್‌ಮಾಲ್‌ಗಳು ಸಾಮಾಜಿಕ ಜಾಲತಾಣಗಳ ಮೂಲಕ ಬೆಳಕಿಗೆ ಬರುತ್ತದೆ. ಇತ್ತೀಚಿಗೆ ಕೊಪ್ಪಳದ ಅಂಗನವಾಡಿಯೊಂದರ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಈ ವಿಡಿಯೋ ಅನೇಕರ ಆಕ್ರೋಶಕ್ಕೆ ಕಾರಣವಾಗಿತ್ತು. ಏನು ಅರಿಯದ ಮಕ್ಕಳ ಆಸೆಗೆ ತಣ್ಣೀರೆರಚುವ ಹಾಗೂ ಹೊಟ್ಟೆಗೆ ಮೋಸ ಮಾಡುತ್ತಿದ್ದ ಸಿಬ್ಬಂದಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ವ್ಯಾಪಕ ಆಗ್ರಹ ಕೇಳಿಬಂದಿತ್ತು.

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಗುಂಡೂರು ಗ್ರಾಮದ ಅಂಗನವಾಡಿ ಶಾಲೆಯ ಕಾರ್ಯಕರ್ತೆ ಹಾಗೂ ಸಿಬ್ಬಂದಿ ಅಂಗನವಾಡಿ ಮಕ್ಕಳಿಗೆ ಕೊಡುವ ಮೊಟ್ಟೆಯಲ್ಲಿ ವಂಚನೆ ಮಾಡುತ್ತಿದ್ದರು. ಇದಕ್ಕೆ ಸಾಕ್ಷಿ ಎನ್ನುವಂತೆ ಮಕ್ಕಳ ವಿಡಿಯೋ ವೈರಲ್ ಆಗಿದ್ದು, ಗುಂಡೂರು ಗ್ರಾಮದ ಅಂಗನವಾಡಿ ಶಾಲೆಯ ಕಾರ್ಯಕರ್ತೆ ಹಾಗೂ ಅಡುಗೆ ಸಿಬ್ಬಂದಿಯನ್ನು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಆದೇಶ ಹೊರಡಿಸಿದ್ದಾರೆ.
ವೈರಲ್ ಆದ ವಿಡಿಯೋದಲ್ಲಿರುವುದೇನು..?
ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಗುಂಡೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗುಂಡೂರು ಗ್ರಾಮದ ಅಂಗನವಾಡಿಯಲ್ಲಿ ಹತ್ತಕ್ಕಿಂತಲೂ ಕಡಿಮೆ ಸಂಖ್ಯೆ ಮಕ್ಕಳಿದ್ದಾರೆ. ಆದರೆ ಈ ಅಂಗನವಾಡಿಯ ಸಿಬ್ಬಂದಿ ಇರುವ ಕೆಲವೇ ಕೆಲವು ಮಕ್ಕಳ ಊಟದಲ್ಲಿ ಗೋಲ್‌ಮಾಲ್ ಮಾಡಿದ್ದಾರೆ.
ವಿಡಿಯೋದಲ್ಲಿ ಅಂಗನವಾಡಿ ಶಾಲೆಯ ಸಿಬ್ಬಂದಿ ಮೊದಲು ಊಟಕ್ಕಾಗಿ ಕುಳಿತಿದ್ದ ಮಕ್ಕಳಿಗೆ ಮೊಟ್ಟೆ ಕೊಟ್ಟು ಫೋಟೋ ಹಾಗೂ ವಿಡಿಯೋ ತೆಗೆಯುತ್ತಾರೆ. ಜೊತೆಗೆ ಪ್ರಾರ್ಥನೆ ಕೂಡ ಹೇಳಿಸುತ್ತಾರೆ. ಪ್ರಾರ್ಥನೆ ಮುಗಿಯುತ್ತಿದ್ದಂತೆ ಮಕ್ಕಳು ಆಸೆಯಿಂದ ಮೊಟ್ಟೆ ತಿನ್ನಲು ತಟ್ಟೆಗೆ ಕೈ ಹಾಕಿದಾಗ ಅಡುಗೆ ಸಿಬ್ಬಂದಿ ಮರಳಿ ಮಕ್ಕಳ ಕೈಯಿಂದ ಮೊಟ್ಟೆ ಕಸಿದುಕೊಳ್ಳುತ್ತಾರೆ. ಮೊಟ್ಟೆ ತಿನ್ನಬೇಕು ಎಂದುಕೊಂಡಿದ್ದ ಮಕ್ಕಳು ನಿರಾಸೆಯಿಂದ ತಗೆ ತಗ್ಗಿಸುತ್ತವೆ.

ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಮಕ್ಕಳ ಊಟದಲ್ಲಿ ವಂಚನೆ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ. ಸದ್ಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಗುಂಡೂರು ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯನ್ನು ಅಮಾನತು ಮಾಡಿದ್ದು, ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications