ಕೊಪ್ಪಳ; ಹಾಸ್ಟೆಲ್‌ಗಳಿಗೆ ಉಪ ಲೋಕಾಯುಕ್ತರ ದಿಢೀರ್ ಭೇಟಿ
ಕೊಪ್ಪಳ, ಅಕ್ಟೋಬರ್ 09; ಕೊಪ್ಪಳ ಜಿಲ್ಲಾ ಪ್ರವಾಸದಲ್ಲಿದ್ದ ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ. ಎನ್. ಫಣೀಂದ್ರ ಭಾನುವಾರ ಸಂಜೆ ವೇಳೆ ಕೊಪ್ಪಳ ನಗರದ ವಿವಿಧ ಇಲಾಖೆಗಳ ವಸತಿ ನಿಲಯಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಸಿ. ಚಂದ್ರಶೇಖರ, ಕರ್ನಾಟಕ ಲೋಕಾಯುಕ್ತ ಬೆಂಗಳೂರಿನ ವಿಚಾರಣೆಯ ಉಪ ನಿಬಂಧಕರಾದ ಎಂ. ವಿ. ಚನ್ನಕೇಶವ ರೆಡ್ಡಿ, ಹೆಚ್ಚುವರಿ ನಿಬಂಧಕರಾದ ಸುದೇಶ ರಾಜಾರಾಂ ಪರದೇಶಿ, ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿಗಳಾದ ಕಿರಣ್ ಪ್ರಹ್ಲಾದ್ ರಾವ್ ಮುಂತಾದ ಅಧಿಕಾರಿಗಳು ಸಹ ಜೊತೆಗಿದ್ದರು.

ಉಪ ಲೋಕಾಯುಕ್ತರು ಮೊದಲು ಡಾಲರ್ಸ್ ಕಾಲೋನಿ ಹತ್ತಿರದಲ್ಲಿನ ಬಿಸಿಎಂ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿದರು. ಬಳಿಕ ಕಿನ್ನಾಳ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಸಹ ಭೇಟಿ ಕೊಟ್ಟರು.
ಸ್ವಚ್ಛತೆ ಬಗ್ಗೆ ಅಸಮಾಧಾನ; ಬಿಸಿಎಂ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿದ ಉಪ ಲೋಕಾಯುಕ್ತರು ಅಡುಗೆ ಕೋಣೆ, ಆಹಾರ ದಾಸ್ತಾನು ಕೋಣೆ, ವಿದ್ಯಾರ್ಥಿಗಳ ವಸತಿ ಗೃಹ ಪರಿಶೀಲಿಸಿದರು.
ಅಧಿಕಾರಿಗಳು, ವಾರ್ಡನ್, ಅಡುಗೆದಾರರು ಮತ್ತು ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು. ವಸತಿ ನಿಲಯದಲ್ಲಿ ನಮಗೆ ಕುಡಿಯುವ ನೀರು ಸಮರ್ಪಕವಾಗಿ ಸಿಗುತ್ತಿಲ್ಲ, ವಸತಿ ನಿಲಯ ಇಕ್ಕಟ್ಟಾಗಿರುವುದರಿಂದ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಾಗಿ, ಒಂದೇ ಕೋಣೆಯಲ್ಲಿ ಬಹಳಷ್ಟು ವಿದ್ಯಾರ್ಥಿನಿಯರು ಇರುವುದರಿಂದ ಅಭ್ಯಾಸ ಮಾಡಲು ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ಹೇಳಿದರು.
ವಿದ್ಯಾರ್ಥಿ ನಿಲಯದಲ್ಲಿರುವ ಕೆಲವು ಅಡುಗೆದಾರರು ಸರಿಯಾಗಿ ಸ್ಪಂದಿಸುವುದಿಲ್ಲ. ಬಟ್ಟೆ ತೊಳೆಯುವ ಸ್ಥಳದಲ್ಲಿ ಗಲೀಜು ತುಂಬಿದೆ. ಕೆಲವು ಸೌಲಭ್ಯಗಳನ್ನು ಸಮರ್ಪಕವಾಗಿ ನೀಡುತ್ತಿಲ್ಲ ಎಂದು ವಿದ್ಯಾರ್ಥಿಗಳು ತಿಳಿಸಿದರು. ವಸತಿ ನಿಲಯದ ಹೊರಾಂಗಣದ ಸುತ್ತಲೂ ಸ್ವಚ್ಛತೆ ಇಲ್ಲದಿರುವುದನ್ನು ನೋಡಿ ಉಪ ಲೋಕಾಯುಕ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳು ನಮಗೆ ಮಲಗಲು ಬೆಡ್ ವ್ಯವಸ್ಥೆ ಇಲ್ಲ. ಸ್ನಾನಕ್ಕೆ ಬಿಸಿ ನೀರು ಇಲ್ಲ. ಪುಸ್ತಕ ಇಲ್ಲ. ಸಾರು ನೀರಿನಂತಿರುತ್ತದೆ ಎಂದು ಸಮಸ್ಯೆಗಳ ಪಟ್ಟಿಯನ್ನು ತೆರೆದಿಟ್ಟರು.
ಕಿಟಕಿ, ಬಾಗಿಲು, ಆಹಾರ ದಾಸ್ತಾನು ಗಮನಿಸಿ ಅಸಮಧಾನ ವ್ಯಕ್ತಪಡಿಸಿದ ಉಪ ಲೋಕಾಯುಕ್ತರು, "ಮಕ್ಕಳು ತಾವೇ ಕಸ ಹೊಡೆದು, ಧೂಳು ಸರಿಸಿ ಕೂಡುವ ವ್ಯವಸ್ಥೆ ಬದಲಾಗಬೇಕು. ಆಹಾರದಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಸಮರ್ಪಕ ವ್ಯವಸ್ಥೆ ಮಾಡಬೇಕು" ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು.
ವಸತಿ ನಿಲಯಗಳಲ್ಲಿನ ಅವ್ಯವಸ್ಥೆಯ ಬಗ್ಗೆ ಉಪಲೋಕಾಯುಕ್ತರು ಕೊಪ್ಪಳ ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ರತ್ನಂ ಪಾಂಡೆ ಅವರ ಜೊತೆ ಚರ್ಚಿಸಿದರು. ಇದನ್ನು ಸರಿಪಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಬೇಕು. ಕೂಡಲೇ ಎಲ್ಲಾ ವ್ಯವಸ್ಥೆಯನ್ನು ಸರಿಪಡಿಸಲು ಕ್ರಮ ವಹಿಸಬೇಕು. ಕಾಲಕಾಲಕ್ಕೆ ವಸತಿ ನಿಲಯಗಳಿಗೆ ಭೇಟಿ ನೀಡಿ ಮೇಲ್ವಿಚಾರಣೆ ನಡೆಸಬೇಕು ಎಂದು ಸೂಚಿಸಿದರು.
ಉಪ ಲೋಕಾಯುಕ್ತರು ವಿದ್ಯಾರ್ಥಿಗಳ ಜೊತೆ ಮಾತನಾಡಿ, "ಸರಿಯಾಗಿ ಅಧ್ಯಯನ ಮಾಡಿ ನೌಕರಿ ಪಡೆದುಕೊಳ್ಳಬೇಕು. ಸಮಾಜಕ್ಕೆ ಏನಾದರು ಕೊಡುಗೆ ಕೊಡಬೇಕು. ಪ್ರಾಮಾಣಿಕವಾದ ಜೀವನ ನಡೆಸಬೇಕು. ಯಾರಿಗೂ ಲಂಚಕೊಡಬಾರದು. ಲಂಚ ತೆಗೆದುಕೊಳ್ಳಬಾರದು" ಎಂದು ಸಲಹೆ ಮಾಡಿದರು.
ವಸತಿ ನಿಲಯದಲ್ಲಿ ಸ್ಪರ್ಧಾತ್ಮಕ ಪುಸ್ತಕಗಳು ಇಲ್ಲ ಎಂದು ವಿದ್ಯಾರ್ಥಿನಿಯರು ಉಪ ಲೋಕಾಯುಕ್ತರ ಎದುರು ತಮ್ಮ ಅಹವಾಲು ಸಲ್ಲಿಕೆ ಮಾಡಿದರು. "ವಸತಿ ನಿಲಯದ ವಿದ್ಯಾರ್ಥಿಗಳ ಕೋರಿಕೆಯನ್ನು ಪರಿಗಣಿಸಿ, ಯೋಜನೆಯಲ್ಲಿ ಅವಕಾಶ ಕಲ್ಪಿಸಿ ಸ್ಪರ್ಧಾತ್ಮಕ ಪುಸ್ತಕಗಳನ್ನು ಖರೀದಿಸಿ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಪೂರೈಸುವುದಾಗಿ" ನಗರಸಭೆ ಪೌರಾಯುಕ್ತ ಗಣಪತಿ ಪಾಟೀಲ ಉಪ ಲೋಕಾಯುಕ್ತರಿಗೆ ತಿಳಿಸಿದರು.












Click it and Unblock the Notifications